ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ
- ಮತ್ತೆ ಪೋಷಕರ ಮಡಿಲು ಸೇರಿದ ಮಗು
- ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್ ವೇಳೆ ಪೋಷಕರಿಂದ ಬೇರ್ಪಟ್ಟ ಕಂದ
- ಟಾಕ್ಸಿ ಡ್ರೈವರ್ ಕೈಗೆ ಸಿಕ್ಕಿದ್ದ 2 ತಿಂಗಳ ಮಗು
ಕಾಬೂಲ್(ಜ.11) ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಅಪ್ಘಾನಿಸ್ತಾನದಾದ್ಯಂತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕಾದ ಯುದ್ಧ ವಿಮಾನವೊಂದು ಅಲ್ಲಿನ ಪ್ರಜೆಗಳನ್ನು ಏರ್‌ಲಿಫ್ಟ್ ಮಾಡಿತ್ತು. ಈ ವೇಳೆ ವಿಮಾನ ಹತ್ತಲಾಗದ ವ್ಯಕ್ತಿಯೊಬ್ಬರು ಹಾಲುಗಲ್ಲದ ಮಗುವನ್ನು ಅಮೆರಿಕಾ ಸೈನಿಕನ ಕೈಗಿತ್ತಿದ್ದರು. ಈ ದೃಶ್ಯ ಹಾಗೂ ಫೋಟೋಗಳು ಜಾಗತಿಕ ಮಟ್ಟದಲ್ಲಿ ಅಫ್ಘಾನಿಸ್ತಾನದ ದುಸ್ಥಿತಿಯನ್ನು ಎತ್ತಿ ಹಿಡಿದಿತ್ತಲ್ಲದೇ ಮಗು ಹಾಗೂ ತಾಯಿಯ ಬೇರ್ಪಡುವಿಕೆಗೆ ಅನೇಕರು ಮರುಗಿದ್ದರು. ಆದರೆ ಈಗ ಖುಷಿಯ ವಿಚಾರ ಎಂದರೆ ಆ ಮಗು ಮತ್ತೆ ತನ್ನ ಪೋಷಕರ ಮಡಿಲು ಸೇರಿದೆ.
ಸೊಹೈಲ್ ಅಹ್ಮದ್ (Sohail Ahmadi) ಹೆಸರಿನ ಈ ಮಗು ಅಮೆರಿಕಾ ಸೈನಿಕರ ಪಾಲಾಗುವ ವೇಳೆ ಅದಕ್ಕೆ ಕೇವಲ 2 ತಿಂಗಳಾಗಿತ್ತಷ್ಟೇ 2021ರ ಆಗಸ್ಟ್ 19 ರಂದು ಈ ಘಟನೆ ನಡೆದಿತ್ತು. ತಾಲಿಬಾನ್ ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸಾವಿರಕ್ಕೂ ಹೆಚ್ಚು ಅಫ್ಘಾನಿಸ್ತಾನ ಜನ ದೇಶ ತೊರೆಯಲು ಸಿದ್ಧರಾಗಿ ಅಮೆರಿಕಾ ವಿಮಾನದೆಡೆಗೆ ಧಾವಿಸಿ ಬಂದಿದ್ದರು. ಬಳಿಕ ವಿಮಾನ ಹತ್ತುವ ವೇಳೆ ಮಗು ಎಲ್ಲಿದೆ ಎನ್ನುವುದು ಪೋಷಕರಿಗೂ ತಿಳಿದಿರಲಿಲ್ಲ. ಮಗು ಸಿಗದ ಕಾರಣ ಕುಟುಂಬ ಉಳಿದ ನಾಲ್ಕು ಮಕ್ಕಳೊಂದಿಗೆ ಯುಎಸ್ಗೆ ಸ್ಥಳಾಂತರಗೊಂಡಿದ್ದರು. ನಂತರ ವಿಮಾನ ನಿಲ್ದಾಣದಲ್ಲಿದ್ದ ಮಗುವನ್ನು ಕಾಬೂಲ್ ಟ್ಯಾಕ್ಸಿ ಡ್ರೈವರ್ ಹಮೀದ್ ಸಫಿ ಎನ್ನುವವರು ಕರೆದೊಯ್ದು ರಕ್ಷಣೆ ಮಾಡಿದ್ದರು.
ಕಳೆದ ನವೆಂಬರ್ನಲ್ಲಿ ಮಗುವಿನ ಬಗ್ಗೆ ತಂದೆ ತಾಯಿಗಳು ಮಾಹಿತಿ ಪಡೆದಿದ್ದರು. ಇದೀಗ 4 ತಿಂಗಳ ಬಳಿಕ ತಂದೆ ತಾಯಿಗಳಿಂದ ಬೇರ್ಪಟ್ಟ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ. ಏಳು ವಾರಗಳಿಗೂ ಹೆಚ್ಚು ಕಾಲ ಮಾತುಕತೆಗಳು ಮತ್ತು ಮನವಿಗಳ ನಂತರ ಮತ್ತು ಟಾಕ್ಸಿ ಚಾಲಕ ಸಫಿ ಅಂತಿಮವಾಗಿ ಮಗುವನ್ನು ಅದರ ಅಜ್ಜ ಮತ್ತು ಕಾಬೂಲ್‌ನಲ್ಲಿರುವ ಇತರ ಸಂಬಂಧಿಕರಿಗೆ ಹಿಂತಿರುಗಿಸಿದ್ದಾನೆ. ತಿಂಗಳುಗಳ ಹಿಂದೆ ಅಮೆರಿಕಾಗೆ ಸ್ಥಳಾಂತರಿಸಲ್ಪಟ್ಟ ಅವನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಮಗುವನ್ನು ಮತ್ತೆ ಸೇರಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಮಗುವಿನ ಸಂಬಂಧಿಗಳು ಹೇಳಿದ್ದಾರೆ.
ಇಡೀ ವಿಶ್ವವನ್ನು ಕಾಡಿತ್ತು ಆ ದೃಶ್ಯ, ಅಮೆರಿಕ ಸೈನಿಕರಿಗೆ ಹಸ್ತಾಂತರಿಸಿದ್ದ ಅಫ್ಘನ್ ಮಗು ನಾಪತ್ತೆ!
ತಾಲಿಬಾನ್ ಬಿಕ್ಕಟ್ಟಿನ ಸಮಯದಲ್ಲಿ, ಮಗುವಿನ ತಂದೆ, ಯುಎಸ್ ರಾಯಭಾರ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಿರ್ಜಾ ಅಲಿ ಅಹ್ಮದಿ (Mirza Ali Ahmadi) ಮತ್ತು ಅವರ ಪತ್ನಿ ಸುರಯಾ ( Suraya) ಅವರು ತಮ್ಮ ಮಗು ಜನಸಂದಣಿಯಲ್ಲಿ ಸಿಲುಕಿ ತೊಂದರೆಗೊಳಗಾಗಬಹುದು ಎಂದು ಭಯ ಪಟ್ಟಿದ್ದರು. ನಂತರ ಸಮವಸ್ತ್ರ ಧರಿಸಿದ್ದ ಸೈನಿಕನಿಗೆ ಮಗುವನ್ನು ನೀಡಿದ್ದರು. ಅಲ್ಲದೇ ನಂತರದಲ್ಲಿ ಮಗುವನ್ನು ಆತನಿಂದ ಪಡೆಯಬಹುದು ಎಂದು ಭಾವಿಸಿದ್ದರು. ಆದರೆ ತಾಲಿಬಾನ್ ಪಡೆಗಳು ಗುಂಪನ್ನು ಹೊರದೂಡಿದ್ದರಿಂದ ಅಹ್ಮದಿ ಹಾಗೂ ಆತನ ಪತ್ನಿ ಹಾಗೂ ನಾಲ್ವರು ಮಕ್ಕಳು ವಿಮಾನದೊಳಗೆ ಸೇರುವಂತಾಗಿತ್ತು. ಆದರೆ ಇವರು ಸೈನಿಕನ ಕೈಗೆ ನೀಡಿದ್ದ ಮಗು ಆ ವೇಳೆ ನಾಪತ್ತೆಯಾಗಿತ್ತು. ಮಗುವಿಗಾಗಿ ಅಹ್ಮದಿ ಇಡೀ ಹುಡುಕಾಡಿದರಂತೆ ಆದರೆ ಅವನನ್ನು ಪ್ರತ್ಯೇಕವಾಗಿ ದೇಶದಿಂದ ಹೊರಗೆ ಕರೆದೊಯ್ಯಬಹುದು ಮತ್ತು ನಂತರ ಅವರೊಂದಿಗೆ ಮತ್ತೆ ಸೇರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು ಎಂದು ಅಹ್ಮದಿ ಹೇಳಿದರು.
ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲಿವೇ ದೇಶ ಬಿಡಿ: ಸಿಖ್ಖರಿಗೆ ಧಮಕಿ!
ನಂತರ ನಿರಾಶೆಯಿಂದ ಕುಟುಂಬದ ಇತರ ಸದಸ್ಯರೊಂದಿಗೆ ಅಹ್ಮದಿ ಅಮೆರಿಕಾ ಸೇರಿದ್ದರು. ಅಲ್ಲದೇ ತಿಂಗಳುಗಟ್ಟಲೇ ತಮ್ಮ ಮಗ ಎಲ್ಲಿದ್ದಾನೆ ಎಂಬುದು ಅವರಿಗೆ ಗೊತ್ತೇ ಇರಲಿಲ್ಲ. ನಾವು ಈ ಕುಟುಂಬವನ್ನು ಮತ್ತೆ ಒಂದುಗೂಡಿಸಲು ಕೆಲಸ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ಇತ್ತ ಮಗು ಸೊಹೈಲ್ ಒಂಟಿಯಾಗಿ ನೆಲದ ಮೇಲೆ ಅಳುತ್ತಿದ್ದುದನ್ನು ಕಂಡ ಸಫಿ ಮಗುವಿನ ಪೋಷಕರನ್ನು ಪತ್ತೆಹಚ್ಚಲು ವಿಫಲವಾದ ನಂತರ ಮಗುವನ್ನು ತನ್ನ ಹೆಂಡತಿ ಮತ್ತು ಮಕ್ಕಳ ಮನೆಗೆ ಕರೆದುಕೊಂಡು ಹೋಗಿದ್ದರು. ಸಫಿಗೆ ತನ್ನದೇ ಆದ ಮೂವರು ಹೆಣ್ಣು ಮಕ್ಕಳಿದ್ದಾರೆ ಮತ್ತು ಸಫಿ ತಾಯಿಗೆ ಅವರು ಸಾಯುವ ಮೊದಲು ಸಫಿಗೆ ಒಂದು ಗಂಡು ಮಗು ಆಗಬೇಕು ಎಂಬ ಆಸೆ ಇತ್ತು.
ಹಾಗಾಗಿ ಆ ಕ್ಷಣದಲ್ಲಿ ಅವರು , ನಾನು ಈ ಮಗುವನ್ನು ಇಟ್ಟುಕೊಳ್ಳುತ್ತಿದ್ದೇನೆ, ಅವನ ಕುಟುಂಬವು ಕಂಡುಬಂದರೆ, ನಾನು ಅವನನ್ನು ಅವರಿಗೆ ಕೊಡುತ್ತೇನೆ ಇಲ್ಲದಿದ್ದರೆ ನಾನೇ ಅವನನ್ನು ಬೆಳೆಸುತ್ತೇನೆ ಎಂದು ನಿರ್ಧರಿಸಿದ್ದರಂತೆ. ಒಟ್ಟಿನಲ್ಲಿ ಈ ಪ್ರಕರಣವೀಗ ಸುಖ್ಯಾಂತ್ಯವಾಗಿದ್ದು, ಮಗು ಈಗ ಅದರ ಸಂಬಂಧಿಕರ ಬಳಿ ಇದ್ದು, ಶೀಘ್ರದಲ್ಲೇ ಅಮೆರಿಕಾದಲ್ಲಿರುವ ಪೋಷಕರನ್ನು ಸೇರಲಿದೆ.