ನಮೀಬಿಯಾದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಉದ್ಯಮಿಯೊಬ್ಬರು ಸಿಂಹದ ದಾಳಿಗೆ ಬಲಿಯಾಗಿದ್ದಾರೆ. ಐಷಾರಾಮಿ ಲಾಡ್ಜ್‌ವೊಂದರ ಶೌಚಾಲಯದಲ್ಲಿ ಕುಳಿತಿದ್ದ ವೇಳೆ ಈ ಘಟನೆ ನಡೆದಿದ್ದು, ದಾಳಿ ಮಾಡಿದ ಸಿಂಹವನ್ನು ನಂತರ ಕೊಲ್ಲಲಾಗಿದೆ.
ನಮೀಬಿಯಾ: ನಮೀಬಿಯಾಕ್ಕೆ ಪ್ರವಾಸ ಹೋಗಿದ್ದ ಉದ್ಯಮಿಯೊಬ್ಬನನ್ನು ಸಿಂಹವೊಂದು ದಾಳಿ ಮಾಡಿ ಕೊಂದು ಹಾಕಿದ್ದ ಘಟನೆ ನಡೆದಿದೆ. ಉದ್ಯಮಿ ತನ್ನ ಪತ್ನಿಯ ಜೊತೆ ನಮೀಬಿಯಾಕ್ಕೆ ಪ್ರವಾಸ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ನಮೀಬಿಯಾದ ಐಷಾರಾಮಿ ಲಾಡ್ಜ್‌ವೊಂದರ ಶೌಚಾಲಯದಲ್ಲಿ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ. ನಮೀಬಿಯಾದ ಪರಿಸರ ಸಚಿವಾಲಯ ವಕ್ತಾರರು ಈ ವಿಚಾರ ತಿಳಿಸಿದ್ದಾರೆ.
ನಮೀಬಿಯಾದ ವಾಯುವ್ಯದಲ್ಲಿರುವ ದೂರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬರ್ನ್ಡ್ ಕೆಬೆಲ್ ಎಂದು ಗುರುತಿಸಲಾಗಿದೆ. ನಮೀಬಿಯಾದ ಸೆಸ್‌ಫಾಂಟೈನ್ ಪ್ರದೇಶದ ಹೋನಿಬ್ ಸ್ಕೆಲಿಟನ್ ಕೋಸ್ಟ್ ಕ್ಯಾಂಪ್ ಬಳಿ ಬರ್ನ್ಡ್ ಕೆಬೆಲ್ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ರಜೆಯ ಮಜಾದಲ್ಲಿದ್ದಾಗ ಈ ಮಾರಕ ದಾಳಿ ನಡೆದಿದೆ.
ಸಿಬಿಎಸ್ ನ್ಯೂಸ್ ವರದಿ ಮಾಡಿದಂತೆ ಪರಿಸರ ಸಚಿವಾಲಯದ ವಕ್ತಾರ ನ್ಡೆಶಿಪಂಡಾ ಹಮುನ್ಯೆಲಾ ಅವರ ಪ್ರಕಾರ, ಕೆಬೆಲ್ ಶೌಚಾಲಯ ಬಳಸಲು ತಮ್ಮ ಡೇರೆಯಿಂದ ಹೊರಬಂದಾಗ ಸಿಂಹವು ಹೊಂಚು ಹಾಕಿ ದಾಳಿ ಮಾಡಿದೆ. ಕೆಬೆಲ್ ತಾವು ವಾಸವಿದ್ದ ಡೇರೆಯಿಂದ ಹೊರಬಂದ ಕ್ಷಣವೇ ಸಿಂಹ ಅವರ ಮೇಲೆ ಎರಗಿತು. ಇತರ ಶಿಬಿರಾರ್ಥಿಗಳು ಆ ಪ್ರಾಣಿಯನ್ನು ಓಡಿಸುವ ಹೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ನಮೀಬಿಯಾ ಪೊಲೀಸ್ ವಕ್ತಾರ ಎಲಿಫಾಸ್ ಕುವಿಂಗಾ ಮಾತನಾಡಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಕುರಿತು ಪೂರ್ಣ ವರದಿಯನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಪೂರ್ಣ ವರದಿಯನ್ನು ಸರಿಯಾದ ಸಮಯದಲ್ಲಿ ಸಲ್ಲಿಸಲಾಗುವುದು ಎಂದು ಕುವಿಂಗಾ ಹೇಳಿದ್ದಾರೆ. ದಾಳಿಗೆ ಕಾರಣವಾದ ಪ್ರಾಣಿಯು ಸಮುದಾಯ ಮತ್ತು ಪ್ರವಾಸಿಗರಿಗೆ ನಿರಂತರ ಬೆದರಿಕೆಯಾಗಿದೆ ಎಂದು ಅಧಿಕಾರಿಗಳು ನಿರ್ಧರಿಸಿದ ನಂತರ, ದಾಳಿಗೆ ಕಾರಣವಾದ ಪ್ರಾಣಿಯನ್ನು ಭಾನುವಾರ ಜೂನ್ 1ರಂದು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ.
ಸಿಂಹದ ದಾಳಿಯಿಂದ ಸಾವಿಗೀಡಾದ ಉದ್ಯಮಿ ಕೆಬೆಲ್ ಅವರು ದೇಶದ ಪ್ರಸಿದ್ಧ ವ್ಯಕ್ತಿಯಾಗಿದ್ದು, ಅವರು ಲೋಕೋಪಕಾರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ವರದಿಯಾಗಿದೆ. ಘಟನೆ ನಡೆದ ಪ್ರದೇಶವು ಮರುಭೂಮಿಗೆ ಹೊಂದಿಕೊಂಡ ಸಿಂಹಗಳಿಗೆ ಹೆಸರುವಾಸಿಯಾಗಿದ್ದು, ಇವು ಇಲ್ಲಿನ ಪರ್ವತ ಪ್ರದೇಶಗಳಲ್ಲಿ ಸಂಚರಿಸುತ್ತವೆ. 2023 ರ ಅಂಕಿಅಂಶಗಳ ಪ್ರಕಾರ, ಸುಮಾರು 60 ವಯಸ್ಕ ಸಿಂಹಗಳು ಮತ್ತು ಒಂದು ಡಜನ್‌ಗಿಂತಲೂ ಹೆಚ್ಚು ಮರಿಗಳು ಈ ಪ್ರದೇಶದಲ್ಲಿ ಕಂಡುಬಂದಿವೆ. ಆದಾಗ್ಯೂ, ಬರಗಾಲದಿಂದ ಬೇಟೆಯಲ್ಲಿ ಇಳಿಕೆ ಮತ್ತು ಮಾನವರೊಂದಿಗಿನ ಸಂಘರ್ಷದ ನಂತರ ಇತ್ತೀಚಿನ ತಿಂಗಳುಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗಿದೆ.
