ಪುಟಾಣಿ ಮರಿ ಗೊರಿಲ್ಲಾವನ್ನು ಕ್ರೇಟ್‌ನಲ್ಲಿ ತುಂಬಿಸಿ ಕಳ್ಳಸಾಗಣೆ: ವಿಡಿಯೋ ವೈರಲ್
ಟರ್ಕಿಯ ಇಸ್ತಾಂಬುಲ್ ಏರ್‌ಪೋರ್ಟ್‌ನಲ್ಲಿ ಟೀಶರ್ಟ್ ಹಾಕಿದ್ದ ಮರಿ ಗೊರಿಲ್ಲಾವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳು ಕ್ರೇಟ್‌ನಿಂದ ಗೊರಿಲ್ಲಾವನ್ನು ರಕ್ಷಿಸಿ, ಹಾಲುಣಿಸಿದ್ದಾರೆ. ನೈಜೀರಿಯಾದಿಂದ ಥೈಲ್ಯಾಂಡ್‌ಗೆ ಸಾಗಿಸಲಾಗುತ್ತಿದ್ದ ಮರಿ ಗೊರಿಲ್ಲಾವನ್ನು ವಶಪಡಿಸಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಹಾವು ಹಲ್ಲಿ, ಚೇಳು, ಆಮೆ, ಹಾಗೂ ಕೆಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವುದನ್ನು ನೀವು ನೋಡಿರುತ್ತೀರಿ. ಇಂತಹ ಅತ್ಯಂತ ಬೆಲೆ ಬಾಳುವ ಪ್ರಾಣಿಗಳನ್ನು ಕೆಲವರು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಅಥವಾ ಕಳ್ಳದಂಧೆಯ ಮೂಲಕ ಕಳ್ಳ ಸಾಗಣೆ ಮೂಲಕ ದೇಶದಿಂದ ಮತ್ತೊಂದು ದೇಶಕ್ಕೆ ಸಾಗಣೆ ಮಾಡಿ ಲಕ್ಷಾಂತರ ರೂ ಗಳಿಕೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮರಿ ಗೊರಿಲ್ಲಾವನ್ನು ಟೀಶರ್ಟ್ ಹಾಕಿಸಿ ಕಳ್ಳಸಾಗಣೆ ಮಾಡಿಸಿದ್ದು, ಬಾಕ್ಸ್‌ನಲ್ಲಿ ಟೀ ಶರ್ಟ್ ಹಾಕಿಸಿ ಕೂರಿಸಿದ್ದ ಗೊರಿಲ್ಲಾವನ್ನು ಟರ್ಕಿಯ ಇಸ್ತಾಂಬುಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಟ್ಟದಾದ ಮರಿ ಗೊರಿಲ್ಲಾವನ್ನು ಟೀ ಶರ್ಟ್ ಹಾಕಿಸಿ ಕ್ರೇಟ್‌ನಲ್ಲಿ ತುಂಬಿಸಲಾಗಿತ್ತು. ಇದನ್ನು ಕ್ರೇಟ್‌ನಿಂದ ತೆಗೆದ ಅಧಿಕಾರಿಗಳು ರಕ್ಷಣೆ ಮಾಡಿದ್ದು, ಮಗುವಿಗೆ ನೀಡುವ ಹಾಲಿನ ಬಾಟಲ್‌ನಲ್ಲಿ ಗೊರಿಲ್ಲಾದ ಮರಿಗೆ ಹಾಲು ಕುಡಿಸಿದ್ದಾರೆ. ತನಿಖೆಯ ವೇಳೆ ಈ ಕ್ರೇಟ್‌ನಲ್ಲಿ ಪಾಶ್ಚಾತ್ಯ ಗೊರಿಲ್ಲಾವಿತ್ತು ಎಂಬ ವಿಚಾರ ತಿಳಿದು ಬಂದಿದೆ. ಈ ಗೊರಿಲ್ಲಾದ ಮರಿಯನ್ನು ನೈಜೀರಿಯಾದಿಂದ ಥೈಲ್ಯಾಂಡ್‌ಗೆ ಸಾಗಿಸಲಾಗುತ್ತಿತ್ತು. ಆದರೆ ಟರ್ಕಿಯ ಇಸ್ತಾಂಬುಲ್ ಏರ್‌ಪೋರ್ಟ್ ಅಧಿಕಾರಿಗಳು ಈ ಕಳ್ಳಸಾಗಣೆ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದಾರೆ. ಸಣ್ಣ ಕ್ರೇಟ್‌ನಲ್ಲಿ ಗೊರಿಲ್ಲಾವನ್ನು ತುಂಬಿಸಿಟ್ಟಿರುವುದನ್ನು ನೋಡಿದ ಅಧಿಕಾರಿಗಳು ಅದನ್ನು ರಕ್ಷಿಸಿದ್ದಾರೆ. ಅಧಿಕಾರಿಗಳು ಮರಿ ಗೊರಿಲ್ಲಾವನ್ನು ರಕ್ಷಿಸುತ್ತಿರುವ ವೀಡಿಯೋ ಈಗ ವೈರಲ್ ಆಗುತ್ತಿದೆ. ರಕ್ಷಿಸಲ್ಪಟ್ಟ ಗೊರಿಲ್ಲಾಗೆ ಟೀ ಶರ್ಟ್ ಹಾಕಲಾಗಿದ್ದು, ಅಧಿಕಾರಿಗಳು ಫೀಡಿಂಗ್ ಬಾಟಲ್‌ನಿಂದ ಮರಿ ಗೊರಿಲ್ಲಾಗೆ ಕುಡಿಯಲು ಹಾಲು ನೀಡಿದ್ದಾರೆ.
ಈಗ ಪತ್ತೆಯಾದ ವೆಸ್ಟರ್ನ್ ಗೊರಿಲ್ಲಾವೂ ಗೊರಿಲ್ಲಾಗಳ ಎರಡು ತಳಿಗಳಲ್ಲಿ ಒಂದಾಗಿದೆ. ಇಸ್ಟರ್ನ್ ಗೊರಿಲ್ಲಾ ಗೊರಿಲ್ಲಾದ ಇನ್ನೊಂದು ತಳಿಯಾಗಿದೆ. ಈ ತಳಿಯ ಗೊರಿಲ್ಲಾಗಳು ಗ್ಯಾಬೊನ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕ್ಯಾಮರೂನ್, ಅಂಗೋಲಾ, ಈಕ್ವಟೋರಿಯಲ್ ಗಿನಿಯಾ ಮತ್ತು ಕಾಂಗೋ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಪ್ರಸ್ತುತ ನಡೆಯುತ್ತಿರುವ ವನ್ಯಜೀವಿ ಸಂರಕ್ಷಣಾ ಕಾರ್ಯದ ಭಾಗವಾಗಿ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ತಂಡಗಳು ಅಕ್ರಮ ಸಾಗಣೆಯನ್ನು ಪತ್ತೆಹಚ್ಚಿವೆ. ಕ್ರೇಟ್ ವಶಪಡಿಸಿಕೊಂಡ ನಂತರ ಗೊರಿಲ್ಲಾ ಸಾಗಣೆಗೆ ಕಳ್ಳಸಾಗಣೆಕೋರರ ಬಳಿ ಸರಿಯಾದ ದಾಖಲೆಗಳಿಲ್ಲ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಆರೋಪಿಗಳು ಅಂತಾರಾಷ್ಟ್ರೀಯ ವನ್ಯಜೀವಿ ವ್ಯಾಪಾರ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಮರಿ ಗೊರಿಲ್ಲಾದ ಆರೋಗ್ಯ ಸುಧಾರಿಸುತ್ತಿದೆ, ಆದರೆ ಅದು ವೈದ್ಯರ ಮೇಲ್ವಿಚಾರಣೆಯಲ್ಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ, ಪ್ರಾಣಿಯನ್ನು ರಾಷ್ಟ್ರೀಯ ಉದ್ಯಾನವನಗಳ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ, ಆದರೂ ಅದರ ಶಾಶ್ವತ ನೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ.