ಕ್ಯಾತೆ ತೆಗೆದ ಕೆನಡಾ ಪ್ರಧಾನಿಗೆ ತೀವ್ರ ಮುಖಭಂಗ: ಭಾರತದ ವಿರುದ್ಧ ಅರೋಪಕ್ಕೆ ಸಾಕ್ಷ್ಯ ನೀಡಲು ವಿಫಲ
ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಟ್ರುಡೋಗಿಂತ ಅವರ ರಾಜಕೀಯ ಎದುರಾಳಿ, ಪ್ರತಿಪಕ್ಷವಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪೀರ್ ಪಾಲಿವರ್ ಮುನ್ನಡೆ ಪಡೆದಿದ್ದಾರೆ. ಹೀಗಾಗಿ ಕಳೆದುಹೋದ ಜನಪ್ರಿಯತೆ ಮರಳಿ ಪಡೆಯಲು ಟ್ರುಡೋ ಭಾರತದ ಮೇಲೆ ಇಂಥದ್ದೊಂದು ಆರೋಪ ಮಾಡಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಟೊರಂಟೋ (ಸೆಪ್ಟೆಂಬರ್ 23, 2023): ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶದಲ್ಲಿ ಮೈಲೇಜ್ ಪಡೆಯಲು ಮುಂದಾಗಿದ್ದ ಕೆನಡಾ ಪ್ರಧಾನಿಗೆ ಇದೀಗ ಸ್ವದೇಶದಲ್ಲೇ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ನಿಜ್ಜರ್ ವಿಷಯದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲೇ ಈ ಕುರಿತು ಬಹಿರಂಗ ಟೀಕೆ ಮಾಡಿದ ಜಸ್ಟಿನ್ ವರ್ತನೆಯನ್ನು ಕೆನಡಾದ ಮಾಧ್ಯಮಗಳು ಟೀಕಿಸಿವೆ. ಜೊತೆಗೆ ಅಲ್ಲಿನ ವಿಪಕ್ಷಗಳು ಕೂಡಾ, ಇಂಥದ್ದೊಂದು ಆರೋಪಕ್ಕೆ ಪ್ರಧಾನಿ ಸೂಕ್ತ ಸಾಕ್ಷ್ಯ ನೀಡದ ಹೊರತೂ ನಾವು ಯಾವುದೇ ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಮೂಲಕ ತಪರಾಕಿ ಹಾಕಿವೆ.
ಮತ್ತೊಂದೆಡೆ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಟ್ರುಡೋಗಿಂತ ಅವರ ರಾಜಕೀಯ ಎದುರಾಳಿ, ಪ್ರತಿಪಕ್ಷವಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪೀರ್ ಪಾಲಿವರ್ ಮುನ್ನಡೆ ಪಡೆದಿದ್ದಾರೆ. ಹೀಗಾಗಿ ಕಳೆದುಹೋದ ಜನಪ್ರಿಯತೆ ಮರಳಿ ಪಡೆಯಲು ಟ್ರುಡೋ ಭಾರತದ ಮೇಲೆ ಇಂಥದ್ದೊಂದು ಆರೋಪ ಮಾಡಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಇದನ್ನು ಓದಿ: ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್ ಸೂಟ್ ತಿರಸ್ಕರಿಸಿದ್ದ ಟ್ರಡೋ
ಇಷ್ಟೆಲ್ಲಾ ಆದರೂ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಶುಕ್ರವಾರ ಮತ್ತೊಮ್ಮೆ ಆರೋಪ ಮಾಡಿರುವ ಟ್ರುಡೋ, ತಮ್ಮ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯ ನೀಡಲಾಗದೆ ಟೀಕೆಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆಯೇ ಭಾರತದ ಮೇಲಿನ ಟೀಕೆ ಬೆನ್ನಲ್ಲೇ ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ತೆರಳಿದ್ದ ಟ್ರುಡೋ ಅಲ್ಲಿ ಹಲವು ದೇಶಗಳ ಮುಂದೆ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದರೂ ಯಾವುದೇ ದೇಶಗಳೂ ಅದಕ್ಕೆ ಸೊಪ್ಪು ಹಾಕಿಲ್ಲ ಎಂದು ಎನ್ನಲಾಗಿದೆ.
ಸ್ವದೇಶದಲ್ಲೇ ಟೀಕೆ:
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಶಂಕೆ ಮೇರೆಗೆ ಕೆನಡಾ ಸರ್ಕಾರ ಆಂತರಿಕ ತನಿಖೆ ಕೈಗೊಂಡಿತ್ತು. ಅದಕ್ಕೂ ಮೊದಲೇ ಈ ವಿಷಯದಲ್ಲಿ ಬಹಿರಂಗ ಹೇಳಿಕೆ ನೀಡಿದ ಕೆನಡಾ ಪ್ರಧಾನಿ ಕ್ರಮವನ್ನು ದೇಶದ ಹಲವು ಮಾಧ್ಯಮಗಳು ಟೀಕಿಸಿವೆ. ಭಾರತದ ಮೇಲೆ ಗಂಭೀರ ಆರೋಪ ಮಾಡಿದರೂ ಅದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡುವಲ್ಲಿ ಜಸ್ಟಿನ್ ವಿಫಲರಾಗಿದ್ದಾರೆ. ಈ ಪ್ರಕರಣವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಕುಸಿಯುತ್ತಿರುವ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಬಳಸುತ್ತಿರಬಹುದು ಎಂಬರ್ಥದ ವಿಶ್ಲೇಷಣೆಯನ್ನು ಹಲವು ಪತ್ರಿಕೆಗಳು ಮಾಡಿವೆ.
ಇದನ್ನೂ ಓದಿ: ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ಬಂದ್ ಮಾಡಿದ ಭಾರತ!
ಟ್ರುಡೋ ಮಾಡಿದ ಆರೋಪ ಇನ್ನೂ ಸಾಬೀತಾಗಿಲ್ಲ. ಅವರು ತಮ್ಮ ಆರೋಪದ ಕುರಿತ ಕೆನಡಿಯನ್ನರಿಗೆ ಯಾವುದೇ ಸಾಕ್ಷ್ಯ ನೀಡಲು ವಿಫಲರಾಗಿದ್ದಾರೆ ಎಂದು ‘ನ್ಯಾಷನಲ್ ಪೋಸ್ಟ್’ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಟೀಕಿಸಿದೆ. ತಮ್ಮ ಸರ್ಕಾರದ ಅಳಿವು ಉಳಿವಿಗೆ ಖಲಿಸ್ತಾನಿ ಬೆಂಬಲಿತ ಪಕ್ಷಗಳನ್ನೇ ಅವಲಂಬಿಸಿರುವ ಜಸ್ಟಿನ್ ಅದೇ ಕಾರಣಕ್ಕಾಗಿ ಭಾರತವನ್ನು ಬಹಿರಂಗವಾಗಿ ಟೀಕಿಸಿ ಸ್ಥಳೀಯ ಖಲಿಸ್ತಾನಿ ಬೆಂಬಲಿಗರ ವಿಶ್ವಾಸಗಳಿಸಲು ಮುಂದಾಗಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿಬಂದಿದೆ.
ಜನಪ್ರಿಯತೆ ಕುಸಿತ:
ಈ ನಡುವೆ ಪ್ರಧಾನಿ ಜಸ್ಟಿನ್ ಟ್ರುಡೋ, ಸ್ವದೇಶದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ. ಟ್ರುಡೋ ಅವರ ರಾಜಕೀಯ ಎದುರಾಳಿ ಆಗಿರುವ ಕೆನಡಾ ಪ್ರತಿಪಕ್ಷವಾದ ಕನ್ಸರ್ವೇಟಿವ್ ಪಕ್ಷ ನಾಯಕ ಪೀರ್ ಪಾಲಿವರ್ ಅವರು ಶೇ. 39ರಷ್ಟು ಕೆನಡಿಯನ್ನರ ಬೆಂಬಲ ಸಂಪಾದಿಸಿದ್ದು, ಈಗಲೇ ಚುನಾವಣೆ ನಡೆದರೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿದೆ. ಕಳೆದ ಜುಲೈನಲ್ಲೂ ನಡೆದಿದ್ದ ಸಮೀಕ್ಷೆಯೊಂದರಲ್ಲಿ ಟ್ರೂಡೋ 50 ವರ್ಷಗಳಲ್ಲಿ ಅತ್ಯಂತ ಕೆಟ್ಟ ಪ್ರಧಾನಿ ಎಂದು ಕಂಡುಬಂದಿತ್ತು.
ಖಲಿಸ್ತಾನ ಹೋರಾಟ ಬೆಂಬಲಿಸಿದ ಶುಭನೀತ್ ಸಿಂಗ್ ಹಾಡು ಕಿತ್ತೆಸೆದ ಮೋಜ್ ಆ್ಯಪ್!
ಪುನರುಚ್ಚಾರ:
ಈ ನಡುವೆ ನಿಜ್ಜರ್ ಹತ್ಯೆ ಕುರಿತು ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿ ಈ ಕುರಿತ ಸಾಕ್ಷ್ಯ ಹಂಚಿಕೊಳ್ಳಿ ಎಂದು ಸೂಚಿಸಿದರೂ ಅದರಲ್ಲಿ ವಿಫಲರಾದ ಜಸ್ಟಿನ್ ಟ್ರುಡೋ, ಶುಕ್ರವಾರ ಮತ್ತೆ ಭಾರತದ ಮೇಲೆ ಹಳೆಯ ಆರೋಪವನ್ನೇ ಮಾಡಿದ್ದಾರೆ. ಆದರೆ ತಮ್ಮ ಆರೋಪಕ್ಕೆ ಯಾವುದೇ ಸಾಕ್ಷ್ಯ ಕೊಡುವಲ್ಲಿ ಅವರು ಮತ್ತೆ ವಿಫಲರಾಗಿದ್ದಾರೆ.