Asianet Suvarna News Asianet Suvarna News

ಸತ್ತ ನಂತರ 14 ವರ್ಷ ಕೆಲಸಕ್ಕೆ ಬಂದು ಪಿಂಚಣಿ ಪಡೆದ ಮಹಿಳೆ? ಏನಿದು ರಹಸ್ಯ

China Woman: ಸಾವಿನ ನಂತರ ಯಾರಾದರೂ ಹೇಗೆ ಕೆಲಸ ಮಾಡಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತದೆ. ಆದ್ರೆ ಇದು ದೆವ್ವ, ಭೂತದ ಕೆಲಸವಲ್ಲ. ಮೃತ ಮಹಿಳೆಯ ಸೋದರಿ ಮಾಡಿದ ದೊಡ್ಡ ವಂಚನೆ ಇದಾಗಿದೆ ಎಂದು ಚೀನಾ ಪತ್ರಿಕೆಗಳು ವರದಿ ಮಾಡಿವೆ

China woman worked 14 year and received pension after death mrq
Author
First Published Jun 3, 2024, 11:39 AM IST

ಬೀಜಿಂಗ್: ಸಾವನ್ನಪ್ಪಿದ ನಂತರ ಮಹಿಳೆಯೊಬ್ಬರು (Woman) ಸುಮಾರು 14 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಿವೃತ್ತಿ ಪಡೆದ ಬಳಿಕವೂ ಕೆಲ ವರ್ಷ ಪಿಂಚಣಿಯನ್ನು (Pension) ಪಡೆದುಕೊಂಡಿರುವ ಘಟನೆಯೊಂದು ಚೀನಾದಲ್ಲಿ (China) ಬೆಳಕಿಗೆ ಬಂದಿದೆ. 1993ರಲ್ಲಿ ಮಹಿಳೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆದರೂ ಮಹಿಳೆ 2007ರವರೆಗೆ ಚೀನಾದ ವುಹಾನ್ ಕಾರ್ಖಾನೆಗೆ ಬಂದು ಕೆಲಸ ಮಾಡಿದ್ದಾಳೆ. 2007ರಲ್ಲಿ ನಿವೃತ್ತಿ ಹೊಂದಿದ ನಂತರ 2023ರವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಂಡಿದ್ದಾರೆ. 2023ರವರಗೆ 393,676 ಯುವಾನ್ (ಅಂದಾಜು 46.21 ಲಕ್ಷ ರೂಪಾಯಿ) ಪಿಂಚಣಿ ತೆಗೆದುಕೊಂಡಿದ್ದಾರೆ. ಅದೇಗೆ ಸತ್ತ ಮಹಿಳೆ ಕೆಲಸ ಮಾಡಿ ಪಿಂಚಣಿ ಪಡೆಯುತ್ತಾರೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ?  ಅದಕ್ಕೆ ಉತ್ತರ ಇಲ್ಲಿದೆ ನೋಡಿ. 

ಸಾವಿನ ನಂತರ ಯಾರಾದರೂ ಹೇಗೆ ಕೆಲಸ ಮಾಡಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತದೆ. ಆದ್ರೆ ಇದು ದೆವ್ವ, ಭೂತದ ಕೆಲಸವಲ್ಲ. ಮೃತ ಮಹಿಳೆಯ ಸೋದರಿ ಮಾಡಿದ ದೊಡ್ಡ ವಂಚನೆ ಇದಾಗಿದೆ ಎಂದು ಚೀನಾ ಪತ್ರಿಕೆಗಳು ವರದಿ ಮಾಡಿವೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ವುಹೈನ ಅನ್ ಹೆಸರಿನ ಮಹಿಳೆ 1993ರಲ್ಲಿ ಕಾರ್ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆದ್ರೆ ಅನ್ ಸೋದರಿ ಈ ಸಾವನ್ನು ಮುಚ್ಚಿಡುತ್ತಾರೆ. ಸೋದರಿ ಮೃತ ಬಳಿಕ ತಾನೇ ಅನ್ ಎಂದು ಪರಿಚಯ ಮಾಡಿಕೊಂಡು ಸಮಾಜದ ಮುಂದೆ ಬರುತ್ತಾಳೆ. 

16 ವರ್ಷ ಪಿಂಚಣಿ ಪಡೆದ ಮಹಿಳೆ

ಸೋದರಿ ಮೃತಳಾಗುತ್ತಿದ್ದಂತೆ ತನ್ನ ಎಲ್ಲಾ ದಾಖಲೆಗಳನ್ನು ನಾಶ ಮಾಡಿ ತಾನೇ ಅನ್ ಎಂದು ಕಾರ್ಖಾನೆಯ ಕೆಲಸಕ್ಕೆ ಸೇರುತ್ತಾರೆ. ಸೋದರಿಯರು ನೋಡಲು ಒಂದೇ ರೀತಿ ಕಾಣುತ್ತಿದ್ದರೇ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಸೋದರಿ ಸಾವನ್ನಪ್ಪಿದ ಬಳಿಕ ಇಡೀ ಜೀವನವನ್ನು ಅನ್ ಹೆಸರಿನಲ್ಲಿ ಕಳೆದಿದ್ದಾಳೆ. ವುಹೈ ನಗರದ ಹೈಬೋವಾನ್ ಜಿಲ್ಲಾ ಪೀಪಲ್ಸ್ ಕೋರ್ಟ್ ಪ್ರಕಾರ, 2007ರಲ್ಲಿ ಸಹೋದರಿ ನಿವೃತ್ತಿಯಾಗುವವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ನಂತರ 2023ರ ವರೆಗೆ ಒಟ್ಟು 16 ವರ್ಷಗಳ ಕಾಲ ಸೋದರಿ ಅನ್‌  ಹೆಸರಲ್ಲಿ ಪಿಂಚಣಿಯನ್ನೂ ಪಡೆದಿದ್ದಳು.

50 ವರ್ಷದ ನಂತರ ಮನೆಯಲ್ಲಿದ್ದ ಸೀಕ್ರೆಟ್ ರೂಮ್ ಬಾಗಿಲು ತೆಗೆದ ಮಹಿಳೆಗೆ ಆಗಿದ್ದೇನು?

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೊನೆಗೆ ಮಹಿಳೆಯೇ ತಪ್ಪೊಪ್ಪಿಕೊಂಡ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ತಪ್ಪೊಪ್ಪಿಕೊಂಡ ಮಹಿಳೆ ತಾನು ಪಡೆದಿರುವ ಸಂಬಳ ಹಾಗೂ ಪಿಂಚಣಿಯನ್ನು ಹಿಂದಿರುಗಿಸುವಾಗಿ ಒಪ್ಪಿಕೊಂಡಿದ್ದಾಳೆ. ತಪ್ಪೊಪ್ಪಿಕೊಂಡ ಕಾರಣದಿಂದ ನ್ಯಾಯಾಲಯ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ  25,000 ಯುವಾನ್ ( 2.92 ಲಕ್ಷ ರೂಪಾಯಿ) ದಂಡ ವಿಧಿಸಿ ಆದೇಶ ನೀಡಿದೆ. ಅಂತಿಮವಾಗಿ ನ್ಯಾಯಾಲಯ ಜೈಲು ಶಿಕ್ಷೆಯನ್ನು ಮತ್ತೊಂದು ವರ್ಷ ವಿಸ್ತರಿಸಿದೆ ಎಂದು ವರದಿಯಾಗಿದೆ.

ಮಹಿಳೆಯ ಪರ ನಿಂತ ನೆಟ್ಟಿಗರು 

ಇನ್ನು ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ಪರ ನಿಂತಿದ್ದು, ಆಕೆಯ ಬಗ್ಗೆ ಸಹಾನೂಭೂತಿಯನ್ನು ವ್ಯಕ್ತಪಡಿಸಿದ್ದಾರೆ. ಅನ್ ಬರೋಬ್ಬರಿ 14 ವರ್ಷ ಕೆಲಸ ಮಾಡಿಯೇ ಸಂಬಳ ಪಡೆದುಕೊಂಡಿದ್ದಾಳೆ. 14 ವರ್ಷ ಅಂದ್ರೆ ಆಕೆ ತನ್ನನ್ನು ಕೆಲಸದಲ್ಲಿ ಸಾಬೀತು ಮಾಡಿಕೊಂಡಿದ್ದಾಳೆ ಎಂದರ್ಥ. ಹಾಗಾಗಿ ಆ ಸಂಬಳ ಮತ್ತು ಪಿಂಚಣಿಗೆ ಮಹಿಳೆ ಅರ್ಹ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಬಾಯಿಯೊಳಗೆ ನೊಣ ಹೋದ್ರೂ ನ್ಯೂಸ್ ಓದೋದನ್ನ ನಿಲ್ಲಿಸದ ಆಂಕರ್; ನೆಟ್ಟಿಗರಿಂದ ಶ್ಲಾಘನೆ, ವಿಡಿಯೋ ನೋಡಿ

ಅನ್ ಮಾಡಿದ ತಪ್ಪು ಒಂದೇ ಅದು ತನ್ನ ಗುರುತು ಮರೆ ಮಾಡಿ ಕೆಲಸಕ್ಕೆ ಸೇರಿರೋದು. ವಯಸ್ಸಾದ ನಂತರ ಮಹಿಳೆ ಏಕೆ ಪಿಂಚಣಿ ಪಡೆಯಬಾರದು? ಕೆಲವರು ಅಧಿಕೃತವಾಗಿ ಕೆಲಸ ಪಡೆದುಕೊಂಡಿದ್ರೂ ಕೆಲಸ ಮಾಡಲ್ಲ. ಅಂತಹವರ ಮಧ್ಯೆ ಪ್ರಾಮಾಣಿಕವಾಗಿ ಅನ್ ಕೆಲಸ ಮಾಡಿದ್ದಾಳೆ. ಆದ್ದರಿಂದ ಮಹಿಳೆ ಶಿಕ್ಷೆಯ ಪ್ರಮಾಣ ಕಡಿತಗೊಳಿಸಬೇಕು ಎಂದು ನೆಟ್ಟಿಗರು ತಮ್ಮೊಳಗೆ ಚರ್ಚೆ ನಡೆಸುತ್ತಿದ್ದಾರೆ. 

Latest Videos
Follow Us:
Download App:
  • android
  • ios