ಆರ್ಥಿಕ ಸಂಕಷ್ಟದ ನಡುವೆಯೂ ಪಾಕಿಸ್ತಾನವು ಚೀನಾದ ನೆರವಿನೊಂದಿಗೆ 2035ರ ವೇಳೆಗೆ ಚಂದ್ರಯಾನ ಕೈಗೊಳ್ಳುವ ಗುರಿ ಹೊಂದಿದೆ. ಇತ್ತ ನವದೆಹಲಿಯ ದಸರಾ ಮಹೋತ್ಸವದಲ್ಲಿ ರಾವಣನ ಜೊತೆ 30 ಅಡಿ ಎತ್ತರದ ಜಿರಳೆ ದಹನ ಮಾಡುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿರುವ ನಡುವೆಯೇ, ಪಾಕ್‌ ತನ್ನ ಬಾಹ್ಯಾಕಾಶ ಯೋಜನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ 2035ರ ವೇಳೆಗೆ ಚಂದ್ರನ ಅಂಗಳಕ್ಕೆ ಕಾಲಿಡುವ ಗುರಿಯನ್ನು ಹೊಂದಿದೆ ಎಂದು ಅಲ್ಲಿನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ತಿಳಿಸಿದ್ದಾರೆ.

ಚೀನಾದ ಸಹಯೋಗ

ಚೀನಾದ ಸಹಯೋಗದೊಂದಿಗೆ ದೇಶ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಎತ್ತರವನ್ನು ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವ ಬಾಹ್ಯಾಕಾಶ ಸಮಾರಂಭ

ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಹ್ಯಾಕಾಶ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಪಾಕ್‌ನ ಮೊದಲ ಗಗನಯಾತ್ರಿ ನ.25ರಂದು ಚೀನಾದ ಬಾಹ್ಯಾಕಾಶ ಕೇಂದ್ರದಿಂದ ತಮ್ಮ ಚೊಚ್ಚಲ ಬಾಹ್ಯಾಕಾಶ ಯಾತ್ರೆಯನ್ನು ಆರಂಭಿಸಲಿದ್ದಾರೆ. ಇದರ ಬೆನ್ನಲ್ಲೇ 2035ರ ಹೊತ್ತಿಗೆ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಯೋಜನೆಯಿದೆ’ ಎಂದು ಘೋಷಿಸಿದರು.

ದಿಲ್ಲಿ ದಸರಾದಲ್ಲಿ ಜಿರಳೆ ದಹನ ವಿವಾದ

ನವದೆಹಲಿ: ದೇಶದಲ್ಲಿ ಜಿರಳೆ ಪಕ್ಷ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷದ ನಡುವೆಯೇ ದಸರಾ ಅಂಗವಾಗಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ರಾವಣನ ಜತೆಗೆ 30 ಅಡಿ ಜಿರಳೆ ದಹನ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಈ ರೀತಿಯ ರಾಜಕೀಯ ಸಲ್ಲದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಂಘಟಕ ಹಾಗೂ ಬಿಜೆಪಿ ಶಾಸಕ ಅಶೋಕ್‌ ಗೋಯೆಲ್‌ ಸ್ಪಷ್ಟನೆ ನೀಡಿ, ‘ಜಿರಳೆ ಅಸ್ವಚ್ಛತೆಯ ಸಂಕೇತ. ಹೀಗಾಗೇ ಅದನ್ನೂ ಅಸುರ ಎಂದು ಪರಿಗಣಿಸಿ ರಾವಣನ ಜತೆ ದಹನ ಮಾಡಲಾಗುವುದು. ಇದರಲ್ಲಿ ರಾಜಕೀಯವಿಲ್ಲ’ ಎಂದಿದ್ದಾರೆ.

ಶ್ರೀ ಕೇಶವ ರಾಮಲೀಲಾ ಸಮಿತಿ

ಬಿಜೆಪಿ ಶಾಸಕ ಅಶೋಕ್‌ ಗೋಯೆಲ್‌ ಅವರ ನೇತೃತ್ವದ ಶ್ರೀ ಕೇಶವ ರಾಮಲೀಲಾ ಸಮಿತಿಯು ರಾವಣ, ಕುಂಭಕರ್ಣ ಮೇಘನಂದನ ದಹನದ ಜತೆಗೆ ಈ ಬಾರಿ 30 ಅಡಿಯ ಜಿರಳೆ ದಹನವನ್ನೂ ಮಾಡುವುದಕ್ಕೆ ಮುಂದಾಗಿದೆ.

ಆದರೆ ಇದಕ್ಕೆ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ‘ದಸರಾವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವನ್ನು ತೋರಿಸುತ್ತದೆ. ಇಂತಹ ಸಂಪ್ರದಾಯವನ್ನು ರಾಜಕೀಯವಾಗಿ ಏಕೆ ಬದಲಿಸಬೇಕು? ರಾವಣನನ್ನು ಸಿಜೆಪಿಗೆ ಹೋಲಿಸುವುದರಿಂದ ಹಿಂದೂಗಳ ಭಾವನೆಗೆ ನೋವುಂಟು ಮಾಡಬಹುದು’ ಎಂದಿದ್ದಾರೆ

ಶಾಸಕ ಗೋಯೆಲ್‌ ಸ್ಪಷ್ಟನೆ

ಇದಕ್ಕೆ ಶಾಸಕ ಗೋಯೆಲ್‌ ಸ್ಪಷ್ಟನೆ ನೀಡಿದ್ದು, ‘ ಇದು ರಾಜಕೀಯ ಪ್ರೇರಿತವಲ್ಲ. ಸ್ವಚ್ಛತೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜತೆಗೆ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂದೇಶವನ್ನು ಸಾರುವ ಉದ್ದೇಶ ಹೊಂದಿದೆ, ಜಿರಳೆಯು ಕೊಳಕಿನ ಸಂಕೇತ. ಸ್ವಚ್ಛ ಭಾರತ, ಸ್ವಚ್ಛ ದೆಹಲಿ ಅಭಿಯಾನಗಳಡಿಯಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ’ ಎಂದಿದ್ದಾರೆ.