ಬ್ರಿಟನ್ ಏಕತೆ, ಸ್ಥಿರತೆ ನನ್ನ ಆದ್ಯತೆ; ಸಂಕಷ್ಟ ಎದುರಿಸುತ್ತಿರುವ ದೇಶಕ್ಕೆ ಅಭಯ ನೀಡಿದ Rishi Sunak
ಬ್ರಿಟನ್ ಏಕತೆ, ಸ್ಥಿರತೆ ನನ್ನ ಆದ್ಯತೆ ಎಂದು ಸಂಕಷ್ಟ ಎದುರಿಸುತ್ತಿರುವ ದೇಶಕ್ಕೆ ನೂತನ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅಭಯ ನೀಡಿದ್ದಾರೆ. ಹಾಗೂ, ದೇಶಕ್ಕಾಗಿ ಹಗಲು-ರಾತ್ರಿ ಶ್ರಮಿಸಲು ನೂತನ ಪ್ರಧಾನಿ ಪಣ ತೊಟ್ಟಿದ್ದಾರೆ.
ಲಂಡನ್: ಬ್ರಿಟನ್‌ನ (Britain) ನೂತನ ಪ್ರಧಾನಿಯಾಗಿ (Prime Minister) ಆಯ್ಕೆಯಾಗಿರುವ ರಿಷಿ ಸುನಕ್ (Rishi Sunak) ಸೋಮವಾರ ದೇಶದ ಏಕತೆ ಹಾಗೂ ಸ್ಥಿರತೆ ಕಾಪಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಲಂಡನ್‌ನಲ್ಲಿ (London) ಸಂಸತ್ತಿನ ಸಮೀಪದಲ್ಲಿರುವ ಕನ್ಸರ್ವೇಟಿವ್ ಪಕ್ಷದ (Conservative Party) ಮುಖ್ಯ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ರಿಷಿ, ‘ದೇಶದ ಋಣವನ್ನು ತೀರಿಸಲು ನನಗೆ ಸಿಕ್ಕ ಈ ಅತಿದೊಡ್ಡ ಅವಕಾಶವನ್ನು ವಿನಮ್ರತೆ ಹಾಗೂ ಗೌರವದಿಂದ ಸ್ವೀಕರಿಸುತ್ತೇನೆ. ಬ್ರಿಟನ್ನಿನ ಜನರಿಗಾಗಿ ನಾನು ಹಗಲು-ರಾತ್ರಿ ಸಮಗ್ರತೆ ಹಾಗೂ ವಿನಮ್ರತೆಯಿಂದ ಸೇವೆ ಸಲ್ಲಿಸಲು ಪಣ ತೊಡುತ್ತೇನೆ’ ಎಂದು ಘೋಷಿಸಿದ್ದಾರೆ.
‘ಬ್ರಿಟನ್ ಒಂದು ಅತ್ಯುತ್ತಮ ದೇಶವಾಗಿದೆ. ಆದರೆ ನಾವು ಗಂಭೀರವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೀಗ ಸ್ಥಿರತೆ (Stability) ಹಾಗೂ ಏಕತೆಯ (Unity) ಅಗತ್ಯವಿದೆ. ಹೀಗಾಗಿ ಇದನ್ನೇ ನಾನು ನನ್ನ ಆದ್ಯತೆಯನ್ನಾಗಿಸಿ ಪಕ್ಷವನ್ನು ಹಾಗೂ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ. ದೇಶ ಎದುರಿಸುತ್ತಿದ್ದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಹಾಗೂ ನಮ್ಮ ಮುಂದಿನ ಪೀಳಿಗೆಯ ಸಮೃದ್ಧ ಭವಿಷ್ಯಕ್ಕಾಗಿ ಇದು ಅನಿವಾರ್ಯವಾಗಿದೆ’ ಎಂದಿದ್ದಾರೆ.
ಇದನ್ನು ಓದಿ: Rishi Sunak ಅವರದು ಹೂವಿನ ಹಾದಿಯಲ್ಲ: ಮುಂದಿವೆ ಬೆಟ್ಟದಷ್ಟು ಸವಾಲುಗಳು..!
ಮೋದಿ ಅಭಿನಂದನೆ
ರಿಷಿ ಸುನಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ಬ್ರಿಟನ್‌ನ ಪ್ರಧಾನಿಯಾಗಿರುವುರಿಂದ ನಾನು ನಿಮ್ಮೊಂದಿಗೆ ಸೇರಿ ಜಾಗತಿಕ ವಿಚಾರಗಳಲ್ಲಿ ಹಾಗೂ 2030ರ ಮಾರ್ಗಸೂಚಿಯ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ. ಬ್ರಿಟನ್‌ನಲ್ಲಿರುವ ಭಾರತೀಯರೊಂದಿಗಿನ ‘ಜೀವಂತ ಸೇತುವೆ’ಯಾಗಿರುವ ನಿಮಗೆ ದೀಪಾವಳಿಯ ವಿಶೇಷ ಶುಭಾಶಯಗಳು. ನಾವು ನಮ್ಮ ಐತಿಹಾಸಿಕ ಸಂಬಂಧಗಳನ್ನು ಆರ್ಥಿಕ ಪಾಲುದಾರಿಕೆಯಾಗಿ ಪರಿವರ್ತಿಸಿಕೊಳ್ಳೋಣ.
ನರೇಂದ್ರ ಮೋದಿ, ಪ್ರಧಾನಿ
ವಿಶ್ವಸುತ್ತಿ ಬ್ರಿಟನ್‌ನಲ್ಲಿ ನೆಲೆ ನಿಂತ ರಿಷಿ ಪೂರ್ವಜರು
ರಿಷಿ ಸುನಕ್ ಅವರ ಅಜ್ಜ ಅಜ್ಜಿ ಅವಿಭಜಿತ ಭಾರತದ, ಹಾಲಿ ಪಾಕಿಸ್ತಾನದಲ್ಲಿರುವ ಗುಜ್ರನ್‌ವಾಲಾ ಮೂಲದವರು. ಈ ಕುಟುಂಬ ಮೊದಲು ಆಫ್ರಿಕಾಕ್ಕೆ ವಲಸೆ ಹೋಯಿತು. ಅಲ್ಲಿಂದ 1960ರಲ್ಲಿ ಬ್ರಿಟನ್‌ಗೆ ವಲಸೆ ಬಂದಿತ್ತು.
ಇದನ್ನೂ ಓದಿ: ಬೆಂಗ್ಳೂರಿಗೆ ಬಂದಾಗ ವಿದ್ಯಾರ್ಥಿ ಭವನದ ದೋಸೆ ಸವಿದಿದ್ದ ರಿಷಿ ಸುನಕ್..!
ರಿಷಿಯವರ ತಂದೆ ಯಶ್‌ವೀರ್ ಸುನಕ್ ಅವರು ಕೀನ್ಯಾದಲ್ಲಿ ಹುಟ್ಟಿಬೆಳೆದಿದ್ದರು. ಅದೇ ರಿಷಿಯವರ ತಾಯಿ ಟ್ಯಾಂಗಾನಿಕಾದಲ್ಲಿ ಹುಟ್ಟಿದರು. ಇದು ಈಗ ತಾಂಜಾನಿಯಾದ ಭಾಗವಾಗಿದೆ. ಸುನಾಕ್ ಅವರ ತಂದೆ ರಾಷ್ಟ್ರೀಯ ಆರೋಗ್ಯ ಸೇವೆ (National Health Service) (ಎನ್‌ಎಚ್‌ಎಸ್) (NHS) ನಲ್ಲಿ ವೈದ್ಯರಾಗಿದ್ದರು ಹಾಗೂ ತಾಯಿ ಚಿಕ್ಕ ಔಷಧಾಲಯ ನಡೆಸುತ್ತಿದ್ದರು. ಸುನಕ್ ಅವರ ಪೂರ್ವಜರು ಈಗಿನ ಪಾಕಿಸ್ತಾನದವರಾಗಿದ್ದರೂ ಅವರನ್ನು ಭಾರತೀಯರು ಹಾಗೂ ಹಿಂದು ಎಂದು ಪರಿಗಣಿಸಲಾಗುತ್ತದೆ.
ರಿಷಿ ಸುನಾಕ್ ಮೇ.12, 1980ರಲ್ಲಿ ಬ್ರಿಟನ್‌ನಲ್ಲಿ ಸೌಥಾಂಪ್ಟನ್‌ನಲ್ಲಿ ಜನಿಸಿದರು. ರಿಷಿ ಕುಟುಂಬದಲ್ಲಿ ಹಿರಿಯ ಮಗನಾಗಿದ್ದು, ಇವರಿಗೆ 3 ಸಹೋದರಿಯರಿದ್ದಾರೆ.
ಇದನ್ನೂ ಓದಿ: UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್..!
ಆರಂಭದಿಂದಲೂ ಬುದ್ಧಿವಂತ ವಿದ್ಯಾರ್ಥಿ, ಎಂಬಿಎ ಪದವೀಧರ
ಆರಂಭದಿಂದಲೂ ರಿಷಿ ಉತ್ತಮ ವಿದ್ಯಾರ್ಥಿಯಾಗಿದ್ದು, ಬ್ರಿಟನ್‌ನ ವಿಂಚೆಸ್ಟರ್ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ (Oxford University) ಅರ್ಥಶಾಸ್ತ್ರ ಹಾಗೂ ತತ್ವಶಾಸ್ತ್ರದ ಅಧ್ಯಯನ ಮಾಡಿದ್ದರು. ಇದರ ಜೊತೆಗೆ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ (Stanford University) ಎಂಬಿಎ ಕೂಡಾ ಮುಗಿಸಿದರು, ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಕಲಿಯುತ್ತಿರುವಾಗಲೇ ಅವರು ಇಸ್ಫೋಸಿಸ್ ಸಹ ಸಂಸ್ಥಾಪಕ ಬೆಂಗಳೂರಿನ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾರನ್ನು ಭೇಟಿಯಾದರು. 2009ರಲ್ಲಿ ರಿಷಿ ಅಕ್ಷತಾ ಅವರನ್ನು ವಿವಾಹವಾದರು. ದಂಪತಿಗೆ ಕೃಷ್ಣಾ ಹಾಗೂ ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ.