Covid lockdown ಮತ್ತೆ ಕೊರೋನಾ ಸ್ಫೋಟ, ಚೀನಾದಲ್ಲಿ ಕಠಿಣ ಲಾಕ್‌ಡೌನ್ ಜಾರಿ, ಭಾರತಕ್ಕೂ ಆತಂಕ!
- ತಣ್ಣಗಾಗಿದ್ದ ಕೊರೋನಾವೈರಸ್ ಮತ್ತೆ ಅಬ್ಬರ
- ಹಿಂದೆಂದಿಗಿಂತಲೂ ಅತೀ ವೇಗದಲ್ಲಿ ಹರಡುತ್ತಿದೆ ವೈರಸ್
- ಮನೆಯಿಂದ ಯಾರೂ ಹೊರಬರುವಂತಿಲ್ಲ, ಚೀನಾದಲ್ಲಿ ಲಾಕ್‌ಡೌನ್
ಬೀಜಿಂಗ್(ಮಾ.11): ಕೊರೋನಾ ಆರ್ಭಟ ಕಡಿಮೆಯಾಗುತ್ತಿದ್ದಂತೆ ಭಾರತ ಸೇರಿದಂತೆ ವಿಶ್ವದೆಲ್ಲಡೆ ಎಲ್ಲಾ ಚಟುವಟಿಕೆಗಳು ಚುರುಕುಗೊಂಡಿದೆ. ಭಾರತ 2 ವರ್ಷ ನಿರ್ಬಂಧ ಹೇರಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಕೂಡ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಮತ್ತೆ ಚೀನಾದಿಂದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಚೀನಾದ ಚಾಂಗ್‌ಚನ್ ಪ್ರಾಂತ್ಯದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಅತೀ ವೇಗದಲ್ಲಿ ಕೊರೋನಾ ಹರಡುತ್ತಿದೆ. ಹೀಗಾಗಿ ಚೀನಾ ಸರ್ಕಾರ ಕಠಿಣ ಲಾಕ್‌ಡೌನ್ ಜಾರಿ ಮಾಡಿದೆ.
ಚಾಂಗ್‌ಚನ್ ಪ್ರಾಂತ್ಯದ ಹಲವು ನಗರಗಳಲ್ಲಿ ಕೊರೋನಾ ಸ್ಫೋಟಗೊಂಡಿದೆ. ದಿಢೀರ್ ಪ್ರಮುಖ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿದೆ. ಇದು ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಚೀನಾದಲ್ಲಿ ಕ್ಷಿಪ್ರಗತಿಯಲ್ಲಿ ಅತೀ ದೊಡ್ಡ ಕೊರೋನಾ ಸ್ಫೋಟ ಎಂದು ಹೇಳಲಾಗುತ್ತಿದೆ.
Covid Fourth Wave: ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್ ಅಲೆ: ಮತ್ತೆ ಆತಂಕ
ಅತೀ ವೇಗವಾಗಿ ಹರಡುತ್ತಿರುವ ಕಾರಣ ಚೀನಾ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಚಾಂಗ್‌ಚನ್ ಪ್ರಾಂತ್ಯ, ಜಿಲಿನ್ ಪ್ರಾಂತ್ಯದಲ್ಲಿ ಲಾಕ್‌ಡೌನ್ ಹೇರಲಾಗಿದೆ. ವೇಗವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಿಸಲು ಎಲ್ಲಾ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಾರು ಕೂಡ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಅಗತ್ಯವಸ್ತುಗಳನ್ನು ಹೊರತುಪಡಿಸಿ ಇನ್ನಲ್ಲೇ ಸೇವೆಗಳನ್ನು ನಿರ್ಬಂಧಿಸಲಾಗಿದೆ.
ಹೊರಗೆ ಬರುವ ವ್ಯಕ್ತಿಗಳು ಮೂರು ಸುತ್ತಿನ ಕೊರೋನಾ ತಪಾಸಣೆ ಹಾಗೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲಿನ್ ಹಾಗೂ ಚಾಂಗ್‌ಚನ್ ಪ್ರಾಂತ್ಯದಲ್ಲಿ ಕೊರೋನಾ ಸ್ಫೋಟಗೊಂಡಿದ್ದರೆ, ವಾಣಿಜ್ಯ ನಗರ ಎಂದೇ ಗುರುತಿಸಿಕೊಂಡಿರುವ ಶಾಂಘೈನಲ್ಲಿ ಓಮಿಕ್ರಾನ್ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
Covid Crisis: ಕೊರೋನಾ ದಿಢೀರ್ ಹೆಚ್ಚಳ..!
ಚಾಂಗ್‌ಚನ್ ಪ್ರಾಂತ್ಯದಲ್ಲಿ 3 ವಾರಗಳ ಹಿಂದೆ 100 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಇದೀಗ 1,000 ಗಡಿ ತಲುಪಿದೆ. ಇಂದು(ಮಾ.11) 1,369 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಇನ್ನು ಚೀನಾ ರಾಜಧಾನಿ ಬೀಜಿಂಗ್‌ನ ಕೆಲ ಪ್ರದೇಶಗಳಲ್ಲಿ ಭಾಗಶಃ ಲಾಕ್‌ಡೌನ್ ಘೋಷಿಸಲಾಗಿದೆ.
ಚೀನಾದಲ್ಲಿ ಕಾಣಿಸಿಕೊಂಡ ಹೊಸ ಕೊರೋನಾ ಅಲೆಯಿಂದ ಇದೀಗ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಆತಂಕ ಹೆಚ್ಚಾಗಿದೆ. ಭಾರತ ಈಗಷ್ಟೇ ಮೂರನೇ ಅಲೆಯಿಂದ ಚೇತರಿಸಿಕೊಂಡು ಸಹಜಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಮತ್ತೊಂದು ಅಲೆ ಮಾತುಗಳು ಕೇಳಿಬರುತ್ತಿರುವುದು ಆತಂಕ ಹೆಚ್ಚಿಸಿದೆ.
2019ರಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. 2021ರ ಆರಂಭದಲ್ಲೇ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೆ ಕೊರೋನಾ ಹಬ್ಬಿತ್ತು. ಬಳಿಕ ವಿಶ್ವಕ್ಕೆ ಲಾಕ್‌ಡೌನ್ ಆಗಿತ್ತು. 2020 ಜನವರಿ 27ರಂದು ದೇಶದಲ್ಲಿ (ಕೇರಳ) ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ಆದರೆ, ಸೋಂಕಿತರ ಸಾವಾಗಿರಲಿಲ್ಲ. ಸೌದಿ ಅರೇಬಿಯಾ ಪ್ರಯಾಣ ಹಿನ್ನೆಲೆ ಹೊಂದಿದ್ದ ಕಲಬುರಗಿಯ 76 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮಾಚ್‌ರ್ 10ರಂದು ಕಲಬುರಗಿಯಲ್ಲಿ ಮೃತಪಟ್ಟಿದ್ದು, ಮಾಚ್‌ರ್ 12ರಂದು ಆತನಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಇದೇ ದೇಶದ ಮೊದಲ ಕೊರೊನಾ ಸಾವಾಗಿದ್ದ ಕಾರಣ ರಾಜ್ಯದಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ ಎರಡನೇ ದಿನಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿತ್ತು.
ಮೊದಲ ವರ್ಷ 12,373 ಮಂದಿ, ಎರಡನೇ ವರ್ಷ 27,633 ಸೇರಿ ಈವರೆಗೂ 40,006 ಸಾವು ದಾಖಲಾಗಿವೆ. ಡೆಲ್ಟಾರೂಪಾಂತರಿಯಿಂದ ಉಂಟಾದ ಎರಡನೇ ಅಲೆಯಲ್ಲಿ ಸಾವು ಸಾಕಷ್ಟುಏರಿಕೆಯಾಗಿದ್ದು, ಈ ಅಲೆಯಲ್ಲಿ 26 ಸಾವಿರ ಮಂದಿ ಮೃತಪಟ್ಟರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿತ್ಯ ಸರಾಸರಿ 300ಕ್ಕೂ ಹೆಚ್ಚು ಮಂದಿ, ಒಂದೇ ದಿನ ಬರೋಬ್ಬರಿ 626 ಸಾವು ದಾಖಲಾಗಿತ್ತು. ಸದ್ಯ ಒಮಿಕ್ರೋನ್ ರೂಪಾಂತರಿಯ ಮೂರನೇ ಅಲೆಯಿಂದ ಸಾಕಷ್ಟುಸಾವು ತಗ್ಗಿದ್ದು, ಮೂರೂವರೆ ತಿಂಗಳಲ್ಲಿ 1,700 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸಾವು ಬೆರಳೆಣಿಕೆಗೆ ಇಳಿಕೆಯಾಗಿದೆ. ದೇಶದಲ್ಲಿ ಮಹಾರಾಷ್ಟ್ರ, ಕೇರಳ ಬಿಟ್ಟರೆ ಮೂರನೇ ಅತಿ ಹೆಚ್ಚು ಸಾವು ಕರ್ನಾಟಕದಲ್ಲಾಗಿದೆ.