ಪಾಕ್ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!
* ಗಡಿ ಸಂಘರ್ಷದ ಸಂದರ್ಭದಲ್ಲೇ ಭಾರತದ ಶತ್ರು ದೇಶಕ್ಕೆ ಬಲ ತುಂಬಿದ ನೆರೆ ರಾಷ್ಟ್ರ
* ಪಾಕ್ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ
* ಕಣ್ತಪ್ಪಿಸಿ ಶತ್ರು ದೇಶಗಳ ಮೇಲೆ ಆಗಸ, ನೆಲ, ನೀರಲ್ಲಿ ದಾಳಿ ಮಾಡುವ ನೌಕೆ ಇದು
ಬೀಜಿಂಗ್(ನ.10): ಗಡಿಯಲ್ಲಿ ಭಾರತದ (India) ಜತೆ ತಗಾದೆ ತೆಗೆದಿರುವ ಚೀನಾ ಇದೀಗ ಭಾರತದ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ (Pakistan) ಬಲ ತುಂಬುವ ಕೆಲಸವನ್ನು ತೀವ್ರಗೊಳಿಸಿದೆ. ತನ್ನ ಅತ್ಯಂತ ದೈತ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಯುದ್ಧ ನೌಕೆಯನ್ನು ಪಾಕಿಸ್ತಾನಕ್ಕೆ ಚೀನಾ (China) ಹಸ್ತಾಂತರ ಮಾಡಿದೆ. ತನ್ಮೂಲಕ ಪಾಕಿಸ್ತಾನವನ್ನು ಶಕ್ತಿಶಾಲಿಗೊಳಿಸುವುದರ ಜತೆಗೆ ಹಿಂದೂ ಮಹಾಸಾಗರದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಳ ಮಾಡಿಕೊಳ್ಳಲು ಹೊರಟಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಹಡಗು (Warship) ನಿಗಮ 054ಎ/ಪಿ ಮಾದರಿಯ ಯುದ್ಧ ನೌಕೆಯನ್ನು ತಯಾರಿಸಿದ್ದು, ಶಾಂಘೈನಲ್ಲಿ ನಡೆದ ಸಮಾರಂಭದಲ್ಲಿ ಅದನ್ನು ಪಾಕಿಸ್ತಾನ ಸೇನೆಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನ ತನ್ನ ಈ ಹೊಸ ಯುದ್ಧ ನೌಕೆಗೆ ‘ಪಿಎನ್‌ಎಸ್ ತುಘ್ರಿಲ್’ ಎಂದು ನಾಮಕರಣ ಮಾಡಿದೆ.
ಹೊಸ ಯುದ್ಧ ನೌಕೆಯಿಂದಾಗಿ ಹಿಂದೂ ಮಹಾಸಾಗರ ವಲಯದಲ್ಲಿ ಅಧಿಕಾರದ ಸಮತೋಲನ ಉಂಟಾಗಲಿದೆ ಎಂದು ಚೀನಾದಲ್ಲಿನ ಪಾಕಿಸ್ತಾನ ರಾಯಭಾರಿ ಮೊಯಿನ್ ಉಲ್ ಹಕ್ ಅವರು ತಿಳಿಸಿದ್ದಾರೆ. ಚೀನಾದಿಂದ 054ಎ/ಪಿ ಮಾದರಿಯ ನಾಲ್ಕು ಯುದ್ಧ ನೌಕೆ ಪಡೆಯುವ ಕುರಿತು ಚೀನಾ ಜತೆ ಪಾಕಿಸ್ತಾನ 2017ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಯುದ್ಧ ನೌಕೆಗಳಿಗೆ ಹಣ ಎಷ್ಟು? ಅದನ್ನು ಪಾವತಿಸುವ ಸ್ಥಿತಿಯಲ್ಲಿ ಪಾಕಿಸ್ತಾನ ಇದೆಯೇ? ಚೀನಾ ಇದನ್ನು ಉಚಿತವಾಗಿ ನೀಡಿದೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟಉತ್ತರಗಳು ಲಭಿಸಿಲ್ಲ.
ಏನಿದರ ವಿಶೇಷತೆ?
