ಕುಸಿಯುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಚೀನಾ ಸರ್ಕಾರವು ಕಾಂಡೋಮ್‌ಗಳು ಮತ್ತು ಗರ್ಭನಿರೋಧಕಗಳ ಮೇಲಿನ ಮೂರು ದಶಕಗಳ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿ, ಶೇ.13ರಷ್ಟು ತೆರಿಗೆ ವಿಧಿಸಿದೆ. 

ಬೀಜಿಂಗ್‌ (ಜ.3): ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ಸರ್ವ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ, ಚೀನಾ ಜನ ಮಾತ್ರ ಈ ವಿಚಾರದಲ್ಲಿ ಉತ್ಸುಕರಾಗಿಲ್ಲ. ಅದೇ ಕಾರಣಕ್ಕಾಗಿ ಚೀನಾ ಪ್ರಮುಖ ನಿರ್ಧಾರ ಮಾಡಿದ್ದು, ಕಾಂಡೋಮ್‌ಗಳ ಮೇಲೆ ಶೇ.13ರಷ್ಟು ತೆರಿಗೆ ವಿಧಿಸಲು ತೀರ್ಮಾನ ಮಾಡಿದೆ.

ಜನವರಿ 1 ರಿಂದಲೇ ಗರ್ಭನಿರೋಧಕ ಔಷಧಗಳು ಮತ್ತು ಸಾಧನಗಳ ಮೇಲಿನ ಮೂರು ದಶಕಗಳಷ್ಟು ಹಳೆಯದಾದ ತೆರಿಗೆ ವಿನಾಯಿತಿಯನ್ನು ತೆಗೆದುಹಾಕಿದೆ. ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳ ಮೇಲೆ ಈಗ 13% ಮೌಲ್ಯವರ್ಧಿತ ತೆರಿಗೆ ಅನ್ವಯಿಸುತ್ತದೆ. ಇದು ಹೆಚ್ಚಿನ ಗ್ರಾಹಕ ಸರಕುಗಳಿಗೆ ಪ್ರಮಾಣಿತ ದರವಾಗಿದೆ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಬೀಜಿಂಗ್ ಜನನ ಪ್ರಮಾಣವನ್ನು ಹೆಚ್ಚಿಸಲು ಹೆಣಗಾಡುತ್ತಿರುವಾಗ ಈ ಕ್ರಮ ಕೈಗೊಳ್ಳಲಾಗಿದೆ. 2024 ರಲ್ಲಿ ಚೀನಾದ ಜನಸಂಖ್ಯೆಯು ಸತತ ಮೂರನೇ ವರ್ಷವೂ ಕುಸಿದಿದ್ದು,ಈ ಹಿಂಜರಿತ ಮುಂದುವರಿಯುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಜನನ ಪ್ರಮಾಣ ಹೆಚ್ಚುಸಲು ಹಲವು ಕ್ರಮ ಜಾರಿ

2024 ರಲ್ಲಿ "ಸಂತಾನೋತ್ಪತ್ತಿ ಸ್ನೇಹಿ" ಕ್ರಮಗಳ ಸರಣಿಯನ್ನು ಅನುಸರಿಸಿ, ಚೀನಾ ಮಕ್ಕಳ ಆರೈಕೆ ಸಬ್ಸಿಡಿಗಳನ್ನು ವೈಯಕ್ತಿಕ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿತು ಮತ್ತು ಕಳೆದ ವರ್ಷ ವಾರ್ಷಿಕ ಮಕ್ಕಳ ಆರೈಕೆ ಸಬ್ಸಿಡಿಯನ್ನು ಜಾರಿಗೆ ತಂದಿತು. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಮದುವೆ, ಪ್ರೀತಿ, ಫಲವತ್ತತೆ ಮತ್ತು ಕುಟುಂಬವನ್ನು ಸಕಾರಾತ್ಮಕ ರೀತಿಯಲ್ಲಿ ಚಿತ್ರಿಸಲು "ಪ್ರೀತಿಯ ಶಿಕ್ಷಣ"ವನ್ನು ಒದಗಿಸುವಂತೆ ಒತ್ತಾಯಿಸುವುದು ಸೇರಿದಂತೆ ಮುಂದತ ಕ್ರಮಳನ್ನು ಒಳಗೊಂಡಿತ್ತು.

ಜನನ ಪ್ರಮಾಣವನ್ನು ಸ್ಥಿರಗೊಳಿಸಲು "ಸಕಾರಾತ್ಮಕ ವಿವಾಹ ಮತ್ತು ಮಕ್ಕಳನ್ನು ಹೆರುವ ಮನೋಭಾವ" ವನ್ನು ಉತ್ತೇಜಿಸುವುದಾಗಿ ಕಳೆದ ತಿಂಗಳು ನಡೆದ ವಾರ್ಷಿಕ ಕೇಂದ್ರ ಆರ್ಥಿಕ ಕಾರ್ಯ ಸಮ್ಮೇಳನದಲ್ಲಿ ಉನ್ನತ ನಾಯಕರು ಪ್ರತಿಜ್ಞೆ ಮಾಡಿದ್ದರು. 1980 ರಿಂದ 2015 ರವರೆಗೆ ಚೀನಾ ಜಾರಿಗೆ ತಂದ ಒಂದು ಮಗು ನೀತಿ ಮತ್ತು ತ್ವರಿತ ನಗರೀಕರಣದ ಪರಿಣಾಮವಾಗಿ ಚೀನಾದ ಜನನ ಪ್ರಮಾಣ ದಶಕಗಳಿಂದ ಕುಸಿಯುತ್ತಿದೆ.