ಮೋದಿಗೆ ತಾನೇ ದೇವರೆಂಬ ಭ್ರಮೆ: ಮತ್ತೆ ವಿದೇಶದಲ್ಲಿ ರಾಹುಲ್ ಗಾಂಧಿ ವಿವಾದ
‘ಜಗತ್ತಿನಲ್ಲಿ ‘ದೇವರಿಗಿಂತ ಹೆಚ್ಚು ತನಗೆ ಗೊತ್ತು’ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಂಥ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಸಾಂತಾ ಕ್ಲಾರಾ (ಜೂ.01): ‘ಜಗತ್ತಿನಲ್ಲಿ ‘ದೇವರಿಗಿಂತ ಹೆಚ್ಚು ತನಗೆ ಗೊತ್ತು’ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಂಥ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 10 ದಿನಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್, ಅಮೆರಿಕದ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಬುಧವಾರ ಸಾಂತಾ ಕ್ಲಾರಾದಲ್ಲಿ ಹಮ್ಮಿಕೊಂಡಿದ್ದ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಸಂವಾದದಲ್ಲಿ ಮಾತನಾಡಿದರು.
ಹಾಗೂ ಮೋದಿ ವಿರುದ್ಧ ವ್ಯಂಗ್ಯಭರಿತ ವಾಗ್ದಾಳಿ ನಡೆಸಿದರು. ಇದಕ್ಕೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದು, ‘ರಾಹುಲ್ ‘ನಕಲಿ ಗಾಂಧಿ’. ಏನೂ ಗೊತ್ತಿಲ್ಲದ ವ್ಯಕ್ತಿಗೆ ಉದಾಹರಣೆ ಎಂದರೆ ರಾಹುಲ್ ಗಾಂಧಿ, ಆದರೂ ಎಲ್ಲರದಲ್ಲೂ ಅವರು ತಜ್ಞರಾಗಿಬಿಡುತ್ತಾರೆ’ ಎಂದು ಟೀಕಿಸಿದ್ದಾರೆ.
ಮೋದಿ, ಶಾ ದಂಡೆತ್ತಿ ಬಂದು ಬಿಜೆಪಿಯನ್ನು ಮುಳುಗಿಸಿದರು: ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ
ರಾಹುಲ್ ಹೇಳಿದ್ದೇನು?: ಕೆಲವೊಬ್ಬರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಇಂಥವರು ಇತಿಹಾಸವನ್ನು ಇತಿಹಾಸಕಾರರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ, ಯುದ್ಧ ಕಲೆಯನ್ನು ಸೇನಾನಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾರೆ ಎಂದು ಮೋದಿ ವಿರುದ್ಧ ರಾಹುಲ್ ಪರೋಕ್ಷವಾಗಿ ಚಾಟಿ ಬೀಸಿದರು. ‘ಜಗತ್ತು ತುಂಬಾ ದೊಡ್ಡದಾಗಿದೆ. ಹೀಗಾಗಿ ವ್ಯಕ್ತಿಗೆ ಎಲ್ಲವನ್ನೂ ತಿಳಿದುಕೊಳ್ಳಲು ಆಗದು. ಆದರೆ ಎಲ್ಲವೂ ತನಗೆ ತಿಳಿದಿದೆ ಎಂಬ ಭ್ರಮೆಯಲ್ಲಿ ಕೆಲವರು ಇರುತ್ತಾರೆ. ಇದೊಂಥರಾ ರೋಗ. ಇಂಥವರು ದೇವರಿಗಿಂತ ಹೆಚ್ಚು ತನಗೆ ಗೊತ್ತು ಎಂದು ಭಾವಿಸಿರುತ್ತಾರೆ.
ಇಂಥವರು ದೇವರ ಎದುರಿಗೇ ಕುಳಿತು ಏನಾಗುತ್ತಿದೆ ಎಂಬುದನ್ನು ಆತನಿಗೆ ವಿವರಿಸುತ್ತಾರೆ. ನೀವು ಮೋದಿಯನ್ನು ದೇವರೊಂದಿಗೆ ಕೂರಿಸಿದರೆ, ‘ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಾನು ಏನನ್ನು ಸೃಷ್ಟಿಸಿದ್ದೇನೆ?’ ಎಂಬುದರ ಕುರಿತು ದೇವರೇ ಗೊಂದಲಕ್ಕೊಳಗಾಗುತ್ತಾನೆ. ಅಷ್ಟರ ಮಟ್ಟಿಗೆ ಮೋದಿ ಮಾತುನಿಂದ ದೇವರು ಕೂಡ ವಿಚಲಿತನಾಗುತ್ತಾನೆ’ ಎಂದು ನಗೆಗಡಲಿನ ಮಧ್ಯೆ ಹೇಳಿದರು.
ಇನ್ನು ಸೆಂಗೋಲ್ ರಾಜದಂಡದ ಬಗ್ಗೆ ಮಾತನಾಡಿದ ರಾಹುಲ್, ‘ಮೋದಿ ಸರ್ಕಾರಕ್ಕೆ ನಿರುದ್ಯೋಗ, ಬೆಲೆ ಏರಿಕೆಯಂಥ ಸಮಸ್ಯೆ ನಿಗ್ರಹ ಮಾಡಲಾಗದು. ಆದರೆ ಹೊಸ ಸಂಸತ್ ಭವನ ನಿರ್ಮಿಸಿ ನೈಜ ವಿಷಯಗಳಿಂದ ಬೇರೆ ಕಡೆ ಗಮನ ಸಳೆಯಲು ಯತ್ನಿಸುತ್ತಾರೆ. ನೈಜ ವಿಷಯಗಳ ಚರ್ಚೆ ನಡೆದರೆ ಬಿಜೆಪಿಗೆ ಬಣ್ಣ ಬಯಲಾಗುವ ಭೀತಿ ಇದೆ.
ಅದಕ್ಕೆಂದೇ ಅವರು ದೀರ್ಘದಂಡ ನಮಸ್ಕಾರ ಹಾಕುವಂಥ ನಾಟಕ ಮಾಡುತ್ತಿದ್ದಾರೆ’ ಎಂದು ಮೋದಿ ಅವರು ಸೆಂಗೋಲ್‌ಗೆ ಸಂಸತ್ ಭವನದಲ್ಲಿ ನಮಸ್ಕರಿಸಿದ್ದನ್ನು ವ್ಯಂಗ್ಯವಾಡಿದರು. ಇದೇ ವೇಳೆ, ಬಡವರು ಹಾಗೂ ಅಲ್ಪಸಂಖ್ಯಾತರು ಭಾರತದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಪರಸ್ಪರ ದ್ವೇಷಿಸುವುದನ್ನು ಭಾರತೀಯರು ಇಷ್ಟಪಡಲ್ಲ. ಆದರೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಕೆಲವರು ಹಾಗೂ ಕೆಲವು ಮಾಧ್ಯಮಗಳು ದ್ವೇಷದ ಕಿಡಿ ಹಚ್ಚುತ್ತಿವೆ ಎಂದು ರಾಹುಲ್ ಕಿಡಿಕಾರಿದರು.
ಪಕ್ಷಭೇದವಿಲ್ಲದೆ ಆದ್ಯತೆ ಮೇರೆಗೆ ಕೆಲಸ ಮಾಡಿ: ಶಾಸಕ ಧೀರಜ್ ಮುನಿರಾಜ್
ರಾಹುಲ್ ‘ನಕಲಿ ಗಾಂಧಿ’. ಏನೂ ಗೊತ್ತಿಲ್ಲದ ವ್ಯಕ್ತಿಗೆ ಉದಾಹರಣೆ ಎಂದರೆ ರಾಹುಲ್ ಗಾಂಧಿ. ಆದರೂ ಎಲ್ಲರದಲ್ಲೂ ಅವರು ತಜ್ಞರಾಗಿಬಿಡುತ್ತಾರೆ.
-ಪ್ರಹ್ಲಾದ್ ಜೋಶಿ, ಕೇಂದ್ರ ಸಂಸದೀಯ ಸಚಿವ