* ಭಾರತದಲ್ಲಿ ಮೊದಲು ಪತ್ತೆಯಾದ ಕುಲಾಂತರಿಯಿಂದ ಅಮೆರಿಕದಲ್ಲೂ ಆತಂಕ* ಅಮೆರಿಕದಲ್ಲೂ ಇದೀಗ ಡೆಲ್ಟಾನಂ.1 ರೂಪಾಂತರಿ* ಅಮೆರಿಕದಲ್ಲಿ ಪತ್ತೆಯಾಗುತ್ತಿರುವ ಹೊಸ ಕೇಸಲ್ಲಿ ಶೇ.52 ಪಾಲು ಡೆಲ್ಟಾವೈರಸ್‌

ಹೂಸ್ಟನ್‌(ಜು.08): ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಡೆಲ್ಟಾಕುಲಾಂತರಿ ವೈರಸ್‌ ಇದೀಗ ಅಮೆರಿಕವನ್ನೂ ಬಹುಪಾಲು ತನ್ನ ಕಬಂಧ ಬಾಹುವಿನೊಳಗೆ ತೆಗೆದುಕೊಂಡಿದೆ. ದೇಶದಲ್ಲ ಹೊಸದಾಗಿ ಪತ್ತೆಯಾಗುತ್ತಿರುವ ಕೋವಿಡ್‌ ಸೋಂಕಿತರ ಪೈಕಿ ಶೇ.51ಕ್ಕಿಂತಲೂ ಹೆಚ್ಚು ಪಾಲು ಡೆಲ್ಟಾರೂಪಾಂತರಿ ವೈರಸ್‌ನಿಂದ್ದು ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ (ಸಿಡಿಸಿ) ಘೋಷಿಸಿದೆ. ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು, ದೇಶದಲ್ಲಿ 2ನೇ ಅಲೆಗೆ ಕಾರಣವಾಗಿದ್ದ ವೈರಸ್‌, ಇದೀಗ ಅಮೆರಿಕದಲ್ಲೂ ಭಾರೀ ಆತಂಕ ಹುಟ್ಟುಹಾಕಿದೆ.

ಬಿ.1.617.2 ಎಂದು ಗುರುತಿಸಲಾಗಿರುವ ಈ ಡೆಲ್ಟಾರೂಪಾಂತರಿ ವಿಶ್ವದಲ್ಲೇ ಮೊದಲ ಬಾರಿಗೆ ಕಳೆದ ಡಿಸೆಂಬರ್‌ನಲ್ಲಿ ಪತ್ತೆಯಾಗಿತ್ತು. ನಂತರ ಅದು ವಿಶ್ವವ್ಯಾಪಿಯಾಗಿ 100ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿತ್ತು. ಜೊತೆಗೆ ಇದು ಇದುವರೆಗೆ ಪತ್ತೆಯಾದ ರೂಪಾಂತರಿ ವೈರಸ್‌ಗಳ ಪೈಕಿ ಅತ್ಯಂತ ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿ ಎಂದು ವೈದ್ಯರು ಘೋಷಿಸಿದ್ದರು. ಅದರಲ್ಲೂ ಕೋವಿಡ್‌ ಲಸಿಕೆ ಪಡೆಯದೇ ಇದ್ದವರ ಮೇಲೆ ಇದು ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಅಮೆರಿಕದ ಹಲವು ರಾಜ್ಯಗಳಲ್ಲಿ ಡೆಲ್ಟಾರೂಪಾಂತರಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವುದು ಕಂಡುಬಂದಿದೆ.

ಸಿಡಿಸಿ ವರದಿಯ ಪ್ರಕಾರ, ಅಮೆರಿಕದ ಪಶ್ಚಿಮ ರಾಜ್ಯಗಳಲ್ಲಿ ಡೆಲ್ಟಾಪಾಲು ಶೇ.75ರ ಸಮೀಪಕ್ಕೆ ಬಂದಿದೆ. ಇನ್ನು ದಕ್ಷಿಣದ ರಾಜ್ಯಗಳಲ್ಲಿ ಡೆಲ್ಟಾಪಾಲು ಶೇ.59ರ ಆಸುಪಾಸಿನಲ್ಲಿದೆ. ಒಟ್ಟಾರೆ ನೋಡಿದರೆ ಅಮೆರಿಕದಲ್ಲಿ ಇದೀಗ ಡೆಲ್ಟಾಪಾಲು ಶೇ.51.7, ಆಲ್ಫಾ ಪಾಲು ಶೇ.28.7, ಬಾಕಿ ಉಳಿದ ವೈರಸ್‌ಗಳ ಪಾಲು ಎಂದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವೈದ್ಯಕೀಯ ಸಲಹೆಗಾರ ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆಯ ಮುಖ್ಯಸ್ಥ ಡಾ.ಆ್ಯಂಟೋನಿ ಪೌಸಿ, ‘ಡೆಲ್ಟಾಕೇವಲ ಸಾಂಕ್ರಾಮಿಕ ಮಾತ್ರವಲ್ಲ, ಅದು ಗಂಭೀರ ಪ್ರಮಾಣದ ಸೋಂಕನ್ನೂ ಉಂಟು ಮಾಡುತ್ತದೆ. ಲಸಿಕೆ ಪಡೆಯಲು ಏನಾದರೂ ಕಾರಣವಿದ್ದರೆ ಅದು ಇದೇ ಎಂದು ಅವರು ಡೆಲ್ಟಾದ ಅಪಾಯವನ್ನು ಒತ್ತಿ ಹೇಳಿದ್ದಾರೆ.