ಭಯ ಬೇಡ: ಶೇ. 80 ರಷ್ಟು ಕೊರೋನಾ ರೋಗಿಗಳು ಸಾಯೋದಿಲ್ಲ!
ಕೊರೋನಾ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಮತ್ತು ಸಹಯೋಗ ಅತ್ಯಗತ್ಯ. ಸದ್ಯ ನಮ್ಮ ದೊಡ್ಡ ಶತ್ರು ಕರೋನಾ ವೈರಸ್ ಅಲ್ಲ. ಇದರ ಬಗ್ಗೆ ಉಂಟಾಗಿರುವ ಭಯ, ವದಂತಿಗಳು ಮತ್ತು ಕಳಂಕ.
ಚೀನಾದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಣಿಸಿಕೊಂಡ ಕೊರೋನಾ ಸಾಂಕ್ರಮಿಕ ರೋಗವು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಈ ಮಾರಣಾಂತಿಕ ಸೋಂಕು ಭಾರತ ಸೇರಿದಂತೆ ಈಗ ಜಗತ್ತಿನ 110 ರಾಷ್ಟ್ರಗಳಲ್ಲಿ ಕಂಡುಬಂದಿದೆ. 4000 ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.
ಇದು ಈ ಹಿಂದೆ ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಸಾರ್ಸ್‌ನ ಇನ್ನೊಂದು ಭೀಕರ ರೂಪ. ಅಥವಾ ಸಾಮಾನ್ಯ ಶೀತದ ಗುಂಪಿನ ಸದಸ್ಯ. ಜ್ವರ, ತಲೆನೋವು, ಒಣ ಕೆಮ್ಮು ಕೋವಿಡ್-19 ಅಥವಾ ಕೊರೋನಾದ ಲಕ್ಷಣಗಳು.
ಕೆಲ ರೋಗಿಗಳಿಗೆ ನೋವು, ಅತಿಸಾರ ಕೂಡ ಇರುತ್ತದೆ. ಒಂದು ಒಳ್ಳೆಯ ಸುದ್ದಿ ಎಂದರೆ ಈ ರೋಗವು ಬಹುತೇಕರನ್ನು ಅಲ್ಪಮಟ್ಟಿಗೆ ಮಾತ್ರ ಬಾಧಿಸುತ್ತದೆ. 80% ರೋಗಿಗಳು ವಿಶೇಷ ಚಿಕಿತ್ಸೆಯ ಅಗತ್ಯ ಇಲ್ಲದೆಯೇ ಗುಣಮುಖರಾಗುತ್ತಾರೆ.
ಒಂದೇ ನಿಮಿಷದಲ್ಲಿ ಹೀಗೆ ಮಾಸ್ಕ್ ತಯಾರಿಸಿ, ಆನಂದ್ ಮಹೀಂದ್ರಾ ಟ್ವೀಟ್ ವೈರಲ್!
ಲಸಿಕೆಗೆ ಇನ್ನೂ 18 ತಿಂಗಳು ಬೇಕು
ವಯಸ್ಸಾದವರು ಮತ್ತು ಅಧಿಕ ರಕ್ತದ ಒತ್ತಡ, ಹೃದಯ ಸಮಸ್ಯೆ, ಮಧುಮೇಹ ಇದ್ದವರಿಗೆ ಇದು ಗಂಭೀರ ಕಾಯಿಲೆಯಾಗಿ ಪರಿವರ್ತನೆಯಾಗುತ್ತದೆ. ಅಂಥವರಲ್ಲಿ 2-3% ಜನರು ಸಾವನ್ನಪ್ಪುತ್ತಾರೆ. ಇದು ಸೀಸನಲ್ ಇನ್ಫ್ಲುಯೆಂಜಾಗಿಂತ ಅಲ್ಪಮಟ್ಟಿಗೆ ಹೆಚ್ಚಾಗಿಯೇ (0.1%) ಇರುತ್ತದೆ. ಇದುವರೆಗಿನ ಪ್ರಕರಣಗಳಲ್ಲಿ ಮಕ್ಕಳಲ್ಲಿ ಕೇವಲ 2%, ಯುವಜನತೆಯಲ್ಲಿ ಕೇವಲ 20% ಮಾತ್ರ ಈ ಸೋಂಕು ಕಂಡುಬಂದಿದೆ.
ಈ ರೋಗಕ್ಕೆ ಇದುವರೆಗೂ ಯಾವುದೇ ಔಷಧವಾಗಲೀ, ಮದ್ದಾಗಲೀ, ಲಸಿಕೆಯಾಗಲೀ ಕಂಡುಹಿಡಿದಿಲ್ಲ. ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದರೆ ಅದು ಸಾಮಾನ್ಯ ಜನರಿಗೆ ಲಭ್ಯವಾಗಬೇಕೆಂದರೆ ಕನಿಷ್ಠ 12-18 ತಿಂಗಳು ಬೇಕು. ಅನೇಕ ಪುನರಾವರ್ತಿತ ಡ್ರಗ್‌ಗಳು (ಅಂದರೆ ಎಚ್ಐವಿ, ಇನ್ಫ್ಲುಯೆಂಜಾ ಮತ್ತಿತರ ಸೋಂಕಿಗೆ ಬಳಸುವ ಡ್ರಗ್) ಕ್ಲಿನಿಕಲ್ ಪರೀಕ್ಷೆಗೆ ಒಳಗಾಗುತ್ತಿವೆ. ನೂತನ ಲಸಿಕೆ, ಮದ್ದು ಕಂಡುಹಿಡಿಯಲು ಭಾರತ ಸಂಶೊಧನೆಗಳಿಗೆ ಬೆಂಬಲ ನೀಡಬೇಕು.
ಮುನ್ನೆಚ್ಚರಿಕೆಯೇ ಮದ್ದು
ಸಣ್ಣ ಹನಿಯಿಂದಲೂ ವೈರಸ್ ಹರಡುತ್ತದೆ. ಕೊರೋನಾ ಸೋಂಕಿರುವ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಸಣ್ಣ ಹನಿಗಳು ಮೂಗು ಮತ್ತು ಬಾಯಿಯಿಂದ ಹೊರ ಬರುತ್ತವೆ. ಅದು ಸುತ್ತಮುತ್ತಲಿರುವ ವಸ್ತುಗಳ ಮೇಲೆ ಕೂರುತ್ತದೆ. ಬೇರೆಯವರು ಅದನ್ನು ಸ್ಪರ್ಶಿಸಿ ತಮ್ಮ ಮೂಗು ಕಣ್ಣು ಅಥವಾ ಮುಖ ಮುಟ್ಟಿಕೊಂಡರೆ ಅವರಿಗೂ ಸೋಂಕು ತಗುಲುತ್ತದೆ.
ಅದೃಷ್ಟವಶಾತ್ ಜನರು ಸೋಂಕಿನಿಂದ ಪಾರಾಗಲು ಹಲವು ಮಾರ್ಗೋಪಾಯಗಳಿವೆ. ಅದರಲ್ಲಿ ಎಲ್ಲದಕ್ಕಿಂತ ಮುಖ್ಯವಾದುದು ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು. ಜನರು ತಮ್ಮ ಕೈಗಳನ್ನು ಕನಿಷ್ಠ 20-30 ಸೆಕೆಂಡುಗಳ ಕಾಲ ಸೋಪು ಹಾಕಿ ಶುಚಿಗೊಳಿಸಬೇಕು. ಎರಡನೆಯದು ನೀರು ಲಭ್ಯವಿಲ್ಲದಿದ್ದಾಗ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಬಹುದು. ಹಾಗೆಯೇ ಕೆಮ್ಮು ಅಥವಾ ಸೀನುವವರಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳಿ.
ಭಾರತೀಯತೆಯನ್ನು ವಿಶ್ವದಾದ್ಯಂತ ಪರಿಚಯಿಸಿದ ಕೊರೋನಾ
ಮೂಗು, ಕಣ್ಣು ಮತ್ತು ಬಾಯಿಯನ್ನು ಪದೇ ಪದೇ ಮುಚ್ಚಿಕೊಳ್ಳದಿರಿ. ಕೆಮ್ಮುವಾಗ ಟಿಶ್ಯು, ಕರ್ಚೀಫ್ ಬಳಸಿ. ಬಳಸಿದ ಟಿಶ್ಶುವನ್ನು ಕೂಡಲೇ ಮನೆಯಿಂದ ಆಚೆ ಹಾಕಿ. ಇನ್ನು ಅನಾರೋಗ್ಯ ಇರುವವರು ಮನೆಯಲ್ಲೇ ಇರುವುದು ಒಳ್ಳೆಯದು.
