ನವದೆಹಲಿ (ನ.06): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬುಧವಾರ ಆರಂಭವಾಗಿ ಗುರುವಾರ ಮಧ್ಯಾಹ್ನ (ಭಾರತೀಯ ಕಾಲಮಾನ) ತಲುಪಿದರೂ, ಅಭ್ಯರ್ಥಿಗಳಾದ ಟ್ರಂಪ್‌ ಮತ್ತು ಬೈಡೆನ್‌ ಪೈಕಿ ಗೆಲುವು ಯಾರದ್ದು ಎನ್ನುವ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಇಬ್ಬರೂ ಸಮಬಲದಲ್ಲೇ ಮುಂದುವರೆದಿದ್ದರು. ಆದರೂ ಇನ್ನೂ ಮತ ಎಣಿಕೆ ನಡೆಯುತ್ತಿದ್ದ 7 ರಾಜ್ಯಗಳ ಪೈಕಿ 6 ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ ಸಾಧಿಸಿಕೊಂಡೇ ಬಂದಿದ್ದರು. ಇವೆಲ್ಲವೂ ಸಾಂಪ್ರದಾಯಿಕವಾಗಿ ಡೆಮಾಕ್ರೆಟಿಕ್‌ ಪಕ್ಷದ ಶಕ್ತಿಕೇಂದ್ರಗಳಾಗಿದ್ದರೂ, ಕಳೆದ ವರ್ಷ ಅದನ್ನು ಭೇದಿಸುವುದಲ್ಲಿ ಟ್ರಂಪ್‌ ಯಶಸ್ವಿಯಾಗಿದ್ದರು. ಹೀಗಾಗಿ ಜಯದ ಸಾಧ್ಯತೆ ಟ್ರಂಪ್‌ಗೇ ಹೆಚ್ಚು ಎನ್ನುವ ವಾದಗಳು ಕೇಳಿಬಂದಿದ್ದವು.

ಆದರೆ ಗುರುವಾರ ಏಕಾಏಕಿ ಇಡೀ ಚಿತ್ರಣ ಬದಲಿಸಿದ್ದು ವಿಸ್ಕಾನ್ಸಿನ್‌ ಎಂಬ 10 ಪ್ರತಿನಿಧಿಗಳನ್ನು ಒಳಗೊಂಡ ರಾಜ್ಯ. ಕಳೆದ ಬಾರಿ ಇಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಗೆದ್ದಿದ್ದ ಕಾರಣ ಈ ಬಾರಿಯೂ ಅವರ ಹವಾ ಮುಂದುವರೆಯುವ ನಿರೀಕ್ಷೆಗಳು ಇದ್ದವು. ಆದರೆ ಈ ನಿರೀಕ್ಷೆ ಹುಸಿ ಮಾಡಿ ಇಲ್ಲಿಯ 10 ಪ್ರತಿನಿಧಿಗಳ ಮತ ಗೆಲ್ಲುವ ಮೂಲಕ ಬೈಡೆನ್‌ ಮೊದಲ ಬಾರಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು. ಅದರ ಬೆನ್ನಲ್ಲೇ 16 ಸದಸ್ಯರನ್ನು ಒಳಗೊಂಡ ಮಿಚಿಗನ್‌ ಕೂಡಾ ಬೈಡೆನ್‌ಗೆ ಒಲಿಯುವ ಮೂಲಕ ಏಕಾಏಕಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ 26 ಮತಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಬೈಡೆನ್‌ ಅವರ ಮತಗಳ ಸಂಖ್ಯೆ 264ಕ್ಕೆ ಬಂದು ಕುಳಿತಿತ್ತು. ಮತ್ತೊಂದೆಡೆ ಟ್ರಂಪ್‌ 214ಕ್ಕೇ ಸೀಮಿತಗೊಂಡಿದ್ದರು.

ಅಮೆರಿಕ ಅಧ್ಯಕ್ಷ ಚುನಾವಣೆ: ಬೈಡೆನ್‌ ಗೆಲುವಿಗೆ ಆರೇ ಹೆಜ್ಜೆ

ಹೀಗಾಗಿ ಅಧ್ಯಕ್ಷ ಪದವಿಗೆ ಏರಲು ಬೇಕಾಗಿದ್ದ 270 ಮತಗಳನ್ನು ಪಡೆಯಲು ಬೈಡೆನ್‌ಗೆ ಬೇಕಾಗಿದ್ದು ಕೇವಲ 6 ಮತಗಳು. ಈ ಪೈಕಿ ತಮ್ಮದೇ ಪಕ್ಷದ ಪ್ರಾಬಲ್ಯ ಹೊಂದಿರುವ 6 ಸದಸ್ಯರ ಬಲದ ನೆವಾಡಾ ಗೆದ್ದುಕೊಂಡರೆ ಅಧ್ಯಕ್ಷ ಪದವಿ ಖಚಿತ.

ಅದೇ ಟ್ರಂಪ್‌ ಅಧ್ಯಕ್ಷ ಗಾದಿಗೆ ಮರಳಬೇಕಾದರೆ, 20 ಸದಸ್ಯಬಲದ ಪೆನ್ಸಿಲ್ವೇನಿಯಾ, 16 ಸದಸ್ಯಬಲದ ನಾತ್‌ರ್‍ ಕ್ಯಾರೋಲಿನಾ, 15 ಸದಸ್ಯಬಲದ ಜಾರ್ಜಿಯಾ ಮತ್ತು 3 ಸದಸ್ಯ ಬಲದ ಅಲಾಸ್ಕಾ ಗೆಲ್ಲುವುದು ಅನಿವಾರ್ಯ.

ಅಂದರೆ ಟ್ರಂಪ್‌ರಿಂದ ವಿಸ್ಕಾನ್ಸಿನ್‌ ಮತ್ತು ಮಿಚಿಗನ್‌ ರಾಜ್ಯಗಳನ್ನು ಕಿತ್ತುಕೊಳ್ಳುವುದು ಯಶಸ್ವಿಯಾಗಿದ್ದೇ ಈ ಬಾರಿ ಬೈಡೆನ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ಎಂದು ಹೇಳಬಹುದು.