ಅಸಾನಿ ಚಂಡಮಾರುತ ಬೀಸಿರುವ ಹಿನ್ನೆಲೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗುತ್ತಿದ್ದು, ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಫ್ಲೋರ್ಟ್‌ಬ್ಲೇರ್‌ (ಮಾ.21): ಅಸಾನಿ ಚಂಡಮಾರುತ ಬೀಸಿರುವ ಹಿನ್ನೆಲೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗುತ್ತಿದ್ದು, ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ದ್ವೀಪಗಳ ನಡುವಿನ ಹಡಗು ಸೇವೆಗಳು ಮತ್ತು ಚೆನ್ನೈ-ವಿಶಾಖಪಟ್ಟಣ ನಡುವಿನ ಹಡಗು ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ಹಿನ್ನೆಲೆಯಲ್ಲಿ 150 ಎನ್‌ಡಿಆರ್‌ಎಫ್‌ ಸಿಬ್ಬಂದಿಗಳನ್ನು ನೇವಿಸಲಾಗಿದ್ದು, 6 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಫ್ಲೋರ್ಟ್‌ಬ್ಲೇರ್‌ ಉತ್ತರ, ಮಧ್ಯ ಮತ್ತು ದಕ್ಷಿಣ ಅಂಡಮಾನಗಳಲ್ಲಿ ಭಾರೀ ಗಾಳಿ, ಮಳೆಯಾಗುತ್ತಿದೆ. ಆದ್ದರಿಂದ ಮಾ. 22ರ ವರೆಗೆ ಎಲ್ಲಾ ಅಂತರ ದ್ವೀಪ ಸೇವೆಗಳನ್ನು ರದ್ದುಗೊಳಿಸುವಂತೆ ಶಿಪ್ಪಿಂಗ್‌ ಸೇವೆಗಳ ನಿರ್ದೇಶನಾಲಯವು ತಿಳಿಸಿದೆ.

ಅಸಾನಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 2022ರ ಮೊದಲ ಚಂಡಮಾರುತ ‘ಅಸಾನಿ’ ಸೃಷ್ಟಿಯಾಗುತ್ತಿದೆ. ಈ ಚಂಡಮಾರುತ ಗಂಟೆಗೆ 90 ಕಿ.ಮೀ ವೇಗದಲ್ಲಿ ಮಾ.21ರಂದು ಅಂಡಮಾನ್‌ ನಿಕೋಬಾರ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ನಂತರ ಈ ಚಂಡ ಮಾರುತ ಬಾಂಗ್ಲಾದೇಶ ಮತ್ತು ಮಯನ್ಮಾರ್‌ನತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Rain In Karnataka: 7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆ, ಶಿರಸಿ ಜಾತ್ರೆಯಲ್ಲಿ ಕುಸಿದ ತೊಟ್ಟಿಲು

ಅಂಡಮಾನ್‌ನಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್‌ ತಂಡವನ್ನು ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ಭಾರತದ ತೀರ ಪ್ರದೇಶದವರೆಗೂ ಈ ಚಂಡ ಮಾರುತ ತಲುಪುವುದಿಲ್ಲ. ಅಸಾನಿ ಎಂಬ ಹೆಸರನ್ನು ಈ ಚಂಡ ಮಾರುತಕ್ಕೆ ಶ್ರೀಲಂಕಾ ಸೂಚಿಸಿತ್ತು.

ಭಾರೀ ಮಳೆಯ ಮುನ್ಸೂಚನೆ: ಈ ವರ್ಷ ಬೇಸಿಗೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ತನ್ನ ನಿಜ ಬಣ್ಣ ತೋರಿಸಲಾರಂಭಿಸಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ದಾಟಿದೆ. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂಬರುವ ವಾರದಲ್ಲಿ ದೇಶದ ಹಲವೆಡೆ ಸೆಕೆ ಮತ್ತಷ್ಟು ಹೆಚ್ಚಾಗಲಿದೆ. ಏತನ್ಮಧ್ಯೆ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಶೀಘ್ರದಲ್ಲೇ 'ಅಸಾನಿ' ಚಂಡಮಾರುತವಾಗಿ ಬದಲಾಗಲಿದೆ. ಇದರಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆ ಆರಂಭವಾಗಿದೆ.

ಪಶ್ಚಿಮ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಹೆಚ್ಳವಾಗಿದೆ. ಇದಲ್ಲದೆ, ಸೌರಾಷ್ಟ್ರ-ಕಚ್, ವಿದರ್ಭ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಈಗಾಗಲೇ ಜನರಿಗೆ ಆತಂಕ ಉಂಟು ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5⁰C ಹೆಚ್ಚಾಗಿದೆ. ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಪಶ್ಚಿಮ ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸೌರಾಷ್ಟ್ರ ಮತ್ತು ಕಚ್ ಮತ್ತು ವಿದರ್ಭದಲ್ಲೂ ಸೆಕೆ ಹೆಚ್ಚಾಗಿದೆ.

ಚಂಡಮಾರುತಕ್ಕೆ ಇಂಗ್ಲೆಂಡ್‌ ತತ್ತರ... ನೋಡು ನೋಡುತ್ತಿದ್ದಂತೆ ಕೊಚ್ಚಿ ಹೋದ ಸೇತುವೆ

ಈ ರಾಜ್ಯಗಳಲ್ಲಿ ಮಳೆ: ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ಕರಾವಳಿಯ ಸಮುದ್ರದಲ್ಲಿ ಹೆಚ್ಚಿನ ಅಲೆಗಳು ಉಂಟಾಗಬಹುದು ಮತ್ತು ಗಾಳಿಯ ವೇಗ ಗಂಟೆಗೆ 50 ರಿಂದ 60 ಕಿ.ಮೀ ವೇಗವಾಗಿರಬಹುದೆನ್ನಲಾಗಿದೆ. ಮಾರ್ಚ್ 20 ಮತ್ತು 21ರಂದು ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮ ಬೀಳಬಹುದು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗಬಹುದು.