ಇಡೀ ವಿಶ್ವವನ್ನು ಕಾಡಿತ್ತು ಆ ದೃಶ್ಯ, ಅಮೆರಿಕ ಸೈನಿಕರಿಗೆ ಹಸ್ತಾಂತರಿಸಿದ್ದ ಅಫ್ಘನ್ ಮಗು ನಾಪತ್ತೆ!
* ಅಪ್ಘಾನಿಸ್ತಾನರನ್ನು ಭಯಭೀತಗೊಳಿಸಿತ್ತು ತಾಲಿಬಾನ್ ಅಟ್ಟಹಾಸ
* ತಾಲಿಬಾನಿಯರಿಂದ ರಕ್ಷಿಸಿಕೊಳ್ಳಲು ಅಪ್ಘನ್ನರ ಹರಸಾಹಸ
* ಮಗುವಾದರೂ ಬದುಕಲಿ ಎಂದು ಸೈನಿಕರಿಗೆ ಮಕ್ಕಳನ್ನು ಹಸ್ತಾಂತರಿಸಿದ್ದ ಅಪ್ಘನ್ನರು
* ಸೈನಿಕರ ಕೈ ಸೇರಿದ್ದ ಕಂದ ನಾಪತ್ತೆ
ಕಾಬೂಲ್(ನ.06): ಅಫ್ಘಾನಿಸ್ತಾನ (Afghanistan) ಸಂಘರ್ಷದ ಮಧ್ಯೆ ಇಡೀ ವಿಶ್ವವನ್ನೇ ಕಾಡಿದ್ದ ಈ ಆಘಾತಕಾರಿ ಚಿತ್ರದಲ್ಲಿ ಕಂಡುಬಂದಿದ್ದ 2 ತಿಂಗಳ ಮಗು ಕಾಣೆಯಾಗಿದೆ. ಹೌದು ಆಗಸ್ಟ್ 19 ರಂದು, ಮಿರ್ಜಾ ಅಲಿ ಮತ್ತು ಅವರ ಪತ್ನಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಮೂಹದ ನಡುವೆ ತಮ್ಮ ಮಗು ಸೊಹೈಲ್ ಅನ್ನು ಯುಎಸ್ ಸೈನ್ಯಕ್ಕೆ ಹಸ್ತಾಂತರಿಸಿದ್ದರು. 5 ಮೀಟರ್ ಎತ್ತರದ ಗೋಡೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಅಮೆರಿಕ ಸೇನಾ (US Army) ಸೈನಿಕನೊಬ್ಬ ಮಿರ್ಜಾ ಅಲಿ ಬಳಿ ಸಹಾಯ ಮಾಡಬೇಕಾ ಎಂದು ಕೇಳಿದ್ದ. ಹೀಗಿರುವಾಗ ಮಿರ್ಜಾ ಅಲಿ ತನ್ನ ಮಗುವಿಗೆ ಯಾವುದೇ ಹಾನಿಯಾಗದಿರಲಿ ಹಾಗೂ ತಾವು ವಿಮಾನ ನಿಲ್ದಾಣಕ್ಕೆ (Airport) ತಲುಪಿದ ಬಳಿಕ ಮಗು ಸಿಗುತ್ತದೆ ಎಂದು ಕೂಡಲೇ ತನ್ನ ಕಂದನನ್ನು ಸೈನಿಕನ ಕೈಗೆ ನೀಡಿದ್ದ. ಆದರೆ ತಂದೆ ತಾಯಿ ವಿಮಾನ ನಿಲ್ದಾಣ ತಲುಪಿದಾಗ ಅಲ್ಲಿ ಮಗು ಪತ್ತೆಯಾಗಿಲ್ಲ ಎನ್ನಲಾಗಿದೆ.
ಅಮೆರಿಕಕ್ಕೆ ಆಗಮಿಸಿದ ಪೋಷಕರು ಭರವಸೆಯನ್ನು ಬಿಡಲಿಲ್ಲ
ಆಗಸ್ಟ್ 15 ರಂದು ತಾಲಿಬಾನ್ ಕಾಬೂಲ್ (Kablu) ಅನ್ನು ವಶಪಡಿಸಿಕೊಂಡಿತು. ಇದಾದ ನಂತರ ಅಫ್ಘಾನಿಸ್ತಾನದಲ್ಲಿ ಕಾಲ್ತುಳಿತದ ಪರಿಸ್ಥಿತಿ ಉಂಟಾಯಿತು. ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನ ನಿಂತಿದ್ದರು. ಅವರಲ್ಲಿ ಮಿರ್ಜಾ ಅಲಿ ಕೂಡ ಒಬ್ಬರು. ಭಾರೀ ಜನಸಮೂಹದ ನಡುವೆ, ಮಿರ್ಜಾ ಅಲಿ ಮಗುವನ್ನು ಗಾಯಗಳಾಗದಂತೆ ರಕ್ಷಿಸಲು ಯುಎಸ್ ಸೈನ್ಯಕ್ಕೆ ಹಸ್ತಾಂತರಿಸಿದರು. ಇದಾದ ಅರ್ಧ ಗಮಟೆ ಬಳಿಕ ಮಿರ್ಜಾ ಅಲಿ ವಿಮಾಣ ನಿಲ್ದಾಣ ತಲುಪುವಲ್ಲಿ ಯಶಸ್ವಿಯಾಗಿದ್ದರು. ಆದರೆ ದಂಪತಿ ಏರ್‌ಪೋರ್ಟ್ ಪ್ರವೇಶಿಸಿದಾಗ ಸೊಹೈಲ್ ಪತ್ತೆಯಾಗಿರಲಿಲ್ಲ. ಇನ್ನು ಮಿರ್ಜಾ ಅಲಿ ಅವರು 10 ವರ್ಷಗಳ ಕಾಲ ಯುಎಸ್ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರೆಂಬುವುದು ಉಲ್ಲೇಖನೀಯ.
ಮಗೂ, ನೀನಾದರೂ ಬದುಕು ಹೋಗು...: ಯೋಧರತ್ತ ಮಕ್ಕಳ ಎಸೆದ ತಾಯಂದಿರು!
ಮಾಧ್ಯಮ ವರದಿಗಳ ಪ್ರಕಾರ, ಮಿರ್ಜಾ ಅಲಿ ಸೊಹೈಲ್‌ಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ, ಆದರೆ ಅವನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಯುಎಸ್ ಮಿಲಿಟರಿ ಇಂಗ್ಲಿಷ್ ಮಾತನಾಡುವ ಕಾರಣ, ಮಿರ್ಜಾ ಅಲಿಗೆ ಸಂವಹನ ಮಾಡುವುದು ಕಷ್ಟಕರವಾಗಿತ್ತು. ಮಿರ್ಜಾ ಅಲಿ ತನ್ನ ಮಗುವನ್ನು ಮೂರು ದಿನಗಳವರೆಗೆ ಹುಡುಕುತ್ತಲೇ ಇದ್ದರು. ಇದಾದ ಬಳಿಕ ಹತಾಶೆಯಿಂದ 4 ಮಕ್ಕಳು ಹಾಗೂ ಪತ್ನಿಯೊಂದಿಗೆ ಕತಾರ್ ಗೆ ತೆರಳಿದ್ದರು. ಅಲ್ಲಿಂದ ಜರ್ಮನಿಗೆ ಹೋಗಿ ಅಮೆರಿಕಕ್ಕೆ ಹೋದರು. ಅವರು ಪ್ರಸ್ತುತ ಟೆಕ್ಸಾಸ್‌ನ ಫೋರ್ಟ್ ಬ್ಲಿಸ್‌ನಲ್ಲಿರುವ ಆಫ್ಘನ್ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಮಿರ್ಜಾ ಅಲಿ ಇನ್ನೂ ತನ್ನ ಮಗುವನ್ನು ಹುಡುಕುವ ಕಾರ್ಯ ಮುಂದುವರೆಸಿದ್ದಾರೆ.
ಅಮೆರಿಕ ಸರ್ಕಾರ ಕೂಡ ಸಹಾಯ ಮಾಡುತ್ತಿದೆ
ಮಿರ್ಜಿ ಅಲಿ ಅವರು ತಮ್ಮ ಮಗುವನ್ನು ಪತ್ತಹಚ್ಚಲು ಯುಎಸ್ ಸರ್ಕಾರದಿಂದ (US Govt) ಸಹಾಯವನ್ನು ಕೋರಿದ್ದಾರೆ. ಮಗುವನ್ನು ಹುಡುಕಲು ಯುಎಸ್ ಸರ್ಕಾರ ಏಜೆನ್ಸಿಗಳ ಸಹಾಯವನ್ನು ತೆಗೆದುಕೊಂಡಿದೆ. ಆದರೆ, ಇದುವರೆಗೆ ಮಗುವಿನ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ತಾಲಿಬಾನ್ ಸರ್ಕಾರ ರಚನೆಯಾದ ನಂತರ ಜನರ ಜೀವನವು ನರಕದಂತಾಗಿದೆ. ಅವರಿಗೆ ವಾಸಿಸಲು ಮನೆಯೂ ಇಲ್ಲ, ತಿನ್ನಲು ರೊಟ್ಟಿಯೂ ಇಲ್ಲದಂತಾಗಿದೆ. ಸುಮಾರು 35 ಮಿಲಿಯನ್ ಜನರಿಗೆ ತಮ್ಮ ಭವಿಷ್ಯ ಹೇಗೆ ಎಂಬುವುದೇ ತಿಳಿದಿಲ್ಲ. ಒಂದು ಸಾರಿಯಾದರೂ ಊಟ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಕಾಡಿದೆ. ಚಳಿಗಾಲದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಮನೆ, ಬಟ್ಟೆ ಇಲ್ಲದ ಕಾರಣ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.