ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧಸ್ಥಗಿತ ಮಾತುಕತೆ ಕಗ್ಗಂಟಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಮ್ಮೆ ಒಪ್ಪಂದ ಅಂತಿಮ ಎಂದೂ, ಮತ್ತೊಮ್ಮೆ ದಾಳಿಯ ಸುಳಿವು ನೀಡಿಯೂ ಗೊಂದಲ ಸೃಷ್ಟಿಸಿದ್ದಾರೆ. ಈ ಅನಿಶ್ಚಿತತೆಯ ನಡುವೆ, ಸಂಧಾನ ಯಶಸ್ವಿಯಾಗುವುದೇ ಅಥವಾ ಯುದ್ಧ ಮರುಕಳಿಸುವುದೇ ಎಂಬ ಕುತೂಹಲ ಹೆಚ್ಚಾಗಿದೆ.

ವಾಷಿಂಗ್ಟನ್‌/ಟೆಹ್ರಾನ್‌: 2 ತಿಂಗಳಿಂದ ಯುದ್ಧಸ್ಥಗಿತದ ವಿಚಾರದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್‌ ನಡುವಿನ ಮಾತುಕತೆ ದಿನ ಕಳೆದಂತೆ ಕಗ್ಗಂಟಾಗುತ್ತಲೇ ಸಾಗಿದೆ. ಸಂಧಾನವು ಬಹುತೇಕ ಆಗಿದೆ ಎಂದು ಭಾನುವಾರ ಬೆಳಗ್ಗೆಯಷ್ಟೇ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸಂಜೆಯಾಗುವಷ್ಟರಲ್ಲಿ ಇರಾನ್‌ ಹಡಗುಗಳ ಮೇಲೆ ದಾಳಿ ಮಾಡುವ ಫೋಟೋ ಹಂಚಿಕೊಂಡು ಗೊಂದಲದ ಹೇಳಿಕೆ ನೀಡಿದ್ದಾರೆ. ‘ಒಪ್ಪಂದಕ್ಕೆ ಆತುರ ಬೇಡ’ ಎಂದು ತಮ್ಮ ಸಂಧಾನಕಾರರಿಗೆ ಸೂಚಿಸಿರುವ ಅವರು ಎರಡೂ ಕಡೆಯವರು ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ. ಈ ಮೂಲಕ ಸಂಧಾನಕ್ಕೆ ಬರುವಂತೆ ಇರಾನ್‌ ಮೇಲಿನ ಒತ್ತಡ ಹೆಚ್ಚಿಸುವ ಯತ್ನ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ನಡುವೆ ಸದ್ಯ ಭಾರತದಲ್ಲಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಮಾತುಕತೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಒಂದೆರೆಡು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಇದೆ. ಯಾವುದೇ ಕ್ಷಣದಲ್ಲಿ ಶುಭ ಸುದ್ದಿ ಹೊರಬೀಳಬಹುದು ಬಗ್ಗೆ ಸಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನ ಕುದುರಲಿದೆಯೇ? ಅಥವಾ ಮರಳಿ ಯುದ್ಧ ಆರಂಭವಾಗಿದೆಯೋ ಎಂಬ ಕುತೂಹಲ ಮೂಡಿದೆ.

ಡೀಲ್‌ ಸನ್ನಿಹಿತ:

ಇಸ್ರೇಲ್‌ ಹಾಗೂ ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳ ಜತೆ ಕರೆಯಲ್ಲಿ ಮಾತನಾಡಿದ ಟ್ರಂಪ್‌, ‘ಹೋರ್ಮುಜ್‌ ಜಲಸಂಧಿಯನ್ನು ಮುಕ್ತ ಮಾಡುವುದು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಮಾತುಕತೆ ದೊಡ್ಡಮಟ್ಟದಲ್ಲಿ ನಡೆಯಿತು. ಒಪ್ಪಂದವು ಕೊನೆಯ ಹಂತದಲ್ಲಿದೆ’ ಎಂದು ಭಾನುವಾರ ಬೆಳಗ್ಗೆ ಹೇಳಿದ್ದರು. ಅತ್ತ ರುಬಿಯೋ, ‘ಕೆಲವೇ ದಿನಗಳಲ್ಲಿ ಸಿಹಿಸುದ್ದಿ ಸಿಗಲಿದೆ. ಇರಾನ್‌ ಅಣ್ವಸ್ತ್ರ ಹೊಂದುತ್ತದೆ ಎಂದು ಇನ್ನು ಜಗತ್ತು ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು.

ಉಲ್ಟಾ ಹೊಡೆದ ಟ್ರಂಪ್‌:

ಸಂಜೆಯಷ್ಟರಲ್ಲಿ ವರಸೆ ಬದಲಿಸಿದ ಟ್ರಂಪ್‌, ಇರಾನ್‌ನ ಧ್ವಜ ಹೊತ್ತಿರುವ ಬೃಹತ್‌ ನೌಕೆಗಳ ಮೇಲೆ ಅಮೆರಿಕದ ಡ್ರೋನ್‌ ದಾಳಿ ಮಾಡುತ್ತಿರುವ, ಮೇಲೆ ದೊಡ್ಡದಾಗಿ ‘ಅಡಿಯೋಸ್‌’(ವಿದಾಯ) ಎಂದು ಬರೆದಿರುವ ಫೋಟೋ ಹಂಚಿಕೊಂಡಿದ್ದಾರೆ. ಇದು, ಟ್ರಂಪ್‌ ಮತ್ತೆ ದಾಳಿ ಆರಂಭಿಸಲಿದ್ದಾರೆಯೇ ಎಂಬ ಭೀತಿ ಹುಟ್ಟಿಹಾಕಿದೆ.

ಡೀಲ್‌ಗೆ ಆತುರ ಬೇಡ:

ಇದಾದ 1 ಗಂಟೆಯ ಬಳಿಕ ಟ್ರಂಪ್‌, ‘ಒಪ್ಪಂದ ಮಾಡಿಕೊಳ್ಳುವುದರಲ್ಲಿ ಆತುರ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ತಪ್ಪಾಗಬಾರದು. ಅಲ್ಲಿಯವರೆಗೆ ಹೋರ್ಮುಜ್‌ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ’ ಎಂದು ಪೋಸ್ಟ್‌ ಮಾಡುವ ಮೂಲಕ ಮತ್ತೆ ಮಾತುಕತೆಯಲ್ಲಿ ಆಸಕ್ತಿ ತೋರಿಸಿದ್ದಾರೆ.

30 ದಿನದಲ್ಲಿ ಸಹಜಸ್ಥಿತಿ-ಇರಾನ್‌:

ಅತ್ತ, ಕದನವಿರಾಮ ಏರ್ಪಟ್ಟ 30 ದಿನಗಳಲ್ಲಿ ಹೋರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಓಡಾಟ ಮತ್ತೆ ಮೊದಲಿನಂತಾಗುತ್ತದೆ ಎಂದು ಇರಾನ್‌ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಯುರೇನಿಯಂ ತ್ಯಾಗಕ್ಕೆ ಇರಾನ್‌ ಸಿದ್ಧ?:

ಇರಾನ್‌ ಅಣ್ವಸ್ತ್ರ ಹೊಂದಬಾರದು ಎಂಬುದೇ ಅಮೆರಿಕದ ಪ್ರಮುಖ ಬೇಡಿಕೆಯಾಗಿರುವ ಹೊತ್ತಿನಲ್ಲಿ, ಇರಾನ್‌ ತನ್ನ ಬಳಿ ಇರುವ ಸಂಸ್ಕರಿಸಿದ ಯುರೇನಿಯಂಅನ್ನು ತ್ಯಜಿಸಲು ಸಿದ್ಧವಾಗಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.