17 ವೈದ್ಯರು ಕಂಡುಹಿಡಿಯಲಾಗದ ನಿಗೂಢ ರೋಗ ಪತ್ತೆಹಚ್ಚಿದ ಚಾಟ್ ಜಿಪಿಟಿ!

Synopsis
ನಾಲ್ಕು ವರ್ಷದ ಮಗುವಿನ ಅಪರೂಪದ ಕಾಯಿಲೆಯನ್ನು 17 ವೈದ್ಯರು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ, ಚಾಟ್ ಜಿಪಿಟಿ ಮೂಲಕ ತಾಯಿಗೆ ಉತ್ತರ ಸಿಕ್ಕಿತು. ಎಐ ತಂತ್ರಜ್ಞಾನವು 'ಟೆಥರ್ಡ್ ಕಾರ್ಡ್ ಸಿಂಡ್ರೋಮ್' ಎಂಬ ರೋಗವನ್ನು ಸೂಚಿಸಿತು, ನಂತರ ವೈದ್ಯರು ದೃಢಪಡಿಸಿದರು.
ನಾಲ್ಕು ವರ್ಷದ ಮಗನ ನಿಗೂಢ ರೋಗಕ್ಕೆ ಉತ್ತರ ಹುಡುಕುತ್ತಿದ್ದ ತಾಯಿಗೆ ಚಾಟ್ ಜಿಪಿಟಿ ಮೂಲಕ ಕೊನೆಗೂ ಸಮಾಧಾನ ಸಿಕ್ಕಿದೆ. ಹಲವು ಆಸ್ಪತ್ರೆಗಳಿಗೆ ಅಲೆದಾಡಿ, 17 ವೈದ್ಯರು ಪ್ರಯತ್ನಿಸಿದರೂ ಮಗುವಿನ ಅಪರೂಪದ ರೋಗ ಏನೆಂದು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ತಾಯಿ ತಂತ್ರಜ್ಞಾನದ ಸಹಾಯ ಪಡೆದರು.
ಕೋವಿಡ್-19 ಸಾಂಕ್ರಾಮಿಕದ ನಂತರ ಅಲೆಕ್ಸ್ ಎಂಬ ಮಗುವಿನಲ್ಲಿ ಅಪರೂಪದ ಲಕ್ಷಣಗಳು ಕಾಣಿಸಿಕೊಂಡವು. ತೀವ್ರವಾದ ಹಲ್ಲುನೋವು, ನಿಧಾನಗತಿಯ ಬೆಳವಣಿಗೆ, ದೇಹದ ಸಮತೋಲನ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳನ್ನು ಮಗು ಅನುಭವಿಸುತ್ತಿತ್ತು. ಮಗನ ರೋಗದ ಬಗ್ಗೆ ತಿಳಿದು ಸೂಕ್ತ ಚಿಕಿತ್ಸೆ ಪಡೆಯಲು ತಾಯಿ ಕೋರ್ಟ್ನಿ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದರು. 17 ವೈದ್ಯರು ಮಗುವನ್ನು ಪರೀಕ್ಷಿಸಿದರೂ ಯಾರಿಂದಲೂ ಸರಿಯಾದ ರೋಗನಿರ್ಣಯ ಅಥವಾ ಚಿಕಿತ್ಸೆ ಸಾಧ್ಯವಾಗಲಿಲ್ಲ.
ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ಕೋರ್ಟ್ನಿ ವಿಶಿಷ್ಟ ಪ್ರಯತ್ನ ಮಾಡಿದರು. ಅಲೆಕ್ಸ್ನ ಲಕ್ಷಣಗಳು ಮತ್ತು ಎಂಆರ್ಐ ಸ್ಕ್ಯಾನ್ ವರದಿಗಳನ್ನು ಚಾಟ್ ಜಿಪಿಟಿಗೆ ಅಪ್ಲೋಡ್ ಮಾಡಿದರು. ಮಾಹಿತಿ ಪರಿಶೀಲಿಸಿದ ಚಾಟ್ ಜಿಪಿಟಿ ಅಪರೂಪದ ರೋಗದ ಸಾಧ್ಯತೆ ಸೂಚಿಸಿತು. 'ಟೆಥರ್ಡ್ ಕಾರ್ಡ್ ಸಿಂಡ್ರೋಮ್' ಎಂಬ ನರವೈಜ್ಞಾನಿಕ ಕಾಯಿಲೆಯಿಂದ ಮಗು ಬಳಲುತ್ತಿರಬಹುದು ಎಂದು ಚಾಟ್ ಜಿಪಿಟಿ ತಿಳಿಸಿತು. ಈ ಕಾಯಿಲೆಯಲ್ಲಿ ಅಂಗಾಂಶಗಳು ಬೆನ್ನುಹುರಿಯ ಚಲನೆಯನ್ನು ನಿರ್ಬಂಧಿಸುತ್ತವೆ.
ಇದನ್ನೂ ಓದಿ: ಸಿಎಂ ಸಚಿವಾಲಯ ಸರ್ಕಾರಿ ಕೆಲಸಕ್ಕೆ ಮೈಸೂರಿನವರಿಗೆ ಮಾತ್ರ ನೌಕರಿ!
ಚಾಟ್ ಜಿಪಿಟಿ ಸಲಹೆ ಪಡೆದು ಕೋರ್ಟ್ನಿ ಇದೇ ರೀತಿಯ ಲಕ್ಷಣಗಳಿರುವ ಮಕ್ಕಳ ಪೋಷಕರನ್ನು ಆನ್ಲೈನ್ನಲ್ಲಿ ಹುಡುಕಿದರು. ನರ ಶಸ್ತ್ರಚಿಕಿತ್ಸಕರು ಕೋರ್ಟ್ನಿ ಅವರ ಮಗ ಅಲೆಕ್ಸ್ನ ರೋಗವನ್ನು ದೃಢಪಡಿಸಿದರು. ಹಲವು ವರ್ಷಗಳ ಅನುಮಾನ ಮತ್ತು ಅನಿಶ್ಚಿತತೆಯ ನಂತರ, 4 ವರ್ಷದ ಮಗು ಈಗ ಸಹಜ ಜೀವನಕ್ಕೆ ಮರಳಲು ಸಿದ್ಧವಾಗಿದೆ. ಇತ್ತೀಚೆಗೆ ನಡೆದ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ವೈದ್ಯಕೀಯ ಕ್ಷೇತ್ರದಲ್ಲಿ ಎಐ ಬಳಕೆಯ ಬಗ್ಗೆ ಜಾಗತಿಕ ಚರ್ಚೆಗೆ ನಾಂದಿ ಹಾಡಿದೆ. ಆದರೆ ಎಐ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಲ್ಲದಾದರೂ, ಅರ್ಹ ವೈದ್ಯಕೀಯ ವೃತ್ತಿಪರರಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ತಜ್ಞರು ಒತ್ತಿ ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ಎಐ ಸಹಾಯದಿಂದ ಅದ್ಭುತಗಳು ಸಂಭವಿಸಬಹುದಾದರೂ, ತಪ್ಪು ಫಲಿತಾಂಶಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ರಹಸ್ಯ ಬ್ಯಾಂಕಾಕ್ ಟ್ರಿಪ್ ಪತ್ನಿಗೆ ಗೊತ್ತಾಗದಂತೆ ಮಾಡಲು ಹೋಗಿ ಪತಿ ಎಡವಟ್ಟು, ಗುಟ್ಟು ರಟ್ಟು
ಇತ್ತೀಚಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಎಲ್ಲ ಕ್ಷೇತ್ರಗಳಲ್ಲಿ ಕಾಲಿಡುತ್ತಿದ್ದು, ಮಾನವ ಶಕ್ತಿಯ ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಏನೇ ಆದರೂ ವೈದ್ಯಕೀಯ ಕ್ಷೇತ್ರದಲ್ಲಿ ಎಐ ಮಾತ್ರ ಬರಲು ಸಾಧ್ಯವಿಲ್ಲ ಎಂದು ಬಲವಾಗಿ ನಂಬಲಾಗಿತ್ತು. ಆದರೆ ಇದೀಗ 17 ವೈದ್ಯರಿಂದ ಪತ್ತೆ ಮಾಡಲಾಗದಂತವ ರೋಗವನ್ನು ರೋಗ ಲಕ್ಷಣಗಳನ್ನು ಆಧರಿಸಿ ಯಾವ ರೋಗ ಎಂಬುದನ್ನು ಎಐ ಪತ್ತೆ ಮಾಡಿದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿಯೂ ಡಾಕ್ಟರ್ ಸೇರಿ ಇತರರ ಕೆಲಸಗಳನ್ನು ಎಐ ಕಸಿದುಕೊಳ್ಳಲಿದೆ ಎಂಬ ಆತಂಕವೂ ಶುರುವಾಗಿದೆ. ಆದರೆ, ರೋಗ ಲಕ್ಷಣ ಪತ್ತೆಗೆ ಎಐ ಬಳಕೆ ಮಾಡಿದರೂ ಚಿಕಿತ್ಸೆಗೆ ವೈದ್ಯರೇ ಬೇಕು ಎಂದು ತಜ್ಞರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳನ್ನು ನಾವು ಎಲ್ಲರೂ ನಿರೀಕ್ಷೆ ಮಾಡಬೇಕು, ಹೊರತು ಈಗಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.