ಚೀನಾದ ಮೊದಲ ಕೊರ್ಗಿ ಪೊಲೀಸ್ ನಾಯಿ ಫುಜೈ ತನ್ನ ಅಶಿಸ್ತಿನ ಕಾರಣಕ್ಕೆ ಸುದ್ದಿಯಲ್ಲಿದೆ. ಕರ್ತವ್ಯದ ಸಮಯದಲ್ಲಿ ನಿದ್ದೆ ಮಾಡಿ, ತನ್ನ ಆಹಾರದ ತಟ್ಟೆಗೆ ಉಚ್ಚೆ ಹೋಯ್ದಿರುವುದರಿಂದ ಫುಜೈನ ವಾರ್ಷಿಕ ಬೋನಸ್ ತಡೆ ಹಿಡಿಯಲಾಗಿದೆ.

ಚೀನಾದ ಮೊದಲ ಕೊರ್ಗಿ ಪೊಲೀಸ್ ನಾಯಿ ಫುಜೈ, ತನ್ನ ಅಶಿಸ್ತಿನ ಕಾರಣಕ್ಕೆ ಸುದ್ದಿಯಾಗಿದ್ದು, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಪೊಲೀಸ್ ಶ್ವಾನ ಫುಜೈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಹಾಗಿದ್ದರೆ ಫುಜೈ ಮಾಡಿದ್ದೇನು? ನೋಡೋಣ ಬನ್ನಿ. ಸಾಮಾನ್ಯವಾಗಿ ಪೊಲೀಸ್‌ ಶ್ವಾನಗಳು ಎಂದರೆ ಭದ್ರತಾ ಪಡೆಗಳಲ್ಲಿ ಇರುವ ಯೋಧರಂತೆ ಶಿಸ್ತಿಗೆ ಹೆಸರಾಗಿರುತ್ತವೆ. ಸರಿಯಾದ ಸಮಯಕ್ಕೆ ನಿದ್ದೆ ಸರಿಯಾದ ಸಮಯಕ್ಕೆ ಊಟ, ವ್ಯಾಯಾಮದ ಸಮಯದಲ್ಲಿ ವ್ಯಾಯಾಮ ದೈಹಿಕ ಕಸರತ್ತು ಕರ್ತವ್ಯದ ಸಮಯದಲ್ಲಿ ಶಿಸ್ತುಬದ್ಧವಾದ ಕರ್ತವ್ಯ, ಇವು ಪೊಲೀಸ್ ಶ್ವಾನಗಳ ಟ್ರೈನರ್ ಅವರಿಗೆ ರೂಢಿಸಿರುವ ಜೀವನಶೈಲಿ, ಸಣ್ಣ ಮರಿ ಇರುವಾಗಲೇ ಇವುಗಳನ್ನು ತರಬೇತಿಗೊಳಿಸುವುದರಿಂದ ಶಿಸ್ತುಬದ್ಧವಾದ ಜೀವನ ಶೈಲಿ ಈ ಪೊಲೀಸ್ ಶ್ವಾನಗಳದ್ದು, ಆದರೆ ಚೀನಾದ ಮೊದಲ ಕೊರ್ಗಿ ಪೊಲೀಸ್ ಶ್ವಾನ ಎಂದು ಹೆಸರಾಗಿದ್ದ ಫುಜೈ ಮಾತ್ರ ಕರ್ತವ್ಯದ ಸಮಯದಲ್ಲಿ ಸ್ವಲ್ಪ ಕಾಲ ನಿದ್ದೆ ಮಾಡಿದೆ. ಇದೇ ಕಾರಣಕ್ಕೆ ಇದರ ವಾರ್ಷಿಕ ಬೋನಸ್‌ನ್ನು ತಡೆ ಹಿಡಿಯಲಾಗಿದೆ. ಬರೀ ಇಷ್ಟೇ ಅಲ್ಲ ಅದು ತನ್ನ ಆಹಾರದ ತಟ್ಟೆಗೆ ಉಚ್ಚೆ ಹೋಯ್ದಿದೆ. ಈ ಅಶಿಸ್ತಿನ ಕಾರಣಕ್ಕೆ ಫುಜೈಗೆ ವರ್ಷಾಂತ್ಯಕ್ಕೆ ನೀಡಬೇಕಾದ ಬೋನಸ್ ನೀಡದೇ ಶಿಕ್ಷೆ ನೀಡಲಾಗಿದೆ ಎಂದು ಸೌತ್ ಚೀನಾ ಪೋಸ್ಟ್ ವರದಿ ಮಾಡಿದೆ. ಈ ವಿಚಾರ ಈಗ ಚೀನಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ಆಗಸ್ಟ್ 28, 2023 ರಂದು ಜನಿಸಿದ ಫುಜೈಯನ್ನು ಕಳೆದ ವರ್ಷ ಜನವರಿಯಲ್ಲಿ ಶಾಂಡೊಂಗ್ ಪ್ರಾಂತ್ಯದ ವೈಫಾಂಗ್‌ನಲ್ಲಿರುವ ಪೊಲೀಸ್ ಶ್ವಾನ ತರಬೇತಿ ನೆಲೆಯಲ್ಲಿ ತರಬೇತಿಗಾಗಿ ಸೇರಿಸಲಾಗಿತ್ತು. ಮೀಸಲು ಸ್ಫೋಟಕ ಪತ್ತೆ ಕಾರ್ಯಕ್ಕಾಗಿ ಸೇರಿಸಲಾಗಿದ್ದು, ಮಾರ್ಚ್ ವೇಳೆಗೆಲ್ಲಾ ಈ ಶ್ವಾನ ತನ್ನ ಪ್ರೀತಿಯ ನಗು ಮತ್ತು ಪ್ರಭಾವಶಾಲಿ ಪತ್ತೆ ಕೌಶಲ್ಯದಿಂದಾಗಿ ಇಂಟರ್‌ನೆಟ್‌ ಸೆನ್ಶೇಷನ್ ಆಗಿತ್ತು.ಚಾಂಗಲ್ ಕೌಂಟಿ ಪಬ್ಲಿಕ್ ಸೆಕ್ಯುರಿಟಿ ಬ್ಯೂರೋದ ತರಬೇತುದಾರ ಝಾವೊ ಕಿಂಗ್‌ಶುವಾಯ್ ಅವರು ಕೇವಲ ಎರಡು ತಿಂಗಳ ಮರಿ ಇದ್ದಾಗ ಉದ್ಯಾನವನದಲ್ಲಿ ಫುಜೈನ ಸಾಮರ್ಥ್ಯವನ್ನು ಗುರುತಿಸಿದ ನಂತರ ಅದನ್ನು ಪೊಲೀಸ್ ಶ್ವಾನ ತರಬೇತಿ ನೆಲೆಗೆ ಸೇರಿಸಲಾಗಿತ್ತು. ಈ ನಾಯಿ ಪೊಲೀಸ್ ನಾಯಿಗಳಿಗೆ ಇರುವ ಕಠಿಣ ಮಾನದಂಡಗಳನ್ನು ಪೂರೈಸಿತು ಮತ್ತು ಅಕ್ಟೋಬರ್ 2024 ರಲ್ಲಿ ಪೂರ್ಣ ಪೊಲೀಸ್ ಶ್ವಾನ ಸ್ಥಾನಮಾನಕ್ಕೆ ಅರ್ಹತೆ ಪಡೆಯಿತು.

ಸಾಮಾಜಿಕ ಜಾಲತಾಣದಲ್ಲಿ ಕೋರ್ಗಿ ಪೊಲೀಸ್ ನಾಯಿ ಫುಜೈ ಮತ್ತು ಅದರ ಒಡನಾಡಿಗಳು ಎಂದು ಪೇಜ್ ಕ್ರಿಯೇಟ್ ಮಾಡಿ ಇದರ ಸಾಧನೆಗಳು ಮತ್ತು ದೈನಂದಿನ ಜೀವನವನ್ನು ವೈಫಾಂಗ್ ಸಾರ್ವಜನಿಕ ಸೆಕ್ಯೂರಿಟಿ ಬ್ಯೂರೋ ಪೋಸ್ಟ್ ಮಾಡುತ್ತಿತ್ತು. 384,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಈ ಪೇಜ್ ಫುಜೈ ಹಾಗೂ ಇತರ ಪೊಲೀಸ್ ನಾಯಿಗಳ ಕುರಿತು ಪೋಸ್ಟ್ ಮಾಡುತ್ತಿತ್ತು. 

ಜನವರಿ 19 ರಂದು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಪೊಲೀಸ್ ಇಲಾಖೆಗೆ ಫುಜೈ ಕೊಡುಗೆಗಳನ್ನು ಎತ್ತಿ ತೋರಿಸಿದೆ, ಇದರಲ್ಲಿ ಹಲವಾರು ಭದ್ರತಾ ಕಾರ್ಯಗಳನ್ನು ಪೂರ್ಣಗೊಳಿಸುವುದು ಮತ್ತು ವೈಫಾಂಗ್‌ನ ಪೊಲೀಸ್ ನಾಯಿಗಳ ಪ್ರೊಫೈಲ್ ಅನ್ನು ಹೆಚ್ಚಿಸಲು ಸಹಾಯ ಮಾಡುವುದು ಸೇರಿದೆ ಅದರ ಪ್ರಯತ್ನಗಳಿಗಾಗಿ, ಫುಜೈಗೆ ಕೆಂಪು ಹೂವು, ಆಟಿಕೆಗಳು ಮತ್ತು ಟ್ರೀಟ್‌ಗಳನ್ನು ನೀಡಲಾಗಿತ್ತು. ಆದರೆ ಅದು ಇತ್ತೀಚೆಗೆ ಕೆಲಸದ ಸಮಯದಲ್ಲಿ ನಿದ್ದೆ ಮಾಡಿದ್ದಲ್ಲದೇ ತನ್ನ ತಿನ್ನುವ ಪಾತ್ರೆಗೆ ಉಚ್ಚೆ ಹೊಯ್ದು ಅಶಿಸ್ತು ತೋರಿತ್ತು. ಈ ಹಿನ್ನೆಲೆಯಲ್ಲಿ ಅದಕ್ಕೆ ವಾರ್ಷಿಕವಾಗಿ ನೀಡಲಾಗುವ ಬೋನಸ್‌ ಅನ್ನು ಕಟ್ ಮಾಡಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅದರ ಅನೇಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಅದಕ್ಕೆ ನೀಡುವ ಬೋನಸನ್ನು ನೀಡುವಂತೆ ಆಗ್ರಹಿಸಿದ್ದರು. 

ಆದರೆ ಅಭಿಮಾನಿಗಳ ತೀವ್ರ ಒತ್ತಾಯದಿಂದಾಗಿ ನಂತ ಫುಜೈಗೆ ಲೂನಾರ್ ಹೊಸ ವರ್ಷದ ಉಡುಗೊರೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಪ್ಯಾಕೇಜ್‌ನಲ್ಲಿ ಪೆಸಿಫಿಕ್ ಹೆರಿಂಗ್, ಕುಂಬಳಕಾಯಿ ಸೂಪ್, ವರ್ಣರಂಜಿತ ಡಂಪ್ಲಿಂಗ್‌ಗಳು, ಮೊಲದ ಮಾಂಸದಿಂದ ಮಾಡಿದ ಬಾಲ್‌ಗಳು ಮತ್ತು ಸಾಕುಪ್ರಾಣಿಗಳಿಗೆ ಅನುಕೂಲಕರವಾದ ಐಷಾರಾಮಿ ಚೀನೀ ಖಾದ್ಯವಾದ 'ಬುದ್ಧ ಜಂಪ್ಸ್ ಓವರ್ ದಿ ವಾಲ್' ನ್ನು ನೀಡಲಾಗಿದೆ ಎಂದು ವರದಿಯಾಗಿದೆ.

Scroll to load tweet…