‘ವಿಶ್ವದ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನವಾಗುತ್ತಿಲ್ಲ ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾದ ರೂಪಾಂತರಿ ತಳಿ ಡೆಲ್ಟಾದಿಂದಾಗಿ ಸೋಂಕು ಹೆಚ್ಚಳ ಕಳೆದ 24 ತಾಸುಗಳಲ್ಲಿ 5 ಲಕ್ಷ ಹೊಸ ಸೋಂಕಿತರು, 9300 ಸಾವುಗಳು
ನ್ಯೂಯಾರ್ಕ್ (ಜು.11): ‘ವಿಶ್ವದ ಹಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನವಾಗುತ್ತಿಲ್ಲ. ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನಾದ ರೂಪಾಂತರಿ ತಳಿ ಡೆಲ್ಟಾದಿಂದಾಗಿ ಸೋಂಕು ಹೆಚ್ಚಾಗುತ್ತಿದೆ. ಕಳೆದ 24 ತಾಸುಗಳಲ್ಲಿ 5 ಲಕ್ಷ ಹೊಸ ಸೋಂಕಿತರು, 9300 ಸಾವುಗಳು ವರದಿಯಾಗಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದೇ ವೇಳೆ, ವಿಶ್ವದ 24 ದೇಶಗಳಲ್ಲಿ ಈಗ ಕೊರೋನಾ ಏರುಮುಖದಲ್ಲಿದೆ. ಪರಿಸ್ಥಿತಿ ಹೇಗಿರಬೇಕೋ ಹಾಗಿಲ್ಲ ಎಂಬ ಆತಂಕದ ವಿಚಾರವನ್ನೂ ಅದು ತಿಳಿಸಿದೆ.
ಶುಕ್ರವಾರ ಮಾತನಾಡಿದ ಡಬ್ಲ್ಯುಎಚ್‌ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ‘ಹಲವು ದೇಶಗಳಲ್ಲಿ ಲಸಿಕೆ ಅಭಿಯಾನ ನಡೆಸುತ್ತಿರುವುದರಿಂದ ಗಂಭೀರ ರೀತಿಯ ಸೋಂಕು ಹಾಗೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ವಿಶ್ವದ ಹಲವು ಭಾಗಗಳಲ್ಲಿ ಆಮ್ಲಜನಕ ಕೊರತೆ, ಆಸ್ಪತ್ರೆ ಬೆಡ್ ಸಮಸ್ಯೆ ಉಂಟಾಗಿದ್ದು, ಸಾವು ಅಧಿಕವಾಗಿದೆ’ ಎಂದುತಿಳಿಸಿದ್ದಾರೆ.
ಅಮೆರಿಕದಲ್ಲೂ ಇದೀಗ ಡೆಲ್ಟಾ ನಂ.1 ರೂಪಾಂತರಿ! .
ಡಬ್ಲ್ಯುಎಚ್‌ಒದಲ್ಲಿ 6 ವಲಯಗಳಿದ್ದು, ಆ ಪೈಕಿ 5ರಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆಫ್ರಿಕಾ ಖಂಡದಲ್ಲಿ ಸಾವಿನ ಪ್ರಮಾಣ ಎರಡೇ ವಾರದಲ್ಲಿ ಶೇ.30ರಿಂದ ಶೇ.40ರಷ್ಟುಅಧಿಕವಾಗಿದೆ. ವೇಗವಾಗಿ ಹಬ್ಬುವ ಡೆಲ್ಟಾವೈರಾಣು, ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿರುವುದು, ಮಾಸ್ಕ್ ಹಾಗೂ ಸಾಮಾಜಿಕ ಅಂತರದಂತಹ ನಿಯಮಗಳನ್ನು ಸಡಿಲಗೊಳಿಸಿರುವುದು ಇದಕ್ಕೆ ಕಾರಣ ಎಂದು ಅವರು ವಿವರಿಸಿದ್ದಾರೆ.
ಪರಿಸ್ಥಿತಿ ಸುಧಾರಿಸುತ್ತಿಲ್ಲ, ವಿಷಮಿಸುತ್ತಿದೆ: ಇದೇ ವೇಳೆ, ‘ಪರಿಸ್ಥಿತಿ ವಿಷಮ ಆಗುತ್ತಿದೆಯೇ ವಿನಾ ಉತ್ತಮ ಆಗುತ್ತಿಲ್ಲ. 24 ದೇಶಗಳಲ್ಲಿ ಸೋಂಕಿನ ಏರುಗತಿ ಇದೆ. ಅನೇಕ ದೇಶಗಳು ಕೋವಿಡ್ ನಿಯಂತ್ರಣಕ್ಕೆ ತರಲು ಸಾಹಸ ಮಾಡುತ್ತಿವೆ’ ಎಂದು ಡಬ್ಲ್ಯುಎಚ್‌ಒ ಕೋವಿಡ್ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.
‘ಡೆಲ್ಟಾರೂಪಾಂತರಿ ತಳಿ ಸೃಷ್ಟಿ, ಸಾಮಾಜಿಕ ಅಂತರ ಮರೆತು ಮತ್ತೆ ಸೃಷ್ಟಿಆಗುತ್ತಿರುವ ಜನಜಂಗುಳಿ, ಆರೋಗ್ಯ ವ್ಯವಸ್ಥೆಯ ಮೂಲಸೌಕರ‍್ಯ ಕೊರತೆ, ಲಸಿಕೆಯ ಕೊರತೆ’ ಇವು ಸೋಂಕು ಮತ್ತೆ ಹೆಚ್ಚಳ ಆಗುತ್ತಿರುವ ಕಾರಣಗಳು ಎಂದು ಅವರು ವಿಶ್ಲೇಷಿಸಿದ್ದಾರೆ.
