ತಾಯಾನೆ ಹಾಲಿಗೆ ಮರಿಗಳೆರಡರ ಕಿತ್ತಾಟ... ಅಮ್ಮ ಏನ್ಲಾಡಿದ್ಲು ನೋಡಿ...!
- ಅಮ್ಮನ ಹಾಲಿಗೆ ಮರಿಯಾನೆಗಳ ಕಿತ್ತಾಟ
- ಮುದ್ದಾದ ವಿಡಿಯೋ ವೈರಲ್
- ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ ವಿಡಿಯೋ
ಕೀನ್ಯಾ(ಫೆ.7): ಮರಿಯಾನೆಗಳೆರಡು ತಾಯಿ ಆನೆಯ ಎದೆ ಹಾಲು ಕುಡಿಯಲು ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ (Sheldrick Wildlife Trust) ವಿಡಿಯೋ ಆಗಿದ್ದು, ಸಂಸ್ಥೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮಕ್ಕಳೆರಡು ಅದೂ ಸಣ್ಣ ಮಕ್ಕಳು ಕಿತ್ತಾಡುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿ ಪಕ್ಷಿಗಳಲ್ಲೂ ಕೂಡ ಒಡಹುಟ್ಟಿದವರು ಕಿತ್ತಾಡುವುದು ಸಾಮಾನ್ಯ. ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ನ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಲಾದ ಈ ವೀಡಿಯೊ, ಎರಡು ಮರಿ ಆನೆ ಸಹೋದರಿಯರ ನಡುವಿನ ಸಹೋದರ ಪೈಪೋಟಿಯನ್ನು ನಿಖರವಾಗಿ ತೋರಿಸುತ್ತಿದೆ.
ಒಂದು ಮೂರು ವರ್ಷದ ಹಾಗೂ ಇನ್ನೊಂದು ಅದಕ್ಕಿಂತ ಸಣ್ಣ ಪ್ರಾಯದ ಎರಡು ಮರಿಯಾನೆಗಳು ತಾಯಿ ಹಾಲನ್ನು ಕುಡಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಈ ವೇಳೆ ಕಿರಿಯ ಆನೆ ತನಗಿಂತ ದೊಡ್ಡದಾದ ತನ್ನ ಸಹೋದರಿ ಆನೆ ಅಮ್ಮನ ಹಾಲು ಕುಡಿಯುವುದನ್ನು ಸಹಿಸಿಕೊಳ್ಳುವುದಿಲ್ಲ. ಸ್ವಲ್ಪ ಹೊತ್ತು ಸುಮ್ಮನಿದ್ದ ಅದು ಸೊಂಡಿಲಿನಲ್ಲಿ ದೊಡ್ಡ ಆನೆಯನ್ನು ತಳ್ಳುತ್ತದೆ.
ಆನೆಗಳಲ್ಲೂ ಸಹ ಕುಟುಂಬ ನಾಟಕ ನಡೆಯುತ್ತದೆ. ಮೂರು ವರ್ಷದ ಲುಲು (Lulu) ತನ್ನ ಅಮ್ಮನ ಹಾಲು ಕುಡಿಯುತ್ತಿದ್ದಳು. ಆದರೆ ಬೇಬಿ ಲೆಕ್ಸಿ (Lexi) ತನ್ನ ಅಮ್ಮನ ಹಾಲನ್ನು ಅಕ್ಕ ಕುಡಿಯುವುದನ್ನು ಸಹಿಸಲಿಲ್ಲ. ಆಕೆ ತನ್ನ ಸೊಂಡಿಲಿನಿಂದಲೇ ಆಕೆಯನ್ನು ದೂರ ತಳ್ಳಿದಳು. ಆದರೆ ತಾಯಿ ಲುವಾಲೆನಿ (Lualeni) ಒಬ್ಬ ಪರಿಣಿತ ತಾಯಿಯಾಗಿದ್ದು, ಈ ಒಡಹುಟ್ಟಿದವರ ಜಗಳದಿಂದ ದೂರವಿರುವುದು ಉತ್ತಮ ಎಂದು ತಿಳಿದು ಸುಮ್ಮನಿತ್ತು ಎಂದು ಈ ವಿಡಿಯೋವನ್ನು ಪೋಸ್ಟ್ ಮಾಡಿ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ವಿವರಣೆ ನೀಡಿದೆ.
ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ
ಈ ಮುದ್ದಾದ ವಿಡಿಯೋವನ್ನು ನೋಡುಗರು ಮೆಚ್ಚಿದ್ದು, 59,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಮರಿಯಾನೆ ಜೋರಾಗಿ ಧ್ವನಿ ಹೊರಡಿಸುತ್ತಿರುವುದು ಕೇಳಿಸುತ್ತಿದೆ. ಇದನ್ನು ಕೇಳಿದ ನೋಡುಗರು ಇಷ್ಟು ಸಣ್ಣ ಮರಿ ಅಷ್ಟೊಂದು ಜೋರಾಗಿ ಶಬ್ಧ ಮಾಡುತ್ತದೆಯೇ ಎಂದು ಕೇಳುತ್ತಾರೆ. ಈ ವಿಡಿಯೋವನ್ನು ಆಫ್ರಿಕಾದ ಕೀನ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಒಂದು ದಿನದ ಹಿಂದೆ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ವೀಡಿಯೊ 59,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಪ್ರಾಣಿ ಪ್ರಿಯರಿಂದ ವಿವಿಧ ಕಾಮೆಂಟ್‌ಗಳೂ ಬಂದಿವೆ.
ಇತ್ತೀಚೆಗೆ ಅಸ್ಸಾಂನ ಗೋಲ್ಘಾಟ್ (Golaghat) ಜಿಲ್ಲೆಯೊಂದರ ಹಳ್ಳಿಯ ಮಗುವೊಂದು ಆನೆಯ ಕೆಚ್ಚಲಿಗೆ ಬಾಯಿ ಹಕ್ಕಿ ನೇರವಾಗಿ ಆನೆಯ ಹಾಲು ಕುಡಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. . ಇದು ತಾಯಿ ಪ್ರಾಣಿ ಹಾಗೂ ಮಾನವ ಮಗುವಿನ ಮಧ್ಯೆ ಇರುವ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿತ್ತು.
ಸಾವಿನ ಅರಿವಿಲ್ಲದೇ ತಾಯಿಯ ಎದ್ದೇಳಿಸಲು ಪ್ರಯತ್ನಿಸಿದ ಮರಿಯಾನೆ... ಕಣ್ಣಂಚಿನಲ್ಲಿ ನೀರು ತರಿಸಿದ ದೃಶ್ಯ
ವಿಡಿಯೋದಲ್ಲಿ ಕಾಣಿಸುವಂತೆ ಮೂರು ವರ್ಷದ ಮಗುವೊಂದು ಆನೆಯೊಂದಿಗೆ ಯಾವುದೇ ಭಯವಿಲ್ಲದೇ ಆಟವಾಡುತ್ತಿದ್ದು, ತಾಯಿ ಆನೆಯೊಂದಿಗೆ ಆಟವಾಡುತ್ತಿರುವ ಮಗುವಿನ ಹೆಸರು ಹರ್ಷಿತಾ ಬೋರಾ (Harshita Bora). ಈ ಮಗು ಆನೆಯನ್ನು ಕಟ್ಟಿ ವಾಸ್ತವ್ಯ ಇರುವಲ್ಲಿ ಅದರೊಂದಿಗೆ ಅದರ ಕಾಲಡಿಯಲ್ಲೇ ಆಟವಾಡುತ್ತಾ ಅದರ ಹಾಲನ್ನು ಕುಡಿಯುತ್ತಿದೆ. ಈ ಮುದ್ದು ಮಗು ತನ್ನ ಎರಡು ಕಾಲುಗಳ ಬೆರಳುಗಳನ್ನು ನೆಲಕ್ಕೆ ಊರಿ ಹಿಂಭಾಗವನ್ನು ಎತ್ತಿ ಆನೆಯ ಕೆಚ್ಚಿಲಿಗೆ ಬಾಯಿ ಇಡುತ್ತಿದೆ. ವಿಡಿಯೋದಲ್ಲಿ ಮಗು ಆನೆಯೊಂದಿಗೆ ಹಿಂದೆ ಮುಂದೆ ಸುತ್ತುತ್ತಾ ಆಡುವುದನ್ನು ಕಾಣಬಹುದು. ಅದರ ಸೊಂಡಿಲನ್ನು ಹಿಡಿದು ತಬ್ಬಿಕೊಂಡು ಮಗು ಆ ಆನೆಗೆ ಮುತ್ತನ್ನಿಡುತ್ತಿದೆ.