ಮುಂಬೈ[ಮಾ.12]: ಕೊರೋನಾ ವೈರಸ್ ಸದ್ಯ ಇಡೀ ವಿಶ್ವಕ್ಕೇ ಹರಡಿದೆ. ಜನರು ಈ ಮಾರಕ ವೈರಸ್ ನಿಂದ ರಕ್ಷಿಸಿಕೊಳ್ಳಲು ಫೇಸ್ ಮಾಸ್ಕ್ ಮೊರೆ ಹೋಗಿದ್ದಾರೆ. ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಟಾಯ್ಲೆಟ್ ಪೇಪರ್ ಕೊರತೆ ಎದುರಾಗುತ್ತಿರುವ ವರದಿಗಳು ಸದ್ಯ ಎಲ್ಲೆಡೆ ಸೌಂಡ್ ಮಾಡುತ್ತಿವೆ. ಹೀಗಿರುವಾಗ ಉದ್ಯಮಿ ಆನಂದ್ ಮಹೀಂದ್ರಾ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದು, ಇದರಲ್ಲೊಬ್ಬ ಮಹಿಳೆ ಮನೆಯಲ್ಲೇ ಸಿಂಪಲ್ ಆಗಿ ಹೇಗೆ ಮಾಸ್ಕ್ ತಯಾರಿಸುವುದು ಎಂಬುವುದನ್ನು ಹೇಳಿಕೊಟ್ಟಿದ್ದಾರೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು DIY ಫೇಸ್ ಮಾಸ್ಕ್ ತಯಾರಿಸುತ್ತಿರುವ ದೃಶ್ಯಗಳಿದ್ದು, ಇದನ್ನು ಒಬ್ಬ ವ್ಯಕ್ತಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾಗಿದೆ. ಮಹಿಳೆ ಚೌಕಾಕಾರದ ಟಿಶ್ಯೂ ಪೇಪರ್ ತೆಗೆದುಕೊಂಡು, ಅದನ್ನು ರೆಕ್ಕೆಯಂತೆ ಮಾಡುತ್ತಾಳೆ. ಬಳಿಕ ಅದರ ಎರಡೂ ಬದಿಯಲ್ಲಿ ರಬ್ಬರ್ ಬ್ಯಾಂಡ್ ಸಿಕ್ಕಿಸಿ, ಪಿನ್ ಮಾಡುತ್ತಾಳೆ. ಬಳಿಕ ಇದನ್ನು ಧರಿಸಿಕೊಳ್ಳುತ್ತಾಳೆ. ಮಾರುಕಟ್ಟೆಯಲ್ಲಿ ಜನರು ಯಾವ ರೀತಿಯ ಮಾಸ್ಕ್ ಧರಿಸಿ ಓಡಾಡುತ್ತಾರೋ ಅದರಂತೆಯೇ ಇದು ಕಾಣಿಸಿಕೊಳ್ಳುತ್ತದೆ.

ಈ ವಿಡಿಯೋ ಶೇರ್ ಮಾಡಿಕೊಂಡಿರುವ ಆನಂದ್ ಮಹೀಂದ್ರಾ 'ಫೇಸ್ ಮಾಸ್ಕ್ ಕೊರತೆ ಇರುವುದಿಲ್ಲವೇ? ಭಾರತೀಯರು ಕ್ರಿಯೇಟಿವಿಟಿಯಲ್ಲಿ ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ' ಎಂದು ಬರೆದಿದ್ದಾರೆ.

ಈ ವಿಡಿಯೋಗೆ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಕೆಲವರಂತೂ ಬೇರೆ ಯಾವೆಲ್ಲಾ ರೀತಿಯಲ್ಲಿ ಮಾಸ್ಕ್ ತಯಾರಿಸಬಹುದು ಎಂಬುವುದನ್ನೂ ಇಲ್ಲಿ ಶೇರ್ ಮಾಡಿಕೊಂಡಿದ್ದಾರೆ.