ಹಾಗೆಯೇ ಯಾವುದೇ ಕಾಯಿಲೆಯ ಲಕ್ಷಣಗಳು ಇಲ್ಲದವರು ಮೆಡಿಕಲ್ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಆದರೆ ಕೆಮ್ಮು, ಜ್ವರ, ಶೀತದ ಲಕ್ಷಣ ಇರುವವರು ಮತ್ತು ರೋಗಿಗಳ ಶುಶ್ರೂಷೆ ಮಾಡುವವರು ಮಾಸ್ಕ್ ಧರಿಸಲೇಬೇಕು. ಜಗತ್ತಿನಾದ್ಯಂತ ಮೆಡಿಕಲ್ ಮಾಸ್ಕ್, ಗ್ಲೌಸ್, ಗೌನ್ಗಳು ಸೇರಿದಂತೆ ವೈಯಕ್ತಿಕ ರಕ್ಷಣಾ ಸಲಕರಣೆಗಳ ಕೊರತೆ ಉಂಟಾಗುರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ಜನರು ಭಯಭೀತರಾಗಿ ಖರೀದಿಯಲ್ಲಿ ಮುಗಿಬಿದ್ದಿರುವುದರಿಂದ ಈ ಎಲ್ಲ ವಸ್ತುಗಳ ಕೊರತೆ ಉಂಟಾಗಿದೆ. ಹಾಗಾಗಿ ಪ್ರತಿಯೊಬ್ಬರೂ ರಾಷ್ಟ್ರೀಯ ಅಥವಾ ಸ್ಥಳೀಯ ಆರೋಗ್ಯಾಧಿಕಾರಿಗಳು ನೀಡುವ ಸಲಹೆಗಳನ್ನು ಸ್ವೀಕರಿಸಬೇಕು.
ಪ್ರಯೋಗಾಲಯಗಳೇ ನಿರ್ಣಾಯಕ
ಕೊರೋನಾ ಹರಡತೊಡಗಿದ ಮೇಲೆ ಜಗತ್ತಿನಾದ್ಯಂತ ಆರೋಗ್ಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
ಭಾರತ ಸೇರಿದಂತೆ ಎಲ್ಲಾ ದೇಶಗಳು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿ ನಿರ್ವಹಣೆಯನ್ನು ಸಕ್ರಿಯಗೊಳಿಸಿವೆ. ಬಹುತೇಕ ದೇಶಗಳು ಇನ್ಫ್ಲುಯೆಂಜಾ ತಡೆಗಟ್ಟಲು ಪೂರ್ವಸಿದ್ಧತೆ ನಡೆಸಿವೆ. ಆರೋಗ್ಯ ಸಚಿವಾಲಯದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ (ಐಎಚ್‌ಐಪಿ) ಇನ್ಫ್ಲುಯೆಂಜಾ, ನ್ಯುಮೋನಿಯಾ ರೀತಿಯ ಸಾಂಕ್ರಾಮಿಕ ರೋಗಗಳ ಕಣ್ಗಾವಲಾಗಿ ಕೆಲಸ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಪ್ರಯೋಗಾಲಯಗಳು ನಿರ್ಣಾಯಕ ಎಂದನಿಸುತ್ತವೆ. ಏಕೆಂದರೆ ಸೋಂಕಿತ ಪ್ರಕರಣಗಳನ್ನು ಶೀಘ್ರವಾಗಿ ಕಂಡುಹಿಡಿದು, ಶಂಕಿತರನ್ನು ಸಂಪರ್ಕಿಸಿ ರೋಗ ಹರಡುವುದನ್ನು ನಿಯಂತ್ರಿಸಬಹುದು.
ಆಸ್ಪತ್ರೆಗಳು ಮತ್ತು ಅಲ್ಲಿನ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತ ಕರೋನಾ ಪೀಡಿತರು ದಾಖಲಾದರೂ ಅವರಿಗೆ ಚಿಕಿತ್ಸೆ ನೀಡಲು ಸಿದ್ಧರಾಗಿರಬೇಕು. ವೈರಸ್‌ನ ಭೌಗೋಳಿಕ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಬೇಕು. ಜೊತೆಗೆ ಪ್ರಸರಣ ತೀವ್ರತೆ, ರೋಗದ ಪ್ರವೃತ್ತಿಗಳು, ವೈರಾಲಾಜಿಕ್ ವೈಶಿಷ್ಟ್ಯಗಳು, ಅವುಗಳ ಗುಣಲಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲೆ ರೋಗದ ಪ್ರಭಾವದ ಬಗ್ಗೆ ಮೌಲ್ಯಮಾಪನ ಮಾಡುತ್ತಿರಬೇಕು.
ವಿಮಾನ ನಿಲ್ದಾಣ ಮತ್ತು ಬಂದರುಗಳ ಪ್ರವೇಶದ ಸ್ಥಳಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಹಿತಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮತ್ತೊಂದು ಪ್ರಮುಖ ವಿಷಯ ಎಂದರೆ ಸರ್ಕಾರ ಸಾರ್ವಜನಿಕರಿಗೆ ನೀಡುವ ಮಾಹಿತಿಯು ಸ್ಪಷ್ಟವಾಗಿಯೂ ಖಚಿತವಾಗಿಯೂ ಇರಬೇಕು.
ಅನಗತ್ಯ ಗೊಂದಲಕ್ಕೆ ಹಾದಿ ಮಾಡಿಕೊಡುವಂತಿರಬಾರದು. ಹಾಗೆಯೇ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಮತು ರೋಗ ನಿಯಂತ್ರಣಕ್ಕೆ ಅವರೇನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು.
ಕೊರೋನಾ ವೈರಸ್; ಹಲಸಿನ ಹಣ್ಣಿಗೆ ಬೇಡಿಕೆ, ಕೋಳಿ ಬೆಲೆ ಪಾತಾಳಕ್ಕೆ!
ಪಾರದರ್ಶಕತೆ ಮುಖ್ಯ
ವಿಶ್ವಾಸಾರ್ಹ ತಜ್ಞರು ಮತ್ತು ಸಮುದಾಯದ ಮುಖಂಡರಿಂದ ಸ್ಪಷ್ಟಮತ್ತು ಸ್ಥಿರವಾದ ಸಂದೇಶಗಳನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಸಾರ ಮಾಡಬೇಕಾಗಿದೆ. ಪಠ್ಯ ಮತ್ತು ಟೆಲಿಫೋನ್ ಹಾಟ್‌ಲೈನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ದ್ವಿಮುಖ ಚಾನಲ್‌ಗಳ ಮೂಲಕ ಜನರು ಮಾಹಿತಿ ಪಡೆಯಬಹುದು ಮತ್ತು ಅವರಲ್ಲಿ ಉದ್ಭವವಾಗಿರುವ ಪ್ರಶ್ನೆಗಳನ್ನೂ ಕೇಳಬಹುದು. ಸುಳ್ಳು ಸುದ್ದಿ ಹರಡುವಿಕೆ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಇದು ಪ್ರಮುಖ ಅಸ್ತ್ರ.
ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ರೋಗದ ಬಗ್ಗೆ ಸಾರ್ವಜನಿಕರೊಂದಿಗೆ ಪಾರದರ್ಶಕ ಮತ್ತು ಮುಕ್ತವಾಗಿರುವುದು ಎಷ್ಟುಮುಖ್ಯ ಎಂದು ನಾನು ಒತ್ತಿ ಹೇಳಲಾರೆ. ಸರ್ಕಾರವು ತಮ್ಮೊಂದಿಗೆ ನಿಸ್ಸಂಶಯವಾಗಿ ವರ್ತಿಸುತ್ತಿದೆ ಎಂದು ಜನರು ನಂಬಿದಾಗ, ಅವರು ತಮ್ಮ ಮತ್ತು ತಮ್ಮ ಸಮುದಾಯಗಳಿಗೆ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಬದಲಾಗುತ್ತಿರುವ ಸಾಂಕ್ರಾಮಿಕ ರೋಗಶಾಸ್ತ್ರದ ಆಧಾರದ ಮೇಲೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಿರ್ದಿಷ್ಟಸಂದರ್ಭಗಳಿಗೆ ಅನುಗುಣವಾಗಿ ಮತ್ತು ಆಗಾಗ್ಗೆ ಮೌಲ್ಯಮಾಪನ ಮತ್ತು ನವೀಕರಿಸಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಮತ್ತು ಇತರ ಎಲ್ಲ ದೇಶಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ತಾಂತ್ರಿಕ ಮಾರ್ಗದರ್ಶನವನ್ನೂ ನೀಡಲಾಗಿದೆ.
ಒಟ್ಟಾರೆ ಕೊರೋನಾ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಸಮನ್ವಯ ಮತ್ತು ಸಹಯೋಗ ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಹೇಳಿದಂತೆ ಸದ್ಯ ನಮ್ಮ ದೊಡ್ಡ ಶತ್ರು ಕರೋನಾ ವೈರಸ್ ಅಲ್ಲ. ಇದರ ಬಗ್ಗೆ ಉಂಟಾಗಿರುವ ಭಯ, ವದಂತಿಗಳು ಮತ್ತು ಕಳಂಕ. ನಮ್ಮ ದೊಡ್ಡ ಭರವಸೆ ಎಂದರೆ ಸತ್ಯ ಮತ್ತು ಏಕತೆ.
- ಸೌಮ್ಯಾ ಸ್ವಾಮಿನಾಥನ್
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