ಬೀಜಿಂಗ್‌ನಲ್ಲಿ 35 ಲಕ್ಷ ಜನರ ಸಾಮೂಹಿಕ ಕೋವಿಡ್‌ ಟೆಸ್ಟ್‌ ಚೀನಾದಲ್ಲಿ 19 ಸಾವಿರ ಕೋವಿಡ್‌ ಕೇಸು ಶಾಂಘೈಯಲ್ಲಿ ದಾಖಲೆಯ 51 ಸಾವು

ಬೀಜಿಂಗ್‌(ಏ.26): ಚೀನಾದಲ್ಲಿ ಕಠಿಣ ಲಾಕ್‌ಡೌನ್‌ ಕ್ರಮಗಳ ನಡುವೆಯೂ ಒಮಿಕ್ರೋನ್‌ ಆರ್ಭಟ ಮುಂದುವರೆದಿದೆ. ಸೋಮವಾರ ಒಂದೇ ದಿನ 19,455 ಪ್ರಕರಣಗಳು ದೇಶದಲ್ಲಿ ವರದಿಯಾಗಿವೆ ಹಾಗೂ ಶಾಂಘೈನಲ್ಲಿ ದಾಖಲೆಯ 51 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೀಜಿಂಗ್‌ಗೂ ಸೋಂಕು ವಿಸ್ತರಿಸಿದೆ. ಹೀಗಾಗಿ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರವು ಬೀಜಿಂಗ್‌ನ ಚೌಯಾಂಗ್‌ನಲ್ಲಿ 35 ಲಕ್ಷ ಜನರ ಸಾಮೂಹಿಕ ಕೋವಿಡ್‌-19ರ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ.

ಈ ನಡುವೆ ಬೀಜಿಂಗ್‌ನಲ್ಲಿ ಭಾನುವಾರ 14 ಕೋವಿಡ್‌ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಶಾಂಘೈ ಮಾದರಿಯಲ್ಲೇ ಲಾಕ್ಡೌನ್‌ ಹೇರಿಕೆಯ ಸಾಧ್ಯತೆಯಿದೆ. ಹೀಗಾಗಿ ಜನರು ಅಗತ್ಯವಸ್ತು ಕೊಳ್ಳಲು ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.

ಕರ್ನಾಟಕದಲ್ಲಿ 4ನೇ ಕೊರೋನಾ ಅಲೆ ಭೀತಿ, ಹೊಸ ನಿಯಮ ಗಂಭೀರವಾಗಿ ಪರಿಗಣಿಸಿ ಎಂದ ಸುಧಾಕರ್!

ಶಾಂಘೈಯಲ್ಲಿ 51 ಸಾವು:
ಚೀನಾದ ಪ್ರಮುಖ ವಾಣಿಜ್ಯ ನಗರಿ ಶಾಂಘೈಯಲ್ಲಿ ಸೋಂಕಿನ ಪ್ರಮಾಣದಲ್ಲಿ ಸತತ ಏರಿಕೆಯಾಗುತ್ತಿದೆ. ನುವಾರ ಒಂದೇ ದಿನ 51 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸೋಂಕಿತರ ಸಾವಿನ ಪ್ರಮಾಣ 138ಕ್ಕೆ ಏರಿಕೆಯಾಗಿದೆ. ಶಾಂಘೈ ಹೊರತುಪಡಿಸಿ ಚೀನಾದ 17 ಪ್ರಾಂತ್ಯಗಳಲ್ಲಿ ಕೋವಿಡ್‌ ಸೋಂಕು ಸತತ ಏರಿಕೆಯಾಗುತ್ತಿದ್ದು, ದೇಶದಲ್ಲಿ 29,178 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಂಘೈನಲ್ಲಿ ಸರ್ಕಾರದ ಕೋವಿಡ್‌ ನಿರ್ವಹಣೆಯ ವೈಫಲ್ಯದಿಂದ ಶಾಂಘೈಯಲ್ಲಿ ಜನರು ಆಹಾರ, ಔಷಧಿಯಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಜನರ ಸಂಚಾರ ತಡೆಯಲು ಲೋಹದ ಗೋಡೆಗಳನ್ನು ಹಾಕಲಾಗಿದೆ.

ಚೀನಾದ ಉನ್ನತ ನಾಯಕರು ನೆಲೆಸುವ ಚೌಯಾಂಗ್‌ ಜಿಲ್ಲೆಯಲ್ಲಿ ಭಾನುವಾರ 11 ಕೋವಿಡ್‌ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರವು ಸೋಮವಾರದಿಂದ ಎಲ್ಲ 35 ಲಕ್ಷ ನಾಗರಿಕರ ಮೂರು ಸುತ್ತಿನ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ. ಚೌಯಾಂಗ್‌ ಜಿಲ್ಲೆಯಲ್ಲಿ ವಾಸವಾಗಿರುವ, ಹಾಗೂ ಜಿಲ್ಲೆಯಲ್ಲಿ ಕೆಲಸಕ್ಕಾಗಿ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೂರು ಸುತ್ತಿನ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ. ಈ ಪರೀಕ್ಷೆಯನ್ನು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಸೂಚನೆ ಹೊರಡಿಸಿದೆ.

ಶಾಲೆಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಿಷೇಧ, ಜಾರ್ಖಂಡ್ ಮಾರ್ಗಸೂಚಿ ಪ್ರಕಟ!

 ಶಾಂಘೈನಲ್ಲಿ ಒಂದೇ ದಿನ 24 ಸಾವಿರ ಕೋವಿಡ್‌ ಕೇಸು
ಚೀನಾದಲ್ಲಿ ಕಠಿಣ ಲಾಕ್‌ಡೌನ್‌ ನಿರ್ಬಂಧಗಳ ನಡುವೆಯೂ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಶುಕ್ರವಾರ 3400ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 20,700 ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ.

ಕಳೆದ 15 ದಿನಗಳಿಂದ ಲಾಕ್‌ಡೌನ್‌ಗೆ ಒಳಪಟ್ಟಿರುವ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಅತ್ಯಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 3,200 ಕೇಸುಗಳು ದಾಖಲಾಗಿದ್ದು, 20,782 ಸೋಂಕಿತರಿಗೆ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಶಾಂಘೈನಲ್ಲಿ ಒಮಿಕ್ರೋನ್‌ ಆರ್ಭಟದ ನಡುವೆಯೇ ಆಹಾರ, ಔಷಧಿಗಳಿಲ್ಲದೇ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಆಹಾರ, ಔಷಧಗಳ ಪೂರೈಕೆ ಮಾಡುವುದು ಸೇರಿದಂತೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಕಲ್ಪಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸರ್ಕಾರದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಜನರ ಗೋಳನ್ನು ಕೇಳದ ಚೀನಾ ಕೋವಿಡ್‌ ಶೂನ್ಯ ಸಹನೆ ನೀತಿಯಡಿ ಲಾಕ್‌ಡೌನ್‌ ಮುಂದುವರೆಸಿದೆ.