ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧವೂ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಗೋಚರಿಸುತ್ತಿದೆ. ಭಾರತದ ಸರ್ಕಾರಿ ಕಾಂಟ್ರ್ಯಾಕ್ಟ್‌ಗಳಿಗೆ ಬಿಡ್‌ ಮಾಡುವ ಸಂಬಂಧ ಚೀನಾ ಕಂಪನಿಗಳ ಮೇಲೆ ಹಾಕಲಾಗಿದ್ದ ಐದು ವರ್ಷಗಳ ಹಿಂದಿನ ನಿರ್ಬಂಧವನ್ನು ಇದೀಗ ಕೇಂದ್ರ ಸರ್ಕಾರ ರದ್ದುಪಡಿಸಿದೆ.

ನವದೆಹಲಿ: ಮಾನಸ ಸರೋವರ ಯಾತ್ರೆ ಪುನರಾರಂಭ, ನೇರ ವಿಮಾನ ಸೇವೆ ಮತ್ತೆ ಶುರುವಾದ ಬೆನ್ನಲ್ಲೇ ಇದೀಗ ಭಾರತ-ಚೀನಾ ನಡುವಿನ ವಾಣಿಜ್ಯ ಸಂಬಂಧವೂ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಗೋಚರಿಸುತ್ತಿದೆ. ಭಾರತದ ಸರ್ಕಾರಿ ಕಾಂಟ್ರ್ಯಾಕ್ಟ್‌ಗಳಿಗೆ ಬಿಡ್‌ ಮಾಡುವ ಸಂಬಂಧ ಚೀನಾ ಕಂಪನಿಗಳ ಮೇಲೆ ಹಾಕಲಾಗಿದ್ದ ಐದು ವರ್ಷಗಳ ಹಿಂದಿನ ನಿರ್ಬಂಧವನ್ನು ಇದೀಗ ಕೇಂದ್ರ ಸರ್ಕಾರ ರದ್ದುಪಡಿಸವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಮೂಲಕ ಐದು ವರ್ಷಗಳ ಹಿಂದಿನ ಗಲ್ವಾನ್‌ ಸಂಘರ್ಷ ಬಳಿಕ ಹದಗೆಟ್ಟಿದ್ದ ವಾಣಿಜ್ಯ ಸಂಬಂಧ ಪುನಸ್ಥಾಪನೆಗೆ ಮುಂದಾಗಿದೆ.

ಗಲ್ವಾನ್‌ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಟು ಹದಗೆಟ್ಟಿತ್ತು

2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಭವಿಸಿದ್ದ ಗಲ್ವಾನ್‌ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ವ್ಯಾಪಾರ-ವಹಿವಟು ಹದಗೆಟ್ಟಿತ್ತು. ಚೀನಾದ ಕಂಪನಿಗಳ ಮೇಲೆ ಭಾರತ ಹಲವು ನಿರ್ಬಂಧಗಳನ್ನು ಹೇರಿತ್ತು. ಭಾರತದಲ್ಲಿ 67.45 ಲಕ್ಷ ಕೋಟಿ ರು. ವೆಚ್ಚದ ಸರ್ಕಾರಿ ಟೆಂಡರ್‌ಗಳಿಂದ ಚೀನಾ ಕಂಪನಿಗಳನ್ನು ದೂರವಿಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇತ್ತೀಚೆಗಷ್ಟೇ 1,900 ಕೋಟಿ ಮೌಲ್ಯದ ರೈಲು ಯೋಜನೆಯಿಂದ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ಕಂಪನಿಯನ್ನು ಹೊರಗಿಡಲಾಗಿತ್ತು.

ವಿದ್ಯುತ್‌ ಯೋಜನೆಗಳಿಗೆ ಅಗತ್ಯವಿದ್ದ ಉಪಕರಣ ತರಿಸಲೂ ಸಮಸ್ಯೆಯಾಗಿತ್ತು

ಆದರೆ ಚೀನಾ ಕಂಪನಿಗಳ ಮೇಲಿನ ನಿರ್ಬಂಧದಿಂದಾಗಿ ವಿದ್ಯುತ್‌ ಯೋಜನೆಗಳಿಗೆ ಅಗತ್ಯವಿದ್ದ ಉಪಕರಣಗಳನ್ನು ಚೀನಾದಿಂದ ತರಿಸಲೂ ಸಮಸ್ಯೆಯಾಗಿತ್ತು. ಆದರೆ ಇತ್ತೀಚೆಗೆ ಅಮೆರಿಕದ ಬದಲಾಗಿರುವ ನಿಲುವಿನ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ಚೀನಾ ಕಂಪನಿಗಳ ಮೇಲಿನ ನಿರ್ಬಂಧ ತೆರವಿನ ಕುರಿತು ಚಿಂತನೆ ನಡೆಸಿದೆ. ಈ ಕುರಿತ ಅಂತಿಮ ನಿರ್ಧಾರ ಪ್ರಧಾನಿ ತೆಗೆದುಕೊಳ್ಳಲಿದ್ದಾರೆ.