ಚೀನಾ ನಿರ್ಮಿಸಿರುವ ಅತ್ಯಂತ ದೈತ್ಯ ಯುದ್ಧ ನೌಕೆ ಇದು. ತಾಂತ್ರಿಕವಾಗಿ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ನೆಲದಿಂದ ನೆಲಕ್ಕೆ, ನೆಲದಿಂದ ಆಗಸಕ್ಕೆ ಹಾಗೂ ನೀರಿನಾಳದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಸರ್ವೇಕ್ಷಣೆಯಲ್ಲೂ ಎತ್ತಿದ ಕೈ. ಬಹು ಅಪಾಯದ ವಾತಾವರಣದಲ್ಲಿ ಇದು ಸುರಳೀತವಾಗಿ ಕೆಲಸ ಮಾಡಬಹುದು. ಸುಧಾರಿತ ರಾಡಾರ್ ವ್ಯವಸ್ಥೆ ಹಾಗೂ ದೀರ್ಘದೂರ ಕ್ರಮಿಸಬಲ್ಲ ಕ್ಷಿಪಣಿಗಳನ್ನು ಬತ್ತಳಿಕೆಯಲ್ಲಿ ಹೊಂದಿರುವ ಈ ನೌಕೆ, ಎದುರಾಳಿಗಳ ಕಣ್ತಪ್ಪಿಸಿ ಸಂಚರಿಸುವುದಕ್ಕೆ ಬೇಕಾದ ವಿಶ್ವ ದರ್ಜೆಯ ವ್ಯವಸ್ಥೆ ಹೊಂದಿದೆ.
ಭಾರತದೊಳಗೆ ಚೀನಾ ಹಳ್ಳಿ ನಿರ್ಮಾಣ ಸುದ್ದಿ ಸುಳ್ಳು
ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ಭಾರತದ ಗಡಿಯೊಳಗೆ ಚೀನಾ ಹಳ್ಳಿಯೊಂದನ್ನು ನಿರ್ಮಾಣ ಮಾಡಿದೆ ಎಂಬ ವರದಿ ಸುಳ್ಳು ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಚೀನಾ ಭಾರತದ ಗಡಿಯೊಳಗೆ 100 ಮನೆಗಳಿರುವ ಸಣ್ಣ ಹಳ್ಳಿಯೊಂದನ್ನೇ ನಿರ್ಮಿಸಿದೆ. ದಶಕಗಳ ಹಿಂದಿನಿಂದಲೇ ಚೀನಾ ಈ ಪ್ರದೇಶದಲ್ಲಿ ಸೈನ್ಯವನ್ನು ನಿಯೋಜನೆ ಮಾಡಿತ್ತು. 2020ರ ಬಳಿಕೆ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಇತ್ತೀಚೆಗೆ ಅಮೆರಿಕದ ರಕ್ಷಣಾ ಇಲಾಖೆ ವರದಿ ಮಾಡಿತ್ತು. ಅದನ್ನೇ ಆಧರಿಸಿ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದವು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹೆಸರು ಹೇಳಬಯಸದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ‘ಅರುಣಾಚಲ ರಾಜ್ಯದೊಳಗೆ ಚೀನಾ ಯಾವುದೇ ಹಳ್ಳಿಯನ್ನು ನಿರ್ಮಾಣ ಮಾಡಿಲ್ಲ. ಚೀನಾ ಹಳ್ಳಿ ನಿರ್ಮಾಣ ಮಾಡಿರುವ ಸ್ಥಳ ಸದ್ಯ ಚೀನಾ ವಶದಲ್ಲೇ ಇದೆ. ಚೀನಾದ ಲಿಬರೇಶನ್ ಆರ್ಮಿ 1959ರಲ್ಲೇ ಈ ಪ್ರದೇಶವನ್ನು ವಶಪಡಿಸಿಕೊಂಡಿತ್ತು’ ಎಂದು ತಿಳಿಸಿದ್ದಾರೆ.
ಚೀನಾ ಅರುಣಾಚಲ ಪ್ರದೇಶದ ಅಪ್ಪರ್ ಸುಭನ್‌ಸಿರಿ ಜಿಲ್ಲೆಯ ಗಡಿಯ ಬಳಿ ನಿರ್ಮಾಣ ಮಾಡಿರುವ ಮನೆಗಳು ಭಾರತದ ಗಡಿಯೊಳಗಿಲ್ಲ. ಈ ಪ್ರದೇಶ ಚೀನಾಕ್ಕೆ ಸೇರಿದ್ದು, 1959ರಲ್ಲೇ ಚೀನಾ ಈ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.