ಅನುಮತಿಯಿಲ್ಲದೆ ಗ್ರಾಹಕರ ಲೊಕೇಷನ್ ಟ್ರ್ಯಾಕಿಂಗ್, ಗೂಗಲ್ಗೆ 1287 ಕೋಟಿ ಪಾವತಿಸಲು ಸೂಚನೆ
ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಲೊಕೇಷನ್ ಹಿಸ್ಟರಿ ಸೆಟ್ಟಿಂಗ್‌ಅನ್ನು ಆಫ್ ಮಾಡಿದ್ದರೂ, ಗೂಗಲ್ ಅವರ ಪ್ರೊಫೈಲ್‌ಗೆ ಜಾಹೀರಾತುಗಳನ್ನು ಕಳಿಸುವ ಮೂಲಕ ಟ್ರ್ಯಾಕ್ ಮಾಡಲು ಯಶಸ್ವಿಯಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಕ್ಯಾಲಿಫೋರ್ನಿಯಾ (ಸೆ.16): ಜಾಗತಿಕ ಅಂತರ್ಜಾಲ ದೈತ್ಯ ಹಾಗೂ ಸರ್ಚ್ ಇಂಜಿನ್ ಕಂಪನಿ ಗೂಗಲ್ ತನ್ನ ಗ್ರಾಹಕರ ಸ್ಥಳಗಳನ್ನು ಹೇಗೆ ಟ್ರ್ಯಾಕ್ ಮಾಡುತ್ತದೆ ಮತ್ತು ಒಪ್ಪಿಗೆಯಿಲ್ಲದೆ ಅವರ ಡೇಟಾವನ್ನು ಹೇಗೆ ಬಳಸುತ್ತದೆ ಎಂಬ ಬಗ್ಗೆ ಕ್ಯಾಲಿಫೋರ್ನಿಯಾ ಮತ್ತು ಖಾಸಗಿ ದೂರುದಾರರ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು 155 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 1287 ಕೋಟಿ ರೂಪಾಯಿಯನ್ನು ಪಾವತಿ ಮಾಡಲು ಗೂಗಲ್ ಒಪ್ಪಿಕೊಂಡಿದೆ. ಗೂಗಲ್ ವೈಯಕ್ತಿಕ ಡೇಟಾವನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದರ ಮೇಲೆ ಅವರು ನಿಯಂತ್ರಣವನ್ನು ನಿರ್ವಹಿಸುತ್ತಾರೆ ಎಂದು ಜನರು ನಂಬುವಂತೆ ಆಲ್ಫಾಬೆಟ್ ಜನರನ್ನು ವಂಚಿಸಿದೆ ಎಂದು ಸೆಟ್ಲ್‌ಮೆಂಟ್‌ನಲ್ಲಿ ಹೇಳಲಾಗಿದೆ. ಕಂಪನಿಯು ಜನರ ಸಂಪೂರ್ಣ ಮಾಹಿತಿ ಪಡೆಯಲು ಸಮರ್ಥವಾಗಿದೆ ಮತ್ತು ಅವರು ತಮ್ಮ "ಲೊಕೇಷನ್ ಹಿಸ್ಟರಿ" ಸೆಟ್ಟಿಂಗ್ ಅನ್ನು ಆಫ್ ಮಾಡಿದರೂ ಅವರ ಪ್ರೊಫೈಲ್‌ಗೆ ಜಾಹೀರಾತುಗಳನ್ನು ಕಳಿಸುವ ಮೂಲಕ ಅವರನ್ನು ಗುರಿಯಾಗಿಸಬಹುದು. ಅದಲ್ಲದೆ, ಅವರು ಬಯಸದ ಜಾಹೀರಾತುಗಳನ್ನು ನಿರ್ಬಂಧಿಸುವ ಅವಕಾಶವಿದೆ ಎಂದು ಹೇಳುವ ಮೂಲಕ ಜನರನ್ನು ವಂಚಿಸುತ್ತಿದೆ ಎನ್ನಲಾಗಿದೆ.
"ಗೂಗಲ್ ತನ್ನ ಬಳಕೆದಾರರಿಗೆ ಒಂದು ವಿಷಯವನ್ನು ಮುಖ್ಯವಾಗಿ ಹೇಳುತ್ತಿದೆ. ಅವರು ಆಯ್ಕೆ ಮಾಡಿದ ನಂತರ ಅದು ಇನ್ನು ಮುಂದೆ ಅವರ ಸ್ಥಳವನ್ನು ಟ್ರ್ಯಾಕ್ ಮಾಡುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಮತ್ತು ತನ್ನದೇ ಆದ ವಾಣಿಜ್ಯ ಲಾಭಕ್ಕಾಗಿ ಅದರ ಬಳಕೆದಾರರ ಚಲನವಲನಗಳನ್ನು ಟ್ರ್ಯಾಕ್ ಮಾಡುವುದನ್ನು ಮುಂದುವರಿಸುತ್ತದೆ" ಎಂದು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ರಾಬ್ ಬೊಂಟಾ ಹೇಳಿದ್ದು, ಇದು ಯಾವುದೇ ಕಾರಣಕ್ಕೂ ಸ್ವೀಕರಾರ್ಹವಲ್ಲ ಎಂದಿದೆ.
ಕ್ಯಾಲಿಫೋರ್ನಿಯಾ ಸೆಟ್ಲ್‌ಮೆಂಟ್‌ಗಾಗಿ ಗೂಗಲ್ 93 ಮಿಲಿಯನ್ ಯುಎಸ್ ಡಾಲರ್ ಪಾವತಿಸುವ ಅಗತ್ಯವಿದೆ ಮತ್ತು ಅದು ಜನರ ಇರುವಿಕೆಯನ್ನು ಹೇಗೆ ಟ್ರ್ಯಾಕ್ ಮಾಡುತ್ತದೆ ಮತ್ತು ಅದು ಸಂಗ್ರಹಿಸುವ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಇನ್ನು 62 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಖಾಸಗಿ ದೂರುದಾರರಿಗೆ ಗೂಗಲ್ ನೀಡಬೇಕಿದೆ. ಕಾನೂನು ಶುಲ್ಕವನ್ನು ಕಡಿತಗೊಳಿಸಿದ ನಂತರ, ಇಂಟರ್ನೆಟ್ ಗೌಪ್ಯತೆ ಕಾಳಜಿಗಳನ್ನು ಟ್ರ್ಯಾಕ್ ಮಾಡುವ ನ್ಯಾಯಾಲಯ-ಅನುಮೋದಿತ ಲಾಭೋದ್ದೇಶವಿಲ್ಲದ ಗುಂಪುಗಳಿಗೆ ಈ ಹಣ ಹೋಗುತ್ತದೆ.
ಫಿರ್ಯಾದಿದಾರರ ಪರ ವಕೀಲರು ಈ ಬಗ್ಗೆ ಮಾತನಾಡಿದ್ದು, ಮೊಬೈಲ್ ಹೊಂದಿರುವ ಸರಿಸುಮಾರು 247.7 ಮಿಲಿಯನ್ ಯುಎಸ್ ಪ್ರಜೆಗಳಿಗೆ ಈ ಹಣವನ್ನು ವಿತರಿಸಲು "ಅಸಾಧ್ಯ" ಎಂದು ಹೇಳಿದರು. "ಸೈ ಪ್ರೆಸ್" ಎಂದು ಕರೆಯಲ್ಪಡುವ ಈ ರೀತಿಯ ಸೆಟ್ಲ್‌ಮೆಂಟ್ ಎಲ್ಲಾ ಸದಸ್ಯರಿಗೆ ಅಲ್ಪ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಐಐಟಿ ಗ್ರಾಜ್ಯುವೇಟ್ ಆಗಿರೋ ಈ ಉದ್ಯೋಗಿ ಸ್ಯಾಲರಿ ಮುಕೇಶ್ ಅಂಬಾನಿಗಿಂತ ಮೂರು ಪಟ್ಟು ಹೆಚ್ಚು!
ಇನ್ನೊಂದೆಡೆ ಗೂಗಲ್ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದು, ಎರಡೂ ಸೆಟ್ಲ್‌ಮೆಂಟ್‌ಗಳಿಗೆ ನ್ಯಾಯಾಲಯದ ಅನುಮೋದನೆ ಅಗತ್ಯವಿದೆ ಎಂದು ಹೇಳಿದೆ. ಕಳೆದ ನವೆಂಬರ್, ಅಮೆರಿಕದ 40 ರಾಜ್ಯಗಳಿಂದ ಇದೇ ರೀತಿಯ ಆರೋಪಗಳನ್ನು ಪರಿಹರಿಸಲು 391.5 ಮಿಲಿಯನ್ ಡಾಲರ್ ಪಾವತಿಸಲು ಗೂಗಲ್ ಒಪ್ಪಿಕೊಂಡಿತ್ತು. ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು ಅರಿಜೋನಾ ಮತ್ತು ವಾಷಿಂಗ್ಟನ್‌ನೊಂದಿಗೆ 124.9 ಮಿಲಿಯನ್ ಡಾಲರ್ ಸೆಟ್ಲ್‌ಮೆಂಟ್‌ಗೆ ಒಪ್ಪಿದೆ.
ಟೆಕ್ ದೈತ್ಯ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ರೂ ಪ್ಯಾಕೇಜ್ ಉದ್ಯೋಗ ಪಡೆದ ಭಾರತೀಯ!
ಶುಕ್ರವಾರ ಗೂಗಲ್‌ನ ವಕ್ತಾರರು ಈ ಬಗ್ಗೆ ಬರೆದುಕೊಂಡಿದ್ದು, ಕೆಲವು ವರ್ಷಗಳ ಹಿಂದೆ ನಾವು ಬದಲಾವಣೆ ಮಾಡಿರುವ ಹಳೆಯ ಉತ್ಪನ್ನ ನೀತಿಗಳಿಗೆ ಸಂಬಂಧಿಸಿದ ವಿಚಾರ ಇದಾಗಿದೆ ಎಂದಿದ್ದಾರೆ. ಇನ್ನು ಖಾಸಗಿ ದೂರುದಾರರ ಪರ ವಕೀಲರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 2023 ರ ಮೊದಲಾರ್ಧದಲ್ಲಿ ಗೂಗಲ್ ಜಾಹೀರಾತಿನಿಂದಲೇ 110.9 ಶತಕೋಟಿ ಡಾಲರ್ ಆದಾಯವನ್ನು ಗಳಿಸಿದೆ, ಅದರ ಒಟ್ಟು 137.7 ಶತಕೋಟಿ ಡಾಲರ್ ಆದಾಯದ 81% ರಷ್ಟಿದೆ.