ಬೀಜಿಂಗ್‌[ಜ.26]: 13 ನಗರಗಳನ್ನು ಬಂದ್‌ ಮಾಡಿಸಿ, ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಿದ್ದರೂ ಮಾರಕ ಕೊರೋನಾ ವೈರಸ್‌ ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಹೊಸದಾಗಿ 15 ಮಂದಿ ಈ ವೈರಾಣುವಿನಿಂದ ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಈವರೆಗೆ ಬಲಿಯಾದ ರೋಗಿಗಳ ಸಂಖ್ಯೆ 41ಕ್ಕೇರಿಕೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 50ರ ಗಡಿಗೆ ಸಮೀಪಿಸುತ್ತಿದೆ.

ಇದೇ ವೇಳೆ, ಶುಕ್ರವಾರ 800 ಮಂದಿಯಷ್ಟಿತ್ತ ವೈರಾಣು ಸೋಂಕಿತರ ಸಂಖ್ಯೆ ಇದೀಗ 1287ಕ್ಕೇರಿಕೆಯಾಗಿದೆ. ಈ ಪೈಕಿ 237 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಉದ್ಭವಿಸಿರುವ ಪರಿಸ್ಥಿತಿಯನ್ನು ನಿರ್ವಹಿಸಲು ಚೀನಾ ಹೆಣಗಾಡುತ್ತಿರುವಾಗಲೇ, ಕೊರೋನಾ ವೈರಸ್‌ ಲಕ್ಷಣಗಳನ್ನು ಹೊಂದಿರುವ ಶಂಕೆಯ ಮೇರೆಗೆ 1965 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

18 ನಗರಗಳಲ್ಲಿ ನಿರ್ಬಂಧ: ಇದೆ ವೇಳೆ ವೈರಸ್‌ ಹಬ್ಬುವುದನ್ನು ತಡೆಯಲು 13 ನಗರಗಳಲ್ಲಿ ಹೇರಲಾಗಿದ್ದ ವಿಮಾನ, ರೈಲು, ಬಸ್‌ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆಯ ಮೇಲಿನ ನಿರ್ಬಂಧವನ್ನು 18 ನಗರಗಳಿಗೆ ವಿಸ್ತರಿಸಲಾಗಿದೆ. ಇದರ ಪರಿಣಾಮ 5.1 ಕೋಟಿ ಜನ ಸಮಸ್ಯೆ ಎದುರಿಸುವಂತಾಗಿದೆ.

ಕೊರೋನಾ ಸೋಂಕಿತರಿಗಾಗಿ 10 ದಿನದಲ್ಲಿ ಆಸ್ಪತ್ರೆ ಕಟ್ಟಲಾರಂಭಿಸಿದ ಚೀನಾ!

ಗಂಭೀರ: ಇದೇ ವೇಳೆ ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆತಂಕ ವ್ಯಕ್ತಪಡಿಸಿದ್ದಾರೆ.

ವೈದ್ಯನೇ ಬಲಿ: ಕೊರೋನಾ ವೈರಸ್‌ ಪೀಡಿತರಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಚೀನಾ ಹೆಣಗಾಡುತ್ತಿರುವಾಗಲೇ, ಚೀನಾದ ವೈದ್ಯರೊಬ್ಬರು ಈ ವೈರಾಣು ಸೋಂಕುವಿನಿಂದ ಮೃತಪಟ್ಟಿದ್ದಾರೆ. ಕೊರೋನಾಗೆ ಬಲಿಯಾದ ಚೀನಾದ ಮೊದಲ ವೈದ್ಯ ಸಿಬ್ಬಂದಿ ಅವರಾಗಿದ್ದಾರೆ. ಲಿಯಾಂಗ್‌ ವುಡಾಂಗ್‌ ಎಂಬವರು ಹುಬೆ ಪ್ರಾಂತ್ಯದ ಶಿನುವಾ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದರು. ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೊರೋನಾ ದಾಳಿ ತೀವ್ರ ರೀತಿಯಲ್ಲಿರುವ ಹಿನ್ನೆಲೆಯಲ್ಲಿ ತಮ್ಮ ವೈಮನಸ್ಯವನ್ನೆಲ್ಲಾ ಮರೆತು ಚೀನಾ ಹಾಗೂ ಅಮೆರಿಕ ಸಂಶೋಧಕರು ಈ ಅಪಾಯಕಾರಿ ವೈರಾಣುವಿಗೆ ಚುಚ್ಚುಮದ್ದು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನ್ಯುಮೋನಿಯಾ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಕೊರೋನಾ ವೈರಸ್‌ಗೆ ನಿರ್ದಿಷ್ಟಚಿಕಿತ್ಸೆ ಇಲ್ಲ. ಹೀಗಾಗಿ ಸಾವಿನ ಸಂಖ್ಯೆ ಭಾರಿ ವೇಗವಾಗಿ ಹೆಚ್ಚಾಗುತ್ತಿದೆ.

ಈ ಮಧ್ಯೆ ಕೊರೋನಾ ವೈರಸ್‌ ಮೊದಲ ಬಾರಿಗೆ ಕಂಡುಬಂದ ವುಹಾನ್‌ ಪ್ರಾಂತ್ಯದಲ್ಲಿ 1000 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಚೀನಾ ಚುರುಕು ನೀಡಿದೆ. ಕಾರ್ಮಿಕರಿಗೆ ಮೂರುಪಟ್ಟು ವೇತನ ಕೊಟ್ಟು ಕೆಲಸ ಮಾಡಿಸುತ್ತಿದೆ.

ಈ ವೈರಾಣು ಹಾಂಕಾಂಗ್‌, ಮಕಾವ್‌, ತೈವಾನ್‌, ನೇಪಾಳ, ಜಪಾನ್‌, ಸಿಂಗಾಪುರ, ದಕ್ಷಿಣ ಕೊರಿಯಾ, ಥಾಯ್ಲೆಂಡ್‌, ವಿಯೆಟ್ನಾಂ ಹಾಗೂ ಅಮೆರಿಕಕ್ಕೂ ಹಬ್ಬಿದೆ. ಜಪಾನ್‌ನಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ವಿಶ್ವಾದ್ಯಂತ ಈ ವೈರಸ್‌ ಭಾರಿ ಭೀತಿ ಸೃಷ್ಟಿಸಿದೆ.

ಚೀನೀಯರಿಗೆ ಹೊಸ ವರ್ಷ ಸಂಭ್ರಮ ಇಲ್ಲ:

ಪ್ರತಿ ವರ್ಷ ಜ.25 ಅನ್ನು ಚೀನಿಯರು ಹೊಸ ವರ್ಷವೆಂದು ಆಚರಿಸುತ್ತಾರೆ. 12 ವರ್ಷಗಳು ಪೂರ್ಣಗೊಂಡರೆ ಒಂದು ಚಕ್ರ ಮುಗಿದಂತೆ. ಪ್ರತಿ ವರ್ಷಕ್ಕೂ ಒಂದೊಂದು ಪ್ರಾಣಿಯ ಹೆಸರನ್ನು ಇಡಲಾಗಿರುತ್ತದೆ. ಅದರಂತೆ ಚೀನಿಯರು ಹಂದಿಯ ವರ್ಷದಿಂದ ಇಲಿಯ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಲಿ ವರ್ಷಕ್ಕೆ ಪ್ರವೇಶಿಸುವುದರೊಂದಿಗೆ 12 ವರ್ಷಗಳ ಹೊಸ ಚಕ್ರ ಆರಂಭವಾಗಿದೆ. ಆದರೆ ಈ ಸಂಭ್ರಮದ ಆಚರಣೆಗೆ ಕೊರೋನಾ ವೈರಸ್‌ ಅಡ್ಡಿಯಾಗಿದೆ. ವೈರಾಣು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಹಾಗೂ ಉತ್ಸವಗಳನ್ನು ರದ್ದುಗೊಳಿಸಲಾಗಿದೆ.

ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!

ಹಾಂಕಾಂಗ್‌ನಲ್ಲಿ ತುರ್ತು ಸ್ಥಿತಿ:

ಕೊರೋನಾ ವೈರಸ್‌ ಚೀನಾದಲ್ಲಿ 41 ಮಂದಿಯನ್ನು ಬಲಿ ಪಡೆದ ಬೆನ್ನಲ್ಲೇ ನೆರೆಯ ಹಾಂಕಾಂಗ್‌ ಶನಿವಾರ ತುರ್ತು ಪರಿಸ್ಥಿತಿ ಘೋಷಿಸಿದೆ. 2 ವಾರ ಶಾಲೆಗಳಿಗೆ ರಜೆ ಪ್ರಕಟಿಸಿದೆ. ಈ ವೈರಾಣು ಮತ್ತಷ್ಟುವ್ಯಾಪಿಸುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಾಂಕಾಂಗ್‌ನಲ್ಲಿ ಐವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಗಣರಾಜ್ಯೋತ್ಸವ ಸಂಭ್ರಮಾಚರಣೆ ರದ್ದುಗೊಳಿಸಿದ ಚೀನಾದ ಭಾರತೀಯ ರಾಯಭಾರ ಕಚೇರಿ!