ಮೋದಿ, ಶಾ ದಂಡೆತ್ತಿ ಬಂದು ಬಿಜೆಪಿಯನ್ನು ಮುಳುಗಿಸಿದರು: ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ
ಮೈಸೂರು ಭಾಗಕ್ಕೆ ದಂಡೆತ್ತಿ ಬಂದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗೆದ್ದಿದ್ದು ಒಂದು ಸ್ಥಾನ ಮಾತ್ರ. ಜೆಡಿಎಸ್ ತಿಥಿ ಮಾಡಿದ್ದಲ್ಲದೆ ಬಿಜೆಪಿಯನ್ನೂ ಮುಳುಗಿಸಿದರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದರು.
ಮೈಸೂರು (ಜೂ.01): ಮೈಸೂರು ಭಾಗಕ್ಕೆ ದಂಡೆತ್ತಿ ಬಂದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗೆದ್ದಿದ್ದು ಒಂದು ಸ್ಥಾನ ಮಾತ್ರ. ಜೆಡಿಎಸ್ ತಿಥಿ ಮಾಡಿದ್ದಲ್ಲದೆ ಬಿಜೆಪಿಯನ್ನೂ ಮುಳುಗಿಸಿದರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ವಾಗ್ದಾಳಿ ನಡೆಸಿದರು. ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಧನ್ಯತಾ ಸಮಾಗಮ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯನ್ನು ಕಟ್ಟಿದರು. ಅವರನ್ನು ಬಿಟ್ಟು ಈಗ ಪಕ್ಷವನ್ನು ಕಟ್ಟುತ್ತೇವೆಂದು ಹೊರಟಿದ್ದಾರೆ ಎಂದು ಕಿಡಿಕಾರಿದರು. ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡದೆ ಮೈಸೂರು ಕಡೆಗೆ ದಂಡೆತ್ತಿ ಬಂದರು. ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಬಂದು ಹೋದರು. ಇವೆಲ್ಲರೂ ಬಂದರೂ ಎಷ್ಟುಸ್ಥಾನಗಳನ್ನು ಗೆದ್ದರು? ಒಂದೇ ಒಂದು ಸ್ಥಾನವನ್ನು ಗೆದ್ದದ್ದು. ನೀವು ಬಂದು ಜೆಡಿಎಸ್ ತಿಥಿ ಮಾಡಿದಲ್ಲದೆ, ಬಿಜೆಪಿಯೂ ಮುಗಿದು ಹೋಯಿತು ಎಂದು ಅವರು ಟೀಕಿಸಿದರು.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್ ಈಶ್ವರ್ ಭರವಸೆ
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ಹಿಜಾಬ್, ಹಲಾಲ್ ಮೊದಲಾದ ವಿಚಾರವನ್ನು ಹೇಳಿ ಅಲ್ಪಸಂಖ್ಯಾತರನ್ನು ದೂರವಿಟ್ಟರು. ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ಬಿಗಿಯಾಗಿ ತಬ್ಬಿದರು. ಈಗ ಕಾಂಗ್ರೆಸ್ ಹುಲಿಯಾಗಿದೆ. ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಜೋಡಿ ಹುಲಿಯಾಗಿದ್ದಾರೆ. ಮೊದಲು ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜೆಡಿಎಸ್‌ನಿಂದ ಬೇಸರಗೊಂಡಿದ್ದ ನನ್ನೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೆವಾಲಾ ಅವರು ಹರೀಶ್‌ಗೌಡರನ್ನು ಲೋಕಸಭೆಗೆ ನಿಲ್ಲಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ನಿಲ್ಲಿ, ಸರ್ಕಾರ ಬಂದರೆ ಮಂತ್ರಿ ಮಾಡುತ್ತೇವೆಂದು ಹೇಳಿದ್ದರು. ಆದರೆ, 2013ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಿದ್ದ ಹರೀಶ್‌ಗೌಡರ ಬದಲಿಗೆ ಎಚ್. ವಿಶ್ವನಾಥ್ ಕರೆತಂದು ನಿಲ್ಲಿಸಿದ್ದರಿಂದ ಕೈ ತಪ್ಪಿತು. 10 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದರಿಂದ ಶಾಸಕರನ್ನಾಗಿಯೇ ಮಾಡುವಂತೆ ಮುಖಂಡರು, ಯುವಕರು ಒತ್ತಡ ಹೇರಿದ್ದರಿಂದ ಹುಣಸೂರು ಕ್ಷೇತ್ರದಲ್ಲಿ ನಿಲ್ಲಿಸಬೇಕಾಯಿತು ಎಂದರು.
ಸಿದ್ದರಾಮಯ್ಯ ವಿರುದ್ಧ ನಿಲ್ಲುವ ಮನಸ್ಸು ಇರಲಿಲ್ಲ: ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ನಾನು ಅವರ ವಿರುದ್ಧ ಚುನಾವಣೆಗೆ ನಿಲ್ಲುವ ಮನಸ್ಸು ಇರಲಿಲ್ಲ. 2008 ರಲ್ಲಿ ಎಂ. ಸತ್ಯನಾರಾಯಣ ಅವರನ್ನು ಟಿಕೆಟ್ ಕೊಡಿಸಿ ಗೆಲ್ಲಿಸಿದರು. ನಾನು ಹುಣಸೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದೆ. 2013 ರಲ್ಲಿ ಹುಣಸೂರಿನಿಂದ ನನ್ನ ತವರಾದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಕಣಕ್ಕಿಳಿದೆ. ಮೂವರು ಒಕ್ಕಲಿಗರು ನಿಂತಿರುವ ಕಾರಣ ಜಿ.ಟಿ. ದೇವೇಗೌಡ ಸೋಲುತ್ತಾನೆಂದು ಹೇಳಿದರೂ ಕ್ಷೇತ್ರದ ಜನರು ಕೈಬಿಡಲಿಲ್ಲ. ನನ್ನನ್ನು ಗೆಲ್ಲಿಸಿದರು ಎಂದು ಅವರು ಭಾವುಕರಾದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 8 ಜಿಪಂ, ತಾಪಂನಲ್ಲಿ ಅಧಿಕಾರ ಹಿಡಿದಿದ್ದೆವು. ಬಿಜೆಪಿಯವರು ಸಿಎಂ ಆಗಿದ್ದಾಗಲೂ ಮೈಮುಲ್‌ನಲ್ಲಿ ಗೆದ್ದಿದ್ದೇವೆ. ಮುಂದೆ ಯಾವುದೇ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರುವ ಕಾರಣ ಮುಖಂಡರು, ಕಾರ್ಯಕರ್ತರು ಎದುರಿಸಲು ಸಜ್ಜಾಗಬೇಕು. ಕಾರ್ಯಕರ್ತರು ಮತದಾರರ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ಗೌಡ, ಮಾಜಿ ಮೇಯರ್ ಆರ್. ಲಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಗಂಗಾಧರಗೌಡ, ಮುಖಂಡರಾದ ಬೆಳವಾಡಿ ಶಿವಮೂರ್ತಿ, ಹಿನಕಲ್ ರಾಜು, ಗೆಜ್ಜಗಳ್ಳಿ ಲೋಕೇಶ್, ನಾಗನಹಳ್ಳಿ ದಿನೇಶ್, ಶಿವಕುಮಾರಸ್ವಾಮಿ ಮೊದಲಾದವರು ಇದ್ದರು.
ರಾಜ್ಯದ ಜನರು ಕಾಂಗ್ರೆಸ್‌ಗೆ ಬಹುಮತ ಕೊಟ್ಟಿದ್ದಾರೆ. 2013 ರಲ್ಲೂ ಬಹುಮತ ನೀಡಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಜನರ ತೀರ್ಪನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಿಕೊಳ್ಳಬೇಕು. ಕಾಂಗ್ರೆಸ್ ಬಡವರ ಪರವಾಗಿ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಬೇಕು.
- ಜಿ.ಟಿ. ದೇವೇಗೌಡ, ಶಾಸಕ, ಚಾಮುಂಡೇಶ್ವರಿ ಕ್ಷೇತ್ರ
ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ: ಶಾಸಕ ಕೊತ್ತೂರು ಮಂಜುನಾಥ್
ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರ ಎರಡು ಕಣ್ಣುಗಳು ಇದ್ದಹಾಗೆ. ಎರಡೂ ಕ್ಷೇತ್ರಗಳಲ್ಲಿ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ನಿಮ್ಮ ಶ್ರಮದಿಂದ ಗೆಲುವಾಗಿದ್ದು, ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ.
- ಜಿ.ಡಿ. ಹರೀಶ್‌ಗೌಡ, ಶಾಸಕ, ಹುಣಸೂರು ಕ್ಷೇತ್ರ