ಫ್ರಾಂಕ್ಲಿನ್ ಚಂಡಮಾರುತಕ್ಕೆ ಯುರೋಪ್ ತತ್ತರ ಕಣ್ಣೆದುರೇ ಕೊಚ್ಚಿ ಹೋದ ಸೇತುವೆ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದ ಜನ
ಇಂಗ್ಲೆಂಡ್(ಫೆ.22): ಯೂನೈಸ್ ಚಂಡಮಾರುತವೂ ಇಂಗ್ಲೆಂಡ್‌ನಲ್ಲಿ ವಿನಾಶವನ್ನೇ ಉಂಟು ಮಾಡಿದೆ. ಇದಾದ ಬಳಿಕ ಬಂದ ಫ್ರಾಂಕ್ಲಿನ್ ಚಂಡಮಾರುತವೂ ಕೂಡ ಸೋಮವಾರ (ಫೆ.22) ದೇಶದ ಹಲವೆಡೆ ಭಾರಿ ಹಾನಿ ಉಂಟು ಮಾಡಿದ್ದು, ಲೀಡ್ಸ್‌ನಲ್ಲಿ (Leeds) ಚಂಡ ಮಾರುತಕ್ಕೆ ಸಿಲುಕಿ ಸೇತುವೆಯೊಂದು ಕೊಚ್ಚಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಕೈನ್ಯೂಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸೇತುವೆಯ ಬಳಿ ಚಂಡಮಾರುತದಿಂದಾಗಿ ಮುರಿದು ಬಿದ್ದಂತಹ ಕೆಲ ವಸ್ತುಗಳ ಅವಶೇಷಗಳು ಬಂದು ಸಂಗ್ರಹವಾಗುತ್ತಿದ್ದು, ಅದಾದ ಸ್ವಲ್ಪ ಹೊತ್ತಿನಲ್ಲಿ ಸೇತುವೆಯು ಕುಸಿದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ.
ಈ ವಿಡಿಯೋವನ್ನು ಎನ್ವಿರಾನ್‌ಮೆಂಟ್ ಏಜೆನ್ಸಿಯು ಕೂಡ ಹಂಚಿಕೊಂಡಿದ್ದು, ಮರ್ಸಿ (Mersey) ನದಿಯ ಮೂಲಕ ಪ್ರವಾಹದ ನೀರು ಹರಿದು ಹೋಗುವುದನ್ನು ತೋರಿಸುತ್ತಿದೆ. ಹವಾಮಾನ ಇಲಾಖೆಯು ಉತ್ತರ ಐರ್ಲೆಂಡ್‌ನಲ್ಲಿ ರಭಸವಾಗಿ ಗಾಳಿ ಬೀಸುವ ಬಗ್ಗೆ ಅಂಬರ್ (amber warning) ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ವೇಲ್ಸ್ (Wales), ಉತ್ತರ ಐರ್ಲೆಂಡ್ (Ireland), ಇಂಗ್ಲೆಂಡ್‌ನ (England) ಕೆಲವು ಭಾಗಗಳು ಮತ್ತು ನೈಋತ್ಯ ಸ್ಕಾಟ್ಲೆಂಡ್‌ನಲ್ಲಿ (Scotland) ಯೆಲ್ಲೋ ಅಲರ್ಟ್(Yellow Alert) ಘೋಷಿಸಿದೆ.ಬಿಬಿಸಿ ವರದಿಯ ಪ್ರಕಾರ ಶುಕ್ರವಾರ ಗಂಟೆಗೆ 120 ಮೈಲಿಗಿಂತ (mile per hour) ವೇಗವಾಗಿ ಗಾಳಿ ಬೀಸಿದ ಬಗ್ಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ ವೇಲ್ಸ್‌ನ ಕ್ಯಾಪೆಲ್ ಕುರಿಗ್‌ನಲ್ಲಿ (Capel Curig) ಗರಿಷ್ಠ ಗಾಳಿಯ ವೇಗ ಗಂಟೆಗೆ 79 mph ಎಂದು ದಾಖಲಾಗಿದೆ.
ಜರ್ಮನಿ (Germany), ಪೋಲೆಂಡ್(Poland), ಐರಿಶ್ ರಿಪಬ್ಲಿಕ್ (Irish Republic), ನೆದರ್ಲ್ಯಾಂಡ್ಸ್ (Netherlands), ಯುಕೆ (UK) ಮತ್ತು ಬೆಲ್ಜಿಯಂ (Belgium) ನಲ್ಲಿ ಯುನೈಸ್ ಚಂಡಮಾರುತದಿಂದ ಉಂಟಾದ ಸಾವು ನೋವುಗಳನ್ನು ವರದಿ ಮಾಡಿದ ಬಳಿಕ ಚಮಡಮಾರುತದಿಂದಾದ ಸಾವಿನ ಸಂಖ್ಯೆ ಯುರೋಪಿನಾದ್ಯಂತ ಭಾನುವಾರ 16 ಕ್ಕೆ ಏರಿತ್ತು. ಭೀಕರ ಗಾಳಿಗೆ ಈ ಸ್ಥಳಗಳಲ್ಲಿ ಮರಗಳು ಮತ್ತು ಛಾವಣಿಗಳು ಉರುಳಿದ್ದವು ಮತ್ತು ಲಕ್ಷಾಂತರ ಮನೆಗಳಲ್ಲಿ ವಿದ್ಯುತ್ ಸೇವೆಗಳು ಸ್ಥಗಿತಗೊಂಡಿದ್ದವು. ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್‌ಗಳು ಸಾಹಸ ಮಾಡುತ್ತಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದವು.
ಗಂಟೆಗೆ 200 ಕಿಮೀ ವೇಗ, ಯುನೈಸ್ ಚಂಡಮಾರುತಕ್ಕೆ ಯೂರೋಪ್, ಬ್ರಿಟನ್ ತತ್ತರ
ಗಮನಾರ್ಹವಾಗಿ, ಡಡ್ಲಿ ಮತ್ತು ಯುನೈಸ್ ಚಂಡಮಾರುತದ ನಂತರ ಚಂಡಮಾರುತ ಫ್ರಾಂಕ್ಲಿನ್ ಯುರೋಪ್‌ನ್ನು ಬಾಧಿಸಿದ್ದು, ಇದು ಒಂದೇ ವಾರದಲ್ಲಿ ಬಂದ ಮೂರನೇ ಚಂಡಮಾರುತವಾಗಿದೆ. 2015 ರಲ್ಲಿ ಚಂಡಮಾರುತಗಳಿಗೆ ನಾಮಕರಣ ಮಾಡುವ ಪ್ರಕ್ರಿಯೆ ಜಾರಿಗೆ ಬಂದಿತ್ತು. ಯುನೈಸ್ ಚಂಡಮಾರುತವು ಯುರೋಪ್ ಮತ್ತು ಬ್ರಿಟನ್‌ನಲ್ಲಿ ಭಾರಿ ಹಾನಿಯನ್ನುಂಟು ಮಾಡಿತ್ತು. ಬ್ರಿಟನ್‌ನಲ್ಲಿ ಜನರು ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಜನರೇ ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದರು. ಬಿರುಗಾಳಿಗೆ ಮರಗಳು ನೆಲಕ್ಕುರುಳಿದ್ದು, ಮನೆಗಳಿಗೆ ಹಾನಿಯಾಗಿದೆ. ಪಶ್ಚಿಮ ಯುರೋಪ್‌ನಲ್ಲಿ ವಿಮಾನಗಳು, ರೈಲು, ಹಡಗುಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಲಕ್ಷಾಂತರ ಮಂದಿ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.