Asianet Suvarna News Asianet Suvarna News

ಮುಂಬರುವ ಕಷ್ಟಕರ ಸಮಯಕ್ಕೆ ಸಿದ್ಧರಾಗಿ: ಟ್ವಿಟ್ಟರ್‌ ಸಿಬ್ಬಂದಿಗೆ ಇ - ಮೇಲ್ ಕಳಿಸಿದ Elon Musk..!

ಟ್ವಿಟ್ಟರ್‌ನಲ್ಲಿ ಈವರೆಗೆ ಇದ್ದ ರಿಮೋಟ್‌ ಕೆಲಸ ಅಥವಾ ವರ್ಕ್‌ ಫ್ರಮ್‌ ಎನಿವೇರ್‌ ನೀತಿಗೆ ಇನ್ಮುಮದೆ ಅನುಮತಿ ಇಲ್ಲ. ಪ್ರತಿ ಸಿಬ್ಬಂದಿಯೂ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ ಇರಬೇಕೆಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. 

elon musk ends remote work in first email to twitter staff ash
Author
First Published Nov 10, 2022, 8:13 PM IST

ಎಲಾನ್‌ ಮಸ್ಕ್‌ (Elon Musk) ಟ್ವಿಟ್ಟರ್‌ (Twitter) ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ನಾನಾ ಕಾರಣಗಳಿಗೆ ಸುದ್ಧಿಯಾಗುತ್ತಿದೆ. ಇತ್ತೀಚೆಗೆ ಸಾವಿರಾರು ಸಿಬ್ಬಂದಿಗೆ ಟ್ವಿಟ್ಟರ್‌ ಗೇಟ್‌ಪಾಸ್‌ ನೀಡಿತ್ತು. ಈಗ ಟ್ವಿಟ್ಟರ್‌ ಸಂಸ್ಥೆಯ ನೂತನ ಮಾಲೀಕ ಎಲಾನ್‌ ಮಸ್ಕ್‌ ತನ್ನ ಸಿಬ್ಬಂದಿಗೆ "ಮುಂಬರುವ ಕಷ್ಟಕರ ಸಮಯಗಳಿಗೆ" ಸಿದ್ಧವಾಗುವಂತೆ ಮೊದಲ ಬಾರಿಗೆ ಇ ಮೇಲ್‌ (E - Mail) ಕಳಿಸಿದ್ದಾರೆ.  ಆರ್ಥಿಕ ದೃಷ್ಟಿಕೋನ ಮತ್ತು ಟ್ವಿಟ್ಟರ್‌ನಂತಹ ಜಾಹೀರಾತು-ಅವಲಂಬಿತ ಕಂಪನಿಯ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂದೇಶವನ್ನು ಶುಗರ್‌ಕೋಟ್ ಮಾಡಲು ಯಾವುದೇ ಮಾರ್ಗವಿಲ್ಲ ಎಂದೂ ಎಲಾನ್‌ ಮಸ್ಕ್‌ ಹೇಳಿದ್ದಾರೆಂದು ಬ್ಲೂಮ್‌ಬರ್ಗ್ ನ್ಯೂಸ್ (Bloomberg News) ಮಾಹಿತಿ ನೀಡಿದೆ. ಇದರ ಜತೆಗೆ ನಾನಾ ಬದಲಾವಣೆಗಳನ್ನೂ ಮಾಡುತ್ತಿದ್ದಾರೆ ಮಸ್ಕ್.

ಟ್ವಿಟ್ಟರ್‌ನಲ್ಲಿ ಈವರೆಗೆ ಇದ್ದ ರಿಮೋಟ್‌ ಕೆಲಸ (Remote Work) ಅಥವಾ ವರ್ಕ್‌ ಫ್ರಮ್‌ ಎನಿವೇರ್‌ ನೀತಿಗೆ ಇನ್ಮುಮದೆ ಅನುಮತಿ ಇಲ್ಲ. ಪ್ರತಿ ಸಿಬ್ಬಂದಿಯೂ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ (Office) ಇರಬೇಕೆಂದು ನಿರೀಕ್ಷಿಸಲಾಗುವುದು. ಆದರೆ, ಕೆಲವರಿಗೆ ಈ ಬಗ್ಗೆ ಅನುಮೋದಿತ ವಿನಾಯಿತಿ ನೀಡಬಹುದು ಎಂದೂ ಎಲಾನ್ ಮಸ್ಕ್‌ ಟ್ವಿಟ್ಟರ್‌ ಸ್ವಾಧೀನಪಡಿಸಿಕೊಂಡು ಬರೋಬ್ಬರಿ 2 ವಾರಗಳ ನಂತರ ಪ್ರಸ್ತುತ ಸಿಬ್ಬಂದಿಗೆ ಮೇಲ್‌ ಮಾಡಿದ್ದಾರೆ. 

ಇದನ್ನು ಓದಿ: Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್‌ ಮಸ್ಕ್‌ ಪ್ಲ್ಯಾನ್‌..!
 
ಈಗಾಗಲೇ ಅರ್ಧದಷ್ಟು ಉದ್ಯೋಗಿಗಳು ಎಲಾನ್‌ ಮಸ್ಕ್‌ ನಾಯಕತ್ವದಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಟ್ವಿಟ್ಟರ್ ಸಿಇಒ ಸೇರಿದಂತೆ ಬಹುತೇಕ ಎಕ್ಸಿಕ್ಯುಟಿವ್‌ ಅಧಿಕಾರಿಗಳನ್ನೂ ವಜಾ ಮಾಡಲಾಗಿದೆ. ಭಾರತದಲ್ಲೂ ಸುಮಾರು ಮುಕ್ಕಾಲು ಭಾಗದ ಸಿಬ್ಬಂದಿಯನ್ನು ಕಿತ್ತು ಹಾಕಲಾಗಿದೆ. 

ಈ ಮಧ್ಯೆ, ಟ್ವಿಟ್ಟರ್‌ ಬ್ಲೂ ಟಿಕ್‌ ಚಂದಾದಾರಿಕೆಗೆ 8 ಡಾಲರ್‌ ನೀಡಬೇಕೆಂದು ಎಲಾನ್‌ ಮಸ್ಕ್‌ ಘೋಷಣೆ ಮಾಡಿದ್ದು, ಮತ್ತು ಅದಕ್ಕೆ ಬಳಕೆದಾರರ ಪರಿಶೀಲನೆಯನ್ನು ಲಗತ್ತಿಸಿದ್ದಾರೆ. ಹಾಗೆ, ಟ್ವಿಟ್ಟರ್‌ ಆದಾಯದ ಅರ್ಧದಷ್ಟು ಚಂದಾದಾರಿಕೆ ಖಾತೆಯನ್ನು ನೋಡಲು ಬಯಸುವುದಾಗಿಯೂ ಎಲಾನ್‌ ಮಸ್ಕ್ ಇಮೇಲ್‌ನಲ್ಲಿ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡ ನಂತರ ಭಾವುಕರಾಗಿ ತಮ್ಮ ಕಷ್ಟಗಳನ್ನು ಪೋಸ್ಟ್‌ ಮೂಲಕ ಹಂಚಿಕೊಂಡಿದ್ದರು. ಯಾವುದೇ ಸೂಚನೆ ನೀಡದೆ ಇದ್ದಕ್ಕಿದ್ದಂತೆ ನಮ್ಮ ಕೆಲಸ ತೆಗೆಯಲಾಗಿದೆ ಎಂದೂ ಅವಲತ್ತುಕೊಂಡಿದ್ದಾರೆ. ಟ್ವಿಟ್ಟರ್‌ ಉದ್ಯೋಗಿಯಾಗಿದ್ದ 8 ತಿಂಗಳ ಗರ್ಭಿಣಿ ಹಾಗೂ ಇನ್ನೊಂದು ಮಗುವಿನ ತಾಯಿ ರೇಚೆಲ್‌ ಬಾನ್‌ ಅವರನ್ನು ಸಹ ಇದೇ ರೀತಿ ವಜಾ ಮಾಡಲಾಗಿತ್ತು. ಇ - ಮೇಲ್‌ ಮೂಲಕ ಲೇಆಫ್‌ ನೋಟಿಸ್‌ ನೀಡುವುದಾಗಿ ಎಲಾನ್‌ ಮಸ್ಕ್‌ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ರಾತ್ರೋರಾತ್ರಿ ತನ್ನ ಕಚೇರಿಯ ಲ್ಯಾಪ್‌ಟಾಪ್‌ ಆಕ್ಸೆಸ್‌ ಅನ್ನು ತೆಗೆದುಹಾಕಲಾಗಿತ್ತು (ಕಂಪನಿಯ ವೆಬ್‌ಸೈಟ್‌ ಲಾಗಿನ್‌ ಅವಕಾಶ ತೆಗೆದುಹಾಕಲಾಗಿದೆ) ಎಂದು ಟ್ವೀಟ್‌ ಮೂಲಕ ರೇಚೆಲ್‌ ತಮಗಾದ ಆಘಾತವನ್ನು ತಿಳಿಸಿದ್ದರು. ಅಲ್ಲದೆ, 9 ತಿಂಗಳ ಮಗುವನ್ನು ಹೊತ್ತುಕೊಂಡಿರುವ ಫೋಟೋವನ್ನು ಸಹ ಗರ್ಭಿಣಿ ಹಾಗೂ ತಾಯಿಯೂ ಆಗಿರುವ ರೇಚೆಲ್‌ ಬಾನ್‌ ಪೋಸ್ಟ್‌ ಮಾಡಿದ್ದರು. 

ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವ ಉದ್ದೇಶದಿಂದ 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡುವ ತಮ್ಮ ಯೋಜನೆಯನ್ನು ಎಲಾನ್‌ ಮಸ್ಕ್‌ ಘೋಷಿಸಿದ್ದರು. ಈ ಕುರಿತು ವಜಾಗೊಂಡ ಉದ್ಯೋಗಿಗಳು ಅಸಮಾಧಾನ ಹೊರಹಾಕಿದ್ದು, ‘ಇದು ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಮಾರ್ಗವಾಗಿದ್ದು, ಅವರು ಎಲ್ಲ ಕಡೆಯಿಂದಲೂ ಲಾಭ ಗಳಿಸುವ ಯೋಚನೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್‌ ಮಸ್ಕ್‌ ಘೋಷಣೆ

ಹಾಗೆ, ಎಲಾನ್‌ ಮಸ್ಕ್ ನಿರ್ಧಾರದಿಂದ ತಕ್ಷಣದಿಂದ ಉದ್ಯೋಗ ಕಳೆದುಕೊಂಡ ಅನೇಕರು ಟ್ವಿಟ್ಟರ್‌ ಮೂಲಕವೇ ತಮ್ಮ ಬೇಸರ ವ್ಯಕ್ತಪಡಿಸಿದ್ದರು. ಒನ್‌ಟೀಮ್ ಹ್ಯಾಷ್‌ಟ್ಯಾಗ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದರು.

Follow Us:
Download App:
  • android
  • ios