ಬೀಜಿಂಗ್‌[ಜ.27]: ಕಳೆದ ಎರಡು ವಾರದಿಂದ ಚೀನಾದಲ್ಲಿ ಭಾರೀ ತಲ್ಲಣ ಹುಟ್ಟುಹಾಕಿರುವ ಕೊರೋನಾ ವೈರಸ್‌, ಅಂದುಕೊಂಡಿದ್ದಕ್ಕಿಂತಲೂ ಗಂಭೀರ ಸ್ವರೂಪದಲ್ಲಿ ದೇಶವ್ಯಾಪಿಯಾಗಿರುವ ಆತಂಕ ಕಾಡಿದೆ. ಚೀನಾ ಸರ್ಕಾರ ಇದುವರೆಗೆ ದೇಶದಲ್ಲಿ ಇದೇ ವೇಳೆ 2684 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. 1975 ಜನರಿಗೆ ವೈರಸ್‌ ಸೋಂಕು ತಗುಲಿದೆ. ಈ ಪೈಕಿ 324 ಜನ ಗಂಭೀರ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಭಾನುವಾರ ಮತ್ತೆ 15 ಜನ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 56ಕ್ಕೆ ಏರಿದೆ ಎಂದು ಹೇಳಿದೆ.

ಚೀನಾದಿಂದ ಬಂದ ವ್ಯಕ್ತಿಗೆ ಕೊರೋನಾ ಸೋಂಕಿಲ್ಲ, ಶೀತ ನೆಗಡಿಯಷ್ಟೇ ಆಗಿದೆ!

ಆದರೆ ಬಾಹ್ಯ ಜಗತ್ತಿಗೆ ಚೀನಾ ನೀಡುತ್ತಿರುವ ರೋಗಪೀಡಿತರ ಸಂಖ್ಯೆಗೂ, ವಾಸ್ತವವಾಗಿ ರೋಗ ಪೀಡಿತರ ಸಂಖ್ಯೆಗೂ ಭಾರೀ ಅಜಗಜಾಂತರ ವ್ಯತ್ಯಾಸವಿದೆ. ಮೂಲಗಳ ಪ್ರಕಾರ ಈಗಾಗಲೇ ಚೀನಾದಲ್ಲಿ 90000ಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಆದರೆ ವಾಸ್ತವ ಸಂಗತಿ ಬಹಿರಂಗಪಡಿಸುವುದು ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕಾಗಿಯೇ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸತ್ಯಸಂಗತಿಯನ್ನು ಮುಚ್ಚಿಡುತ್ತಿದೆ ಎಂದು ಹೇಳಲಾಗಿದೆ.

ವುಹಾನ್‌ ಹಾಗೂ ಇತರ 17 ನಗರಗಳಲ್ಲಿ ಈ ರೋಗ ಕೇಂದ್ರೀಕೃತವಾಗಿದೆ. ಇಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸಿವೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಚ್ಚು ವೈರಾಣು ವ್ಯಾಧಿ ಪತ್ತೆಯಾಗಿರುವ ವುಹಾನ್‌ನಲ್ಲಿ ಹೊಸದಾಗಿ 1000ಕ್ಕೂ ಹೆಚ್ಚು ಜನರಿಗೆ ರೋಗ ಹಬ್ಬಿರುವ ಸಾಧ್ಯತೆ ಇದೆ ಎಂದು ಸ್ವತಃ ವುಹಾನ್‌ ಮೇಯರ್‌ ಬಹಿರಂಗಪಡಿಸಿದ್ದಾರೆ.

ಆತಂಕ:

ವೈರಾಣು ವ್ಯಾಧಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ‘ದೇಶದಲ್ಲಿ ಭೀಕರ ಪರಿಸ್ಥಿತಿ ಇದೆ. ಆದರೆ ಈ ಯುದ್ಧವನ್ನು ನಾವು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ರೋಗ ನಿಯಂತ್ರಣದ ಮೇಲೆ ನಿಗಾ ವಹಿಸಲು ವಿಶೇಷ ಸಮಿತಿ ರಚಿಸಿದೆ.

ಚೀನಾದಲ್ಲಿ ಕೊರೋನಾ, ಪರಿಸ್ಥಿತಿ ಅತೀ ಗಂಭೀರ: ಮತ್ತೆ 15 ಬಲಿ, 237 ಜನರ ಸ್ಥಿತಿ ಚಿಂತಾಜನಕ!

14 ದೇಶಗಳಲ್ಲಿ ರೋಗಿಗಳು:

ಕೊರೋನಾ ವೈರಾಣು ಈಗಾಗಲೇ 14 ದೇಶಗಳಲ್ಲಿ ಪತ್ತೆಯಾಗಿದೆ. ಕೆನಡಾ (1), ಅಮೆರಿಕ (3), ಫ್ರಾನ್ಸ್‌ (3), ಥಾಯ್ಲೆಂಡ್‌(4), ನೇಪಾಳ (1), ಮಲೇಷ್ಯಾ (3), ದ.ಕೊರಿಯಾ (2), ಜಪಾನ್‌ (3), ತೈವಾನ್‌ (1), ಹಾಂಗ್‌ಕಾಂಗ್‌ (5), ಮಕಾವ್‌ (2), ಸಿಂಗಾಪುರ (3), ವಿಯೆಟ್ನಾಂ (2), ಆಸ್ಪ್ರೇಲಿಯಾ (3) ಪ್ರಕರಣಗಳು ಖಚಿತಪಟ್ಟಿವೆ.

ವನ್ಯಪ್ರಾಣಿ ವ್ಯಾಪಾರ ನಿಷೇಧ:

ಕೊರೋನಾ ವೈರಸ್‌ ಹಬ್ಬಿದ ಬೆನ್ನಲ್ಲೇ ಚೀನಾದಲ್ಲಿ ಕಾಡುಪ್ರಾಣಿಗಳ ವ್ಯಾಪಾರಕ್ಕೆ ತಾತ್ಕಾಲಿಕ ನಿಷೇಧ ಹೇರಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ವೈರಸ್‌ ರೋಗವು ವುಹಾನ್‌ ನಗರದ ಕಾಡುಪ್ರಾಣಿಗಳ ಮಾರುಕಟ್ಟೆಯಿಂದಲೇ ಉಗಮವಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧ ವಿಧಿಸಲಾಗಿದೆ. ಕಾಡುಪ್ರಾಣಿಗಳಲ್ಲಿನ ರೋಗಕಾರಕಗಳು ಮಾನವನಿಗೆ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಡುಪ್ರಾಣಿಗಳ ಮಾರಾಟ ಮಾನವನ ಆರೋಗ್ಯಕ್ಕೆ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

2002ರಲ್ಲಿ ಸಾರ್ಸ್‌ ರೋಗ ಹಬ್ಬುವಿಕೆಗೂ ಪ್ರಾಣಿಗಳೇ ಕಾರಣವಾಗಿದ್ದವು. ರೋಗವು ಬಾವಲಿಗಳಲ್ಲಿ ಮೊದಲು ಕಾಣಿಸಿಕೊಂಡು ನಂತರ ಮಾನವನಿಗೆ ಹರಡಿತ್ತು.

ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!

ಭಾರತದ ದೂತಾವಾಸ ನಿಗಾ:

ಚೀನಾದಲ್ಲಿರುವ ಭಾರತೀಯರ ಮೇಲೆ ಬೀಜಿಂಗ್‌ನಲ್ಲಿನ ಭಾರತದ ದೂತಾವಾಸ ನಿಗಾ ವಹಿಸಿದೆ. ಭಾರತೀಯರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ನಿರಂತರವಾಗಿ ಅವರ ಯೋಗಕ್ಷೇಮ ವಿಚಾರಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

‘ಈಗಾಗಲೇ ಭಾರತೀಯರಿಗೆ ಹಾಟ್‌ಲೈನ್‌ ಸಹಾಯವಾಣಿ ಕೂಡ ಆರಂಭಿಸಲಾಗಿದೆ. 8618612083629 ಮತ್ತು +8618612083617ಕ್ಕೆ ಕರೆ ಮಾಡಿದರೆ ತಕ್ಷಣವೇ ಸಹಾಯಕ್ಕೆ ಧಾವಿಸಲಾಗುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕೇವಲ 15 ದಿನದಲ್ಲಿ ಚೀನಾ ನಿರ್ಮಿಸಲಿದೆ 1300 ಹಾಸಿಗೆ ಆಸ್ಪತ್ರೆ!

ಬೀಜಿಂಗ್‌: ದಿನೇ ದಿನೇ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಹೆಚ್ಚುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಇನ್ನೊಂದು ಫಟಾಫಟ್‌ ಆಸ್ಪತ್ರೆಗೆ ನಿರ್ಮಾಣಕ್ಕೆ ನಿರ್ಧರಿಸಿದೆ. ಅತ್ಯಂತ ಹೆಚ್ಚು ಕೊರೋನಾ ವೈರಸ್‌ ಪೀಡಿತರು ಪತ್ತೆಯಾಗಿರುವ ವುಹಾನ್‌ನಲ್ಲಿ 1300 ಹಾಸಿಗೆ ಸಾಮರ್ಥದ ಹೊಸ ಆಸ್ಪತ್ರೆಯನ್ನು ಕೇವಲ 15 ದಿನಗಳಲ್ಲಿ ಕಟ್ಟಲು ಸರ್ಕಾರ ನಿರ್ಧರಿಸಿದೆ. ಅದು ಈಗಾಗಲೇ ವುಹಾನ್‌ನಲ್ಲೇ 10 ದಿನದೊಳಗೆ 1000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಆರಂಭಿಸಿದೆ. ಈ ಆಸ್ಪತ್ರೆಗಳನ್ನು ಕಟ್ಟಲು ಭಾರೀ ಸಂಖ್ಯೆಯಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಕೂಲಿಕಾರ್ಮಿರಿಗೆ ಸಾಮಾನ್ಯ ವೇತನದ ಮೂರು ಪಟ್ಟು ವೇತನವನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!