ಕೊರೋನಾ ಸೃಷ್ಟಿಸಿದ್ದು ಭಾರತ : ಚೀನಾದಿಂದ ಅಪಪ್ರಚಾರ

ಕೊರೋನಾ ಮಹಾಮಾರಿ ಸೃಷ್ಟಿ ಮಾಡಿದ್ದೆ ಭಾರತ ಹೀಗೊಂದು ಸುದ್ದಿ ಚೀನಾದಿಂದ ಹರಡಿದೆ. ಭಾರತದಲ್ಲಿ ಪ್ರಾಣಿಗಳಿಂದ ಮಾನವರಿಗೆ ಅಶುದ್ಧ ನೀರಿನ ಮೂಲಕ ಈ ವೈರಸ್‌ ಹಬ್ಬಿದೆ ಎಂದು ಹೇಳಿದೆ.

China mislead About Coronavirus snr

ನವದೆಹಲಿ (ನ.29): ಇಡೀ ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್‌ ಮೊದಲು ಪತ್ತೆಯಾದದ್ದು ಎಲ್ಲಿ ಎಂದು ಕೇಳಿದರೆ ‘ಚೀನಾದಲ್ಲಿ’ ಎಂದು ಚಿಕ್ಕ ಮಕ್ಕಳೂ ಉತ್ತರ ನೀಡುತ್ತವೆ. ಆದರೆ ತನಗಂಟಿರುವ ಈ ಕಳಂಕವನ್ನು ತೊಡೆದು ಹಾಕಲು ಹಲವು ವಾದಗಳನ್ನು ಮುಂದಿಡುತ್ತಲೇ ಬಂದಿರುವ ಚೀನಾ ಇದೀಗ ಭಾರತದ ಮೇಲೆ ಗೂಬೆ ಕೂರಿಸಲು ಯತ್ನಿಸಿದೆ. ಕೊರೋನಾ ವೈರಸ್‌ನ ಮೂಲ ಚೀನಾ ಅಲ್ಲ, ಭಾರತ ಎಂದು ಪ್ರತಿಪಾದಿಸುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೆ ಈಡಾಗಿದೆ.

2019ರ ಬೇಸಿಗೆಯಲ್ಲಿ ಭಾರತದಲ್ಲಿ ಪ್ರಾಣಿಗಳಿಂದ ಮಾನವರಿಗೆ ಅಶುದ್ಧ ನೀರಿನ ಮೂಲಕ ಈ ವೈರಸ್‌ ಹಬ್ಬಿದೆ. ಬಳಿಕ ಅದು ಯಾರಿಗೂ ಗೊತ್ತಾಗದ ಹಾಗೆ ವುಹಾನ್‌ ತಲುಪಿದೆ. ಅಲ್ಲಿ ಮೊದಲು ಪತ್ತೆಯಾಗಿದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ‘ವೈಜ್ಞಾನಿಕ ಅಕಾಡೆಮಿ’ ತಜ್ಞರ ತಂಡ ವಾದ ಮಂಡಿಸಿದೆ.

ಸ್ಪುಟ್ನಿಕ್‌ ಲಸಿಕೆಯೂ ಭಾರತದಲ್ಲಿ ಉತ್ಪಾದನೆ! ..

ಕೊರೋನಾ ಸಂಬಂಧ ತನಗಂಟಿರುವ ಕುಖ್ಯಾತಿಯನ್ನು ತೊಡೆದು ಹಾಕಲು ಚೀನಾ ಈ ರೀತಿಯ ವಿತಂಡ ವಾದ ಮಂಡಿಸುತ್ತಿರುವುದು ಇದೇ ಮೊದಲಲ್ಲ. ಇಟಲಿ, ಅಮೆರಿಕ, ಯುರೋಪ್‌ ಮೇಲೂ ಇದೇ ರೀತಿಯ ಆರೋಪ ಮಾಡಿತ್ತು. ಅದಕ್ಕೆ ಯಾವುದೇ ಸಾಕ್ಷ್ಯ ನೀಡಿರಲಿಲ್ಲ. ಇದೀಗ ಭಾರತದ ಜತೆ ಗಡಿ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಅದರ ಜತೆ ಕೊರೋನಾ ವೈರಸ್‌ ವಿಚಾರವನ್ನು ತಳುಕು ಹಾಕಲು ಚೀನಾ ಯತ್ನಿಸಿದೆ.

ಮಂಗಗಳಿಂದ ಮಾನವರಿಗೆ:

ಚೀನಾದ ವುಹಾನ್‌ನಲ್ಲಿ ಮೊದಲು ಕೊರೋನಾ ವೈರಸ್‌ ಪತ್ತೆಯಾಯಿತಾದರೂ ಅದು ಮೂಲ ವೈರಾಣು ಅಲ್ಲ. ಬಾಂಗ್ಲಾದೇಶ, ಅಮೆರಿಕ, ಗ್ರೀಸ್‌, ಆಸ್ಪ್ರೇಲಿಯಾ, ಭಾರತ, ಇಟಲಿ, ಚೆಕ್‌ ಗಣರಾಜ್ಯ, ರಷ್ಯಾ ಅಥವಾ ಸರ್ಬಿಯಾ ದೇಶಗಳು ಕೊರೋನಾ ವೈರಸ್‌ನ ಮೂಲವಾಗಿರಬಹುದು. ಇದಕ್ಕೆ ಪುಷ್ಟಿನೀಡುವಂತೆ ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಕಡಿಮೆ ರೂಪಾಂತರದ ವೈರಾಣು ಮಾದರಿಗಳು ಪತ್ತೆಯಾಗಿವೆ. ಎರಡೂ ದೇಶಗಳು ಅಕ್ಕಪಕ್ಕದಲ್ಲೇ ಇವೆ. ಹೀಗಾಗಿ ಅಲ್ಲೇ ಕೊರೋನಾ ವೈರಸ್‌ ಮೊದಲು ಪತ್ತೆಯಾಗಿರಬಹುದು. ನೀರಿನ ಕೊರತೆಯಿಂದಾಗಿ ಮಂಗಗಳಂತಹ ವನ್ಯಜೀವಿಗಳು ತಮ್ಮ ತಮ್ಮ ನಡುವೆಯೇ ನೀರಿಗಾಗಿ ಕಾಳಗದಲ್ಲಿ ತೊಡಗಿದಾಗ ಮಾನವರ ಮಧ್ಯಪ್ರವೇಶವಾಗಿ ವೈರಸ್‌ ಮಾನವರಿಗೆ ಅಂಟಿರಬಹುದು. ಉಷ್ಣಾಂಶ ಹೆಚ್ಚಾಗಿಯೂ ಮಾನವರಿಗೆ ಈ ವೈರಸ್‌ ಅಂಟಿರಬಹುದು. ಭಾರತದಲ್ಲಿ ಮೊದಲೇ ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಯುವಕರ ಸಂಖ್ಯೆ ಹೆಚ್ಚಿರುವುದರಿಂದ ಹಲವು ತಿಂಗಳ ಕಾಲ ವೈರಸ್‌ ಬಗ್ಗೆ ಗೊತ್ತಾಗದೇ ಹೋಗಿರಬಹುದು ಎಂದು ಹೇಳಿದೆ.

Latest Videos
Follow Us:
Download App:
  • android
  • ios