* ಸಿಗರೇಟ್ ದುಷ್ಪರಿಣಾಮಗಳ ಕುರಿತು ಜಾಗೃತಿ ಕ್ರಮ* ಪ್ರತಿ ಸಿಗರೇಟ್ ಮೇಲೆ ಎಚ್ಚರಿಕೆ: ಕೆನಡಾ ಸರ್ಕಾರದ ಹೊಸ ಕ್ರಮ
ಒಟ್ಟವಾ(ಜೂ.13): ವಿಶ್ವದ ಹಲವು ದೇಶಗಳಲ್ಲಿ ಸಿಗರೇಟ್ ಪ್ಯಾಕ್‌ಗಳ ಮೇಲೆ ಅದರ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಎಚ್ಚರಿಕೆ ಮುದ್ರಣ ಸಾಮಾನ್ಯ. ಆದರೆ ಪ್ರತಿ ಸಿಗರೇಟ್ ಮೇಲೆ ಅದರ ಸೇವನೆಯಿಂದಾಗುವ ಹಾನಿ ಕುರಿತು ಎಚ್ಚರಿಕೆಯನ್ನು ಮುದ್ರಿಸಲು ಮುಂದಾದ ವಿಶ್ವದ ಮೊದಲನೇ ದೇಶ ಎಂಬ ಹಿರಿಮೆಗೆ ಕೆನಡಾ ಪಾತ್ರವಾಗಿದೆ.
ಕೆನಡಾದಲ್ಲಿ ಸದ್ಯ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.11ರಷ್ಟುಯುವಕರು ಹಾಗೂ 15ರಿಂದ 19 ವರ್ಷ ವಯೋಮಿತಿಯ ಶೇ.4ರಷ್ಟುಯುವಕರು ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ಪನ್ನಗಳ ಮೇಲೆ ಅವುಗಳ ಸೇವನೆಯ ದುಷ್ಪರಿಣಾಮಗಳ ಮಾಹಿತಿಯನ್ನು ಮುದ್ರಿಸುವ ಮೂಲಕ ಜಾಗೃತಿ ಮೂಡಿಸುವ ಹೊಸ ಕ್ರಮಕ್ಕೆ ಕೆನಡಾ ಮುಂದಾಗಿದೆ.
‘ಪ್ರತಿ ಪಫ್‌ನಲ್ಲಿಯೂ ವಿಷ’ ಎಂದು ಪ್ರತಿ ಸಿಗರೇಟಿನ ಮೇಲೆ ಬರೆಯಲಾಗುವುದು. ಸಿಗರೇಟಿನ ಪ್ಯಾಕೇಟ್ ಮೇಲೆ ಸಿಗರೇಟ್ ಸೇವನೆಯಿಂದಾಗುವ ಹೊಟ್ಟೆಯ ಕ್ಯಾನ್ಸರ್, ಡಯಾಬಿಟೀಸ್, ಹೃದಯ ಸಂಬಂಧೀ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿ ಪ್ರಕಟಿಸಲಾಗುವುದು ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮಗಳ ಮೂಲಕ 2035ರ ಒಳಗಾಗಿ ದೇಶದಲ್ಲಿ ಸಿಗರೇಟ್ ಸೇವನೆಯ ಪ್ರಮಾಣ ಅರ್ಧದಷ್ಟುಇಳಿಕೆ ಮಾಡುವ ಗುರಿಯನ್ನು ಕೆನಡಾ ಸರ್ಕಾರ ಹೊಂದಿದೆ.
