ವಾಷಿಂಗ್ಟನ್(ಫೆ.18):  ತನ್ನ ದೇಶದ ಪ್ರಜೆಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಚೀನಾ ಅದಕ್ಕೆ ತಕ್ಕುದಾದ ಬೆಲೆ ತೆರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಇದೇ ಮೊದಲ ಬಾರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿವಾಹಿನಿ ‘ಸಿಎನ್‌ಎನ್‌’, ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜೋ ಬೈಡೆನ್‌ ಅವರು ಭಾಗವಹಿಸಿದ್ದು, ಈ ವೇಳೆ ಚೀನಾದ ಕ್ಸಿಂಜಿಯಾಂಗ್‌ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಉಯ್ಘಾರ್‌ ಸಮುದಾಯವನ್ನು ಕ್ಯಾಂಪ್‌ಗಳಲ್ಲಿ ಕೂಡಿಹಾಕಿರುವ ಮತ್ತು ಅವರಿಗೆ ಮಾನವ ಹಕ್ಕುಗಳನ್ನು ನಿರಾಕರಿಸುತ್ತಿರುವ ಬಗ್ಗೆ ಪ್ರಶ್ನಿಸಲಾಯಿತು. ಈ ಬಗ್ಗೆ ಉತ್ತರಿಸಿದ ಬೈಡೆನ್‌ ಅವರು, ಮಾನವ ಹಕ್ಕುಗಳ ಉಲ್ಲಂಘನೆ ಎಸಗುವ ರಾಷ್ಟ್ರಗಳ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಚಾರಕ್ಕಾಗಿ ಕಮಲಾ ಹ್ಯಾರಿಸ್ ಹೆಸರು ಬಳಸಬೇಡಿ; ಮೀನಾ ಹ್ಯಾರಿಸ್‌ಗೆ ಖಡಕ್ ಸೂಚನೆ!

ವಿಶ್ವ ನಾಯಕನಾಗಲು ಹಾತೊರೆಯುತ್ತಿರುವ ಚೀನಾವು ಎಲ್ಲಾ ರಾಷ್ಟ್ರಗಳ ಬೆಂಬಲವನ್ನು ಪಡೆಯಲೇಬೇಕು. ಜೊತೆಗೆ ಚೀನಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿ ಕಿರುಕುಳಕ್ಕೆ ಸಿಲುಕಿರುವ ಸಮುದಾಯಗಳ ರಕ್ಷಣೆಗಾಗಿ ಚೀನಾದ ಮೇಲೆ ಒತ್ತಡ ತರಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.