ಸೌದಿ ಅರೇಬಿಯಾ ತನ್ನ ಆಹಾರ ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಕೋಳಿ ಸಾಕಣೆಯಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. 50 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ತಾಪಮಾನದ ಹೊರತಾಗಿಯೂ, ಆಧುನಿಕ ತಂತ್ರಜ್ಞಾನದ ಮೂಲಕ ಕೋಳಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ರಿಯಾದ್: ಸೌದಿ ಅರೇಬಿಯಾ ಉಷ್ಣ ತಾಪಮಾನ ಹೊಂದಿರುವ ದೇಶವಾಗಿದ್ದು, ಇಲ್ಲಿ ಸಾಮಾನ್ಯವಾಗಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತದೆ. ಈ ಕಾರಣದಿಂದಾಗಿ ಇಲ್ಲಿ ಕೃಷಿ ತುಂಬಾ ಕಷ್ಟಕರವಾದ ಉದ್ಯೋಗ ಎಂದು ಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಆಹಾರ ಸಾಮಾಗ್ರಿಗಳ ಮೇಲೆ ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಸೌದಿ ಅರೇಬಿಯಾ ಹೆಚ್ಚಾಗಿ ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಇದೀಗ ಸೌದಿ ಅರೇಬಿಯಾ ಆಹಾರ ಸಾಮಾಗ್ರಿಗಳಲ್ಲಿ ಆತ್ಮನಿರ್ಭರವಾಗಲು ಪ್ರಯತ್ನಿಸುತ್ತಿದೆ.
ಸೌದಿ ಅರೇಬಿಯಾ ಶೇ.80ರಷ್ಟು ಆಹಾರ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದ್ರೆ ಇತ್ತೀಚಿನ ಗಡಿ ವಿವಾದ, ರಾಜತಾಂತ್ರಿಕ ಬಿಕ್ಕಟ್ಟು ಸೇರಿದಂತೆ ಅನೇಕ ಕಾರಣಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಸೌದಿ ಅರೇಬಿಯಾ 'ವಿಷನ್ 2023' ಅಡಿಯಲ್ಲಿ ಕೋಳಿ ಸಾಕಾಣಿಕೆಗಾಗಿ 4.5 ಬಿಲಿಯನ್ ಡಾಲರ್ ( 17 ಬಿಲಿಯನ್ ರಿಯಾಲ್) ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ ಚಿಕನ್ ಮಾಂಸ, ಮೊಟ್ಟೆ ಕೊರತೆಯನ್ನು ಪೂರೈಸಿಕೊಳ್ಳಲು ಸೌದಿ ಮುಂದಾಗಿದೆ.
ಸೌದಿ ಅರೇಬಿಯಾದ ಶಖ್ರಾ (Shaqra) ಎಂಬ ಪ್ರದೇಶದಲ್ಲಿ ದೊಡ್ಡಮಟ್ಟದ ಕೋಳಿ ಫಾರಂಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ತನ್ಮಿಯಾ ಫುಡ್ ಸೇರಿದಂತೆ ಹಲವು ಕಂಪನಿಗಳು ಕೋಳಿಗಳ ಸಾಕಾಣಿಕೆಯನ್ನು ಮಾಡುತ್ತಿವೆ. ಕಳೆದ ಒಂದು ದಶಕದಲ್ಲಿ ಈ ಆಹಾರ ಕಂಪನಿಗಳ ಉತ್ಪದಾನಾ 12ಪಟ್ಟು ಅಧಿಕವಾಗಿದೆ ಎಂದು ವರದಿಯಾಗಿದೆ. ಮರಭೂಮಿ ಪ್ರದೇಶದಲ್ಲಿ ಅತ್ಯಾಧುನಿಕ ಉಪಹರಣ ಬಳಕೆ ಮಾಡಿಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಕೋಳಿ ಸಾಕಾಣಿಕೆ ಮಾಡುವಲ್ಲಿ ಸೌದಿ ಅರೇಬಿಯಾ ಯಶಸ್ವಿಯಾಗಿದೆ. ಅತಿ ಹೆಚ್ಚು ಬಿಸಿಲು/ಶಾಖ ಹೊಂದಿರುವ ಪ್ರದೇಶದಲ್ಲಿ ಕೋಳಿ ಸಾಕಾಣಿಕೆ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ.
ಇದನ್ನೂ ಓದಿ: ಮರಭೂಮಿಯಲ್ಲಿ ಹಿಮಪಾತ! ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಯ್ತು ಸೌದಿ... ವಿಡಿಯೋ ವೈರಲ್
ಆಧುನಿಕ ತಂತ್ರಜ್ಞಾನ ಮತ್ತು ಸರಿಯಾದ ತಾಪಮಾನವನ್ನು ನಿರ್ವಹಣೆಯಿಂದಾಗಿ ಸೌದಿ ಅರೇಬಿಯಾದ ಕೋಳಿ ಸಾಕಣೆ ಕೇಂದ್ರಗಳಲ್ಲಿ ಮರಿಗಳ ಮರಣ ಪ್ರಮಾಣವು 4% ಕ್ಕಿಂತ ಕಡಿಮೆಯಾಗಿದೆ. ಇಲ್ಲಿ ಸಾಕಾಲಾಗುವ ಪಕ್ಷಿಗಳಿಗೆ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಇದರ ಮೂಲಕ ಸೌದಿ ಅರೇಬಿಯಾದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. 2023ರೊಳಗೆ ಚಿಕನ್ ಮಾಂಸದಲ್ಲಿ ಅತ್ಮನಿರ್ಭರವಾಗಲು ಸೌದಿ ಅರೇಬಿಯಾ ಮಹತ್ವದ ಹೆಜ್ಜೆಯನ್ನು ಇರಿಸಿದೆ.
ಜಗತ್ತಿನಲ್ಲಿ ಅತ್ಯಧಿಕವಾಗಿ ಕೋಳಿಯ ಮಾಂಸವನ್ನು ಆಹಾರವನ್ನಾಗಿ ಸೇವಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಯುವ ಜನತೆಯ ಸಂಖ್ಯೆ ಅಧಿಕವಾಗಿದ್ದು, ವೆಸ್ಟರ್ನ್ ಫುಡ್‌ನತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಈ ಭಾಗದಲ್ಲಿ ಚಿಕನ್ ಬೆಲೆ ಕಡಿಮೆಯಾಗಿರುವ ಕಾರಣ ಎಲ್ಲಾ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪ್ರೊಟಿನ್ ಭರಿತ ಆಹಾರವಾಗಿದೆ. ಆದ್ದರಿಂದ ಸೌದಿ ಅರೇಬಿಯಾದಲ್ಲಿ ಚಿಕನ್‌ಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಈ ಹಿನ್ನೆಲೆ ಚಿಕನ್ ಕೊರತೆ ನೀಗಿಸಲು ಸೌದಿ ಅರೇಬಿಯಾ 4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸೌದಿ ಅರೇಬಿಯಾ ಹೊಸ ನಿಯಮ, ವಿದೇಶಿಗರು ಕೇವಲ 2 ವಾಹನ ಹೊಂದಲು ಅವಕಾಶ
