Weird News: ಚೀನಾದಲ್ಲಿ ವಿಚಿತ್ರ ಆದೆಶವೊಂದನ್ನು ಹೊರಡಿಸಿದ್ದು ಮೀನು, ಏಡಿ ಮತ್ತಿತರ ಸಮುದ್ರ ಜೀವಿಗಳಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಮೀನುಗಳಿಗೆ ಕೋವಿಡ್‌ ಟೆಸ್ಟ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

ನವದೆಹಲಿ: 2020ರಲ್ಲಿ ಕೊರೋನಾವೈರಸ್‌ ಆರಂಭವಾದ ದಿನದಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ವ್ಯಾಪಾರ ವಹಿವಾಟು ಕುಸಿದಿದೆ, ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಪ್ರೀತಿ ಪಾತ್ರರನ್ನು ಕಳೆದುಕೊಂಡು ಎಷ್ಟೋ ಜನರ ಬದುಕು ಬೀದಿಗೆ ಬಂದಿದೆ. ಕೋವಿಡ್‌19ಗೆ ಲಸಿಕೆ ಬಂದ ನಂತರ ಹಲವು ದೇಶಗಳಲ್ಲಿ ಪ್ರಕರಣಗಳು ಕಡಿಮೆಯಾಗಿವೆಯಾದರೂ ಚೀನಾದ ಕ್ಸಿಯಾಮೆನ್‌ ಪ್ರದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಏರುಗತಿಯಲ್ಲಿ ಸಾಗುತ್ತಿರುವ ಕೊರೋನಾ ತಡೆಯಲು ಹಲವು ಕ್ರಮಗಳನ್ನು ಚೀನಾ ಸರ್ಕಾರ ತೆಗೆದುಕೊಂಡಿವೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಜನರಿಗೂ ಕೋವಿಡ್‌ ಪರೀಕ್ಷೆಯನ್ನು ಕಡ್ಡಯಾ ಮಾಡಲಾಗಿದೆ. ಎಲ್ಲಕ್ಕಿಂತ ಆಶ್ಚರ್ಯ ಹುಟ್ಟಿಸುವುದೇನೆಂದರೆ ಮೀನು ಮತ್ತು ಏಡಿಗಳಿಗೂ ಕೊರೋನಾ ಪರೀಕ್ಷೆ ಮಾಡಲಾಗುತ್ತಿದೆ. ಸೀ ಫುಡ್‌ ಎಲ್ಲದಕ್ಕೂ ಮಾರಾಟಕ್ಕೂ ಮುನ್ನ ಕೋವಿಡ್‌ ಟೆಸ್ಟ್‌ ಮಾಡಲಾಗುತ್ತಿದೆ. ನಂತರವಷ್ಟೇ ಅದನ್ನು ಜನ ಕೊಂಡು ತಿನ್ನಬಹುದು. 

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಾಕಿದ್ದು ಅದರಲ್ಲಿ ಮೀನು ಮತ್ತು ಏಡಿಗಳ ಸ್ವಾಬ್‌ ಸ್ಯಾಂಪಲ್‌ ತೆಗೆದುಕೊಳ್ಳುತ್ತಿವುದು ಕಾಣುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಜೀವಂತ ಮೀನು ಮತ್ತು ಏಡಿಗಳ ಸ್ವಾಬ್‌ ಕಲೆಕ್ಟ್‌ ಮಾಡುತ್ತಿದ್ದಾರೆ. ಮೀನಿನ ಬಾಯೊಳಗೆ ಮತ್ತು ಏಡಿಯ ಚಿಪ್ಪಿನೊಳಗೆ ಕಡ್ಡಿ ತೂರಿಸಿ ಸ್ವಾಬ್‌ ಕಲೆಕ್ಟ್‌ ಮಾಡಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ. 

"ಆರೋಗ್ಯ ಸಿಬ್ಬಂದಿ ಮೀನು ಮತ್ತು ಏಡಿಗಳಿಗೆ ಕೋವಿಡ್‌ ಪರೀಕ್ಷೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ," ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಟ್ವೀಟ್‌ ಮಾಡಿದೆ.

Scroll to load tweet…

ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ಪುಟಿನ್‌ ತಂತ್ರ, 10 ಮಕ್ಕಳನ್ನು ಹೆತ್ತರೆ ಹೆಂಗಸರಿಗೆ ಲಕ್ಷ ಲಕ್ಷ ಹಣ

ವಿಡಿಯೋ ಪೋಸ್ಟ್‌ ಆಗಿ ಕೆಲವೇ ನಿಮಿಷಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಚೀನಾ ಸರ್ಕಾರಕ್ಕೆ ಬುದ್ದಿಯಿಲ್ಲ ಎಂದರೆ, ಕೆಲವರು ಪರೀಕ್ಷೆ ಮಾಡಿದರೆ ತಾನೆ ಮೀನು ಮತ್ತು ಏಡಿಗೆ ಕೊರೋನಾ ತಗುಲುತ್ತದೆಯಾ ಇಲ್ಲವಾ ಎಂದು ತಿಳಿಯುವುದು, ಪರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇನ್ನು ಕೆಲವರು ಚೀನಾ ತನ್ನ ಸರ್ಕಾರದ ಸಿಬ್ಬಂದಿಗಳನ್ನು ಅರ್ಥವಿಲ್ಲದ ಕೆಲಸಕ್ಕೆ ವೇಸ್ಟ್‌ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ತಮಾಷೆಗಾಗಿ ಮಾಡಿರುವ ವಿಡಿಯೋ ಎಂದುಕೊಂಡಿದ್ದಾರೆ. 

ಚೀನಾದಲ್ಲಿ ಮೀನುಗಾರಿಕೆಗೆ ಹೋಗುವವರಿಗೆ ಕೋವಿಡ್‌ ವ್ಯಾಕ್ಸಿನೇಷನ್‌ ಕಡ್ಡಾಯ ಮಾಡಲಾಗಿದೆ. ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌ ಇದ್ದರೆ ಮಾತ್ರ ಮೀನುಗಾರಿಕೆಗೆ ಅನುಮತಿ ನೀಡುತ್ತಿದೆ. ಮೀನುಗಾರಿಕೆ ಮಾಡಿ ವಾಪಸಾಗುವಾಗ ಮೀನುಗಾರರು ಮತ್ತು ಹಿಡಿದಿರುವ ಪ್ರತಿಯೊಂದು ಮೀನು, ಏಡಿ ಮತ್ತಿತರ ಸೀ ಫುಡ್‌ಗಳನ್ನು ಟೆಸ್ಟ್‌ ಮಾಡಿಸಬೇಕು ಎಂದು ಚೀನಾ ಅಧಿಕೃತ ಆದೇಶ ಹೊರಡಿಸಿದೆ. 

ಇದನ್ನೂ ಓದಿ: Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್‌ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ

"ನಾವು ಮಾತ್ರ ಈ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ. ಹೈನನ್‌ ಪ್ರದೇಶದಲ್ಲಿ ಕೊರೋನಾ ಸ್ಪೋಟಗೊಂಡಿದ್ದನ್ನು ಕಂಡು ನಾವು ಪಾಠ ಕಲಿತಿದ್ದೇವೆ. ಮಾಹಿತಿಗಳ ಪ್ರಕಾರ ಮೀನುಗಾರಿಕೆಯಿಂದಲೇ ಅಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಇದೇ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇನೆ," ಎಂದು ಕ್ಸಿಯಾಮೆನ್‌ ಮುನ್ಸಿಬಲ್‌ ಓಷಿಯೆನಿಕ್‌ ಡೆವೆಲಪ್‌ಮೆಂಟ್‌ ಬ್ಯೂರೊ ಪ್ರಕಟಣೆಯಲ್ಲಿ ತಿಳಿಸಿದೆ.