ಬೀಜಿಂಗ್‌(ಏ.17): ಇಡೀ ವಿಶ್ವಕ್ಕೇ ಕೊರೋನಾ ಹಬ್ಬಿಸಿದ ಅಪಕೀರ್ತಿಗೆ ಗುರಿಯಾಗಿರುವ ಚೀನಾ ದೇಶ ಅತ್ಯಂತ ರಹಸ್ಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದೆ ಎಂಬುದು ಸಂಚಲನಕ್ಕೆ ಕಾರಣವಾಗಿದೆ. 

ಯಾವುದೇ ದೇಶ ಅಣ್ವಸ್ತ್ರ ಪರೀಕ್ಷೆ ನಡೆಸಬಾರದು ಎಂಬ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಚೀನಾ ರಹಸ್ಯವಾಗಿ ಪರೀಕ್ಷೆ ನಡೆಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ವರದಿಯೊಂದನ್ನು ಸಲ್ಲಿಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಕೊರೋನಾದಿಂದ ವಿಶ್ವದ ಹಲವು ದೇಶಗಳು ತತ್ತರಿಸಿರುವಾಗಲೇ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಚೀನಾ ದುಸ್ಸಾಹಸಕ್ಕೆ ಏನಾದರೂ ಕೈ ಹಾಕಲು ಹೊರಟಿದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಆದರೆ ಅಣ್ವಸ್ತ್ರ ಪರೀಕ್ಷೆ ಆರೋಪವನ್ನು ಚೀನಾ ನಿರಾಕರಿಸಿದೆ.

ಲಸಿಕೆ ಕಂಡುಹಿಡಿಯುವ ವರೆಗೆ ಲಾಕ್‌ಡೌನ್, ಕಠಿಣ ನಿರ್ಧಾರ ತೆಗೆದುಕೊಂಡ ಬ್ರಿಟನ್ ಆರೋಗ್ಯ ಸಚಿವ!

ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಭೂಮಿಯ ಒಳಗಡೆ ಕಡಿಮೆ ತೀವ್ರತೆ ಇರುವ ಅಣು ಬಾಂಬ್‌ ಅನ್ನು ಚೀನಾ ಸ್ಫೋಟಿಸಿದೆ. ಇದು ‘ಶೂನ್ಯ ಪ್ರತಿಫಲ’ ಗುಣಮಟ್ಟದ ಉಲ್ಲಂಘನೆಯಾಗಿದೆ. ಇದಕ್ಕೆ ಇಂಬು ನೀಡುವಂತೆ ಚೀನಾದ ಲೊಪ್‌ ನುರ್‌ ಅಣ್ವಸ್ತ್ರ ಪ್ರದೇಶದಲ್ಲಿ 2019ನೇ ಇಸ್ವಿಯಿಡೀ ಚಟುವಟಿಕೆಗಳು ಕಂಡುಬಂದಿವೆ. ಈ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ಅಮೆರಿಕದ ವರದಿಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಒಂದು ಅಣು ಬಾಂಬ್‌ ಸ್ಪೋಟಿಸಿದಾಗ ಸರಣಿ ಸ್ಫೋಟಗಳು ಉಂಟಾಗುತ್ತವೆ. ಆದರೆ ಶೂನ್ಯ ಪ್ರತಿಫಲ ಸ್ಫೋಟದಲ್ಲಿ ಆ ರೀತಿ ಸರಣಿ ಸ್ಫೋಟಗಳು ಆಗುವುದಿಲ್ಲ.

ಆದರೆ ಅಮೆರಿಕದ ವಾದವನ್ನು ಚೀನಾ ಸ್ಪಷ್ಟವಾಗಿ ಅಲ್ಲಗಳೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್‌, ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ದೇಶ ನಮ್ಮದು. ಆ ಉದ್ದೇಶಕ್ಕೆ ಯಾವತ್ತಿಗೂ ಬೆಂಬಲವಿದೆ. ಅಮೆರಿಕ ಹೇಳುತ್ತಿರುವುದು ಬೇಜವಾಬ್ದಾರಿತನದ ಹಾಗೂ ತಪ್ಪು ಉದ್ದೇಶದ ಹೇಳಿಕೆಯಾಗಿದೆ ಎಂದು ಕಿಡಿಕಾರಿದೆ.