Dogs Heartwarming Gesture: ಕೇರಳದಲ್ಲಿ ತೆರೆದ ಬಾವಿಗೆ ಬಿದ್ದ ಜರ್ಮನ್ ಶೆಫರ್ಡ್ ಶ್ವಾನವನ್ನು ಲಿಜೋ ಎಂಬ ಸ್ಥಳೀಯ ಪ್ರಾಣಿ ರಕ್ಷಕ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬಾವಿಯಿಂದ ಮೇಲೆ ಬಂದ ನಂತರ, ಶ್ವಾನವು ತನ್ನ ಜೀವ ಉಳಿಸಿದ ಯುವಕನಿಗೆ ಮುತ್ತುಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದೆ.

ನಾಯಿಗಳು ಬಹಳ ನಿಷ್ಠಾವಂತ ಪ್ರಾಣಿಗಳು, ಒಂದು ಹೊತ್ತು ಊಟ ಹಾಕಿದ ಮಾಲೀಕನನ್ನೇ ಅವೂ ಯಾವತ್ತೂ ಮರೆಯುವುದಿಲ್ಲ, ಹೀಗಿರುವಾಗ ಜೀವ ಉಳಿಸಿದವನನ್ನು ಮರೆಯುವುದುಂಟೇ ಹಾಗೆಯೇ ಇಲ್ಲೊಂದು ಕಡೆ ತನ್ನ ಜೀವ ಉಳಿಸಿದ ಯುವಕನೋರ್ವನಿಗೆ ಶ್ವಾನವೊಂದು ಪ್ರೀತಿಯಿಂದ ಮುತ್ತಿನ ಮಳೆಗೆರೆದಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಹಾಗಿದ್ದರೆ ಆಗಿದ್ದೇನು?

ವ್ಯಕ್ತಿಯೊಬ್ಬರ ಜರ್ಮನ್ ಶೆಫರ್ಡ್ ಶ್ವಾನವೊಂದು ನೀರಿದ್ದ ತೆರೆದ ಬಾವಿಗೆ ಬಿದ್ದಿತ್ತು. ನಾಯಿ ಬಿದ್ದ ವಿಚಾರ ತಿಳಿದ ಮಾಲೀಕರು ಕೂಡಲೇ ವನ್ಯಜೀವಿಗಳ ರಕ್ಷಣೆ ಕೆಲಸ ಮಾಡುವ ಸ್ಥಳೀಯ ವ್ಯಕ್ತಿ ಲಿಜೋ ಎಂಬುವವರಿಗೆ ಕರೆ ಮಾಡಿ ವಿಚಾರ ತಿಳಿಸಿದರು. ಕೂಡಲೇ ಬಳಿ ಹಾಗೂ ಸುರಕ್ಷತಾ ಸಲಕರಣೆಗಳೊಂದಿಗೆ ಸ್ಥಳಕ್ಕೆ ಬಂದ ಅವರು ಇತರರ ಸಹಾಯದಿಂದ ಶ್ವಾನವನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಬಾವಿಯಿಂದ ಮೇಲೇರಿ ಬಂದ ಶ್ವಾನ ಮೇಲೆ ಬರುತ್ತಿದ್ದಂತೆ ತನ್ನ ರಕ್ಷಣೆ ಮಾಡಿದ ಯುವಕನಿಗೆ ಕೃತಜ್ಞತೆ ಸಲ್ಲಿಸಿದ ರೀತಿ ಎಲ್ಲರನ್ನೂ ಭಾವುಕಗೊಳಿಸಿತ್ತು. ಇದು ಪ್ರಾಣಿಗಳಿಗೆ ದಯೆ ಕರುಣೆ, ಕೃತಜ್ಞತೆ ತೋರುವ ಗುಣವಿದೆ ಎಂಬುದನ್ನು ಸಾಬೀತು ಮಾಡಿದೆ.

ತನ್ನ ರಕ್ಷಿಸಿದ ಲಿಜೋಗೆ ಶ್ವಾನದಿಂದ ಮುತ್ತಿನ ಉಡುಗೊರೆ:

ಲಿಜೋ ಅವರು ಮೇಲೆ ಬರುತ್ತಿದ್ದಂತೆ ಶ್ವಾನ, ಆ ಯುವಕನ ಮುಖವನ್ನೆಲ್ಲಾ ನೆಕ್ಕಿ ಮುತ್ತಿಕ್ಕಿದೆ. ಜೊತೆಗೆ ಆತನ ಕೈಗಳೆಡೆಯಲ್ಲಿ ತಲೆಯನ್ನು ಹುