Asianet Suvarna News Asianet Suvarna News

ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ಬಂದ್‌ ಮಾಡಿದ ಭಾರತ!

ಭಾರತವು ಕೆನಡಾದ ನಾಗರಿಕರಿಗೆ ವೀಸಾ ಸೇವೆಯನ್ನು ನಿಲ್ಲಿಸಿದೆ. ಒಂದು ದಿನದ ಹಿಂದೆ, ಕೆನಡಾವನ್ನು ಅಸುರಕ್ಷಿತವೆಂದು ಘೋಷಣೆ ಮಾಡಿದ ಬೆನ್ನಲ್ಲಿಯೇ ಭಾರತ ಈ ಕ್ರಮ ಕೈಗೊಂಡಿದೆ. ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.

India Canada Advisory Controversy stopped visa service for Canadian citizens san
Author
First Published Sep 21, 2023, 4:23 PM IST

ನವದೆಹಲಿ (ಸೆ.21): ಭಾರತವು ಕೆನಡಾ ದೇಶದ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಷಯದಲ್ಲಿ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿರುವ ಭಾರತದ ವೀಸಾ ಅರ್ಜಿ ಕೇಂದ್ರ ಈ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಮಂಗಳವಾರ ಕೆನಡಾ ತನ್ನ ನಾಗರಿಕರಿಗೆ ಭಾರತದ ಕೆಲವು ಭಾಗಗಳಿಗೆ ಭೇಟಿ ನೀಡದಂತೆ ಸಲಹೆ ನೀಡಿತ್ತು. ಬುಧವಾರ ಭಾರತ ಕೂಡ ಇದೇ ರೀತಿಯ ಸಲಹೆಯನ್ನು ನೀಡಿದೆ. ಇದಾದ ಬಳಿಕ ತಡರಾತ್ರಿ ಕೆನಡಾ ಭಾರತದ ಸಲಹೆಯನ್ನು ತಿರಸ್ಕರಿಸಿತ್ತು. ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ನೆಕ್ ಅವರು ಒಟ್ಟಾವಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ದೇಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದಲ್ಲಿ ವಾಸಿಸುವ ತನ್ನ ನಾಗರಿಕರಿಗೆ ಸಲಹೆಯನ್ನು ನೀಡಿದ್ದು, ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ದೃಷ್ಟಿಯಿಂದ, ಅಲ್ಲಿ ವಾಸಿಸುವ ಅಥವಾ ಪ್ರಯಾಣಿಸುವ ನಾಗರಿಕರು ಬಹಳ ಜಾಗರೂಕರಾಗಿರಲು ಸೂಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯದ ಒಂದು ನಿರ್ದಿಷ್ಟ ವರ್ಗಕ್ಕೆ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ಸಲಹೆಯ ಪ್ರಕಾರ, ಕೆನಡಾದಲ್ಲಿ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯ ದೃಷ್ಟಿಯಿಂದ, ಅಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳು ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ. ಭಾರತೀಯ ಸಮುದಾಯ ಮತ್ತು ವಿದ್ಯಾರ್ಥಿಗಳು ಹೈಕಮಿಷನ್ ಮತ್ತು ಕಾನ್ಸುಲೇಟ್‌ಗಳ ವೆಬ್‌ಸೈಟ್‌ಗಳಲ್ಲಿ ಈ ಕುರಿತಾದ ದೂರುಗಳನ್ನು ಸಲ್ಲಿಸಬಹುದು.

ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು

ಮತ್ತೊಂದೆಡೆ, ಬುಧವಾರ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಕೆನಡಾದಲ್ಲಿ ನೆಲೆಸಿರುವ ಹಿಂದೂಗಳಿಗೆ ದೇಶ ತೊರೆಯುವಂತೆ ಬೆದರಿಕೆ ಹಾಕಿದ್ದ. ಕೆನಡಾದ ಹಿಂದೂಗಳು ಈ ಕುರಿತು ಜಸ್ಟಿನ್ ಟ್ರುಡೊ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪನ್ನು ಅವರ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದ್ದು, ಇದನ್ನು ಹೇಟ್‌ ಕ್ರೈಮ್‌ ಎಂದು ಘೋಷಿಸುವಂತೆ ಮನವಿ ಮಾಡಲಾಗಿದೆ. ಕೆನಡಾದ ಹಿಂದೂ ಸಂಘಟನೆ 'ಹಿಂದೂ ಫೋರಂ ಕೆನಡಾ' ಈ ಪತ್ರವನ್ನು ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲೈನ್ ಅವರಿಗೆ ಬರೆದಿದೆ. ಹಿಂದೂ ಸಂಘಟನೆಯು ತನ್ನ ಪತ್ರದಲ್ಲಿ, ಪನ್ನು ಅವರು ತಮ್ಮ ಅಭಿಪ್ರಾಯಗಳನ್ನು ಮತ್ತು ಅವರ ಖಲಿಸ್ತಾನಿ ಸಹೋದ್ಯೋಗಿಗಳ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಸಿದ್ಧಾಂತವನ್ನು ಒಪ್ಪದ ಜನರನ್ನು ಗುರಿಯಾಗಿಸಲು ಬಯಸುತ್ತಾರೆ. ಕೆನಡಾ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪನ್ನು ಅವರ ಈ ಹೇಳಿಕೆಯನ್ನು ಇನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ತೆಗೆದುಕೊಳ್ಳಲಾಗುತ್ತದೆಯೇ ಎಂದು ಪತ್ರದಲ್ಲಿ ಕೇಳಲಾಗಿದೆ.

ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮಕ ಭೂಪಟ ಹಂಚಿದ ಗಾಯಕನ ಅನ್‌ಫಾಲೋ ಮಾಡಿದ ಕೊಹ್ಲಿ!

Follow Us:
Download App:
  • android
  • ios