ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದಲ್ಲಿರುವ 200 ವರ್ಷಗಳಷ್ಟು ಹಳೆಯ ಐತಿಹಾಸಿಕ ಹಿಂದೂ ದೇವಾಲಯವನ್ನು ಕೆಡವಲು ಯತ್ನಿಸಲಾಗಿದೆ. ವಾಣಿಜ್ಯ ಸಂಕೀರ್ಣ ನಿರ್ಮಿಸುವ ಈ ಯತ್ನವನ್ನು ಹಿಂದೂ ಮುಖಂಡರು ಮತ್ತು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ದೇವಾಲಯವನ್ನು ಸೀಲ್ ಮಾಡಿದೆ.
ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ಸುಮಾರು 200 ವರ್ಷಗಳಷ್ಟು ಹಳೆಯ ಐತಿಹಾಸಿಕ ಹಿಂದೂ ದೇವಾಲಯವನ್ನು ಕೆಡವಿ, ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯತ್ನಿಸಿದ ಘಟನೆ ನಡೆದಿದೆ. ಹಿಂದೂ ಮುಖಂಡರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮತ್ತು ಎವ್ಯಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಶನಿವಾರ ದೇವಾಲಯವನ್ನು ಸೀಲ್ ಮಾಡಿವೆ.
ಡೇರಾ ಇಸ್ಮಾಯಿಲ್ ಖಾನ್ ನಗರದ ಐತಿಹಾಸಿಕ ರಾಮ್ ಲೀಲಾ ದೇವಾಲಯವನ್ನು ಕೆಡವಲು ಯತ್ನಿಸುತ್ತಿದ್ದಾಗ ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಮಗಾರಿಯನ್ನು ತಡೆದಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತನಗೆ ಕಟ್ಟಡ ಕೆಡವಲು ಗುತ್ತಿಗೆ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಘಟನೆಯ ನಂತರ ಹಿಂದೂಗಳು ತುರ್ತು ಸಭೆ ನಡೆಸಿ, ಪ್ರಸ್ತಾವಿತ ತೆರವು ಕಾರ್ಯವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು!
ಇತ್ತೀಚೆಗಷ್ಟೇ ಪಾಕಿಸ್ತಾನ(Pakistan)ದಲ್ಲಿ ಶತಮಾನದಷ್ಟು ಹಳೆಯ ಹಿಂದೂ ದೇವಾಲಯ(Hindu Temple)ವೊಂದನ್ನು ನೆಲಸಮಗೊಳಿಸಿರುವ ಆಘಾತಕಾರಿ ಘಟನೆ ವರದಿಯಾಗಿತ್ತ. ಪಂಜಾಬ್ ಪ್ರಾಂತ್ಯದ ನರೋವಾಲ್ನಲ್ಲಿರುವ ಈ ಐತಿಹಾಸಿಕ ದೇಗುಲವನ್ನು ಆಗಸ್ಟ್ 21 ರಂದು ಕೆಡವಲಾಗಿತ್ತು.
ಈ ಕೃತ್ಯವನ್ನು ಭಾರತ ಸರ್ಕಾರ ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸಿತ್ತು. ಪಾಕಿಸ್ತಾನದ ಈ ನಡೆ ತುಂಬಾ ಅಪಾಯಕಾರಿ, ತನ್ನ ನೆಲದಲ್ಲಿರುವ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಈ ಘಟನೆಯು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.


