*  ಬ್ರಿಟನ್‌ನಲ್ಲಿ ಕೋವಿಡ್‌ ಸೋಂಕಿತರು  ಸ್ವಯಂ ಐಸೋಲೇಷನ್‌ ಆಗಬೇಕಿಲ್ಲ!* ಕೋವಿಡ್‌ ಜೊತೆಗೆ ಬದುಕು ಸಾಗಿಸಲು ಸರ್ಕಾರ ಅನುಮತಿ* ದೇಶಾದ್ಯಂತ ಕೋವಿಡ್‌ ಪರೀಕ್ಷೆಯೂ ರದ್ದಾಗುವ ಸಾಧ್ಯತೆ

ಲಂಡನ್‌ (ಫೆ. 21) ಕೋವಿಡ್‌ (Coronavirus) ಪರೀಕ್ಷೆಯಿಂದ ಯಾವುದೇ ಲಾಭವಿಲ್ಲ ಎಂದು ಇತ್ತೀಚೆಗೆ ಸ್ವೀಡನ್‌ ಸರ್ಕಾರ ಕೋವಿಡ್‌ ಪರೀಕ್ಷೆ ರದ್ದುಪಡಿಸಿದ್ದರೆ, ಇದೀಗ ಕೋವಿಡ್‌ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯವಲ್ಲ ಎಂಬ ನಿಯಮ ಜಾರಿಗೆ ಬ್ರಿಟನ್‌ (England) ಸರ್ಕಾರ ಮುಂದಾಗಿದೆ. ಜೊತೆಗೆ ಕೋವಿಡ್‌ ಪರೀಕ್ಷೆಯನ್ನೂ ಕೈಬಿಡುವ ಸುಳಿವು ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ‘ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಎಲ್ಲಾ ಶಾಸನಾತ್ಮಕ ನಿರ್ಬಂಧ ತೆರವುಗೊಳಿಸುವ ನಿರ್ಧಾರವು, ಜನರಿಗೆ ತಮ್ಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದೆಯೇ ಕೋವಿಡ್‌ ನಿಯಂತ್ರಣಕ್ಕೆ ಅನುವು ಮಾಡಿಕೊಡಲಿದೆ’ ಎಂದು ಹೇಳಿದ್ದಾರೆ.

ಈ ಕುರಿತು ಬ್ರಿಟನ್‌ ಸರ್ಕಾರ ಸೋಮವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ ಎನ್ನಲಾಗಿದೆ. ಹೊಸ ನಿಯಮಗಳ ಅನ್ವಯ, ಯಾವುದೇ ಕೋವಿಡ್‌ ಸೋಂಕಿತ ವ್ಯಕ್ತಿ ಸ್ವಯಂ ಐಸೋಲೇಷನ್‌ಗೆ ಒಳಾಗಾಗದೇ ಇರುವುದು ಕಾನೂನು ಪ್ರಕಾರ ಅಪರಾಧವಾಗದು. ಅವರು ಬಯಸಿದಲ್ಲಿ ಮಾತ್ರವೇ ಐಸೋಲೇಷನ್‌ಗೆ ಒಳಗಾಗಬಹುದು. ಕೋವಿಡ್‌ ನಿರ್ಬಂಧಗಳ ಪಾಲನೆ ಕಾನೂನು ಬದ್ಧವಾಗಿರದೆ, ಕೇವಲ ಸಲಹಾ ರೂಪದಲ್ಲಿ ಮುಂದುವರೆಯಲಿದೆ. ಜೊತೆಗೆ ಕೋವಿಡ್‌ ಪರೀಕ್ಷೆಯನ್ನೂ ಸರ್ಕಾರ ಕೈಬಿಡುವ ಸಾಧ್ಯತೆ ಇದೆ.

Covid Crisis: ರಾಜ್ಯದಲ್ಲಿ 1333 ಪ್ರಕರಣ, 46 ದಿನಗಳಲ್ಲೇ ಅತೀ ಕನಿಷ್ಠ ಕೇಸ್‌..!

ಆದರೆ ಬ್ರಿಟನ್‌ ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಹಲವು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇಂಥ ನಿರ್ಧಾರವು ಮತ್ತೆ ಪ್ರಕರಣಗಳ ಏರಿಕೆಗೆ ಕಾರಣವಾಗುವುದರ ಜೊತೆಗೆ, ಭವಿಷ್ಯದಲ್ಲಿ ಉದ್ಭವಿಸುವ ಹೊಸ ರೂಪಾಂತರಿಗಳನ್ನು ಎದುರಿಸುವಲ್ಲಿ ದೇಶದ ಸಾಮರ್ಥ್ಯವನ್ನು ಕುಗ್ಗಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನು ಪ್ರಮುಖ ವಿಪಕ್ಷ ಲೇಬರ್‌ ಪಕ್ಷದ ಆರೋಗ್ಯ ವಕ್ತಾರ ವೆಸ್‌ ಸ್ಟ್ರೀಟಿಂಗ್‌ ಕೂಡಾ ಸರ್ಕಾರದ ಪ್ರಸ್ತಾಪವನ್ನು ಟೀಕಿಸಿದ್ದು, ಇದು ಯುದ್ಧ ಮುಗಿಯುವೇ ಮುನ್ನವೇ ಪ್ರಧಾನಿ ಜಾನ್ಸನ್‌ ಜಯವನ್ನು ಘೋಷಿಸಿದಂತಿದೆ ಎಂದು ಕಿಡಿಕಾರಿದ್ದಾರೆ.

ಬ್ರಿಟನ್‌ನಲ್ಲಿ ಈಗಾಗಲೇ 12 ಮತ್ತು ಅದಕ್ಕೆ ಮೇಲ್ಪಟ್ಟವಯಸ್ಸಿನ ಶೇ.85ರಷ್ಟುಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ.70ರಷ್ಟುಜನರು ಮೂರನೇ ಡೋಸ್‌ ಕೂಡಾ ಪಡೆದುಕೊಂಡಿದ್ದಾರೆ.

ದೇಶದಲ್ಲಿ ಇದುವರೆಗೆ 1.8 ಕೋಟಿ ಜನರಿಗೆ ಸೋಂಕು ಬಂದಿದ್ದು, 34000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿತ್ಯ ಸರಾಸರಿ 35000ದ ಆಸುಪಾಸು ಕೇಸು ದಾಖಲಾಗುತ್ತಿದ್ದು, 100-150 ಜನರು ಸಾವನ್ನಪ್ಪುತ್ತಿದ್ದಾರೆ.

ಬ್ರಿಟನ್‌ ರಾಣಿ ಎಲಿಜಬೆತ್‌ಗೆ ಕೊರೋನಾ ಸೋಂಕು ದೃಢ: ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಶೀತದಂಥ ಕೆಲ ಸೌಮ್ಯ ಲಕ್ಷಣಗಳು ಮಾತ್ರ ಇವೆ ಎಂದು ರಾಣಿಯ ಅಧಿಕೃತ ನಿವಾಸ ಬಕ್ಕಿಂಗ್‌ಹ್ಯಾಮ್‌ ಅರಮನೆ ಭಾನುವಾರ ತಿಳಿಸಿದೆ. ‘95 ವರ್ಷದ ರಾಣಿ ಎಲಿಜಬೆತ್‌ ಸದ್ಯ ತಮ್ಮ ವಿಂಡ್ಸರ್‌ ಕ್ಯಾಸ್ಟಲ್‌ ನಿವಾಸದಲ್ಲಿ ನೆಲೆಸಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನೂ ಪಾಲನೆ ಮಾಡುತ್ತಿದ್ದಾರೆ’ ಎಂದು ತಿಳಿಸಿದೆ. ಇದೇ ತಿಂಗಳ ಆರಂಭದಲ್ಲಿ ರಾಣಿಯ ಪುತ್ರ, ಉತ್ತರಾಧಿಕಾರಿ ಪ್ರಿನ್ಸ್‌ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲಾ ಅವರಿಗೂ ಸೋಂಕು ದೃಢಪಟ್ಟಿತ್ತು.

19968 ಕೇಸು, 673 ಸಾವು: ಹೊಸ ಸೋಂಕಿನ ಪ್ರಮಾಣ 51 ದಿನದ ಕನಿಷ್ಠ: ನವದೆಹಲಿ: ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಭಾನುವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಕೇವಲ 19968 ಕೇಸು ದಾಖಲಾಗಿದೆ. ಈ ಪ್ರಮಾಣ ಕಳೆದ 51 ದಿನಗಳಲ್ಲೇ ಅತಿ ಕನಿಷ್ಠವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.28 ಕೋಟಿಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ 673 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5.11 ಲಕ್ಷ ಮುಟ್ಟಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2.24 ಲಕ್ಷಕ್ಕೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.1.68ರಷ್ಟಿದೆ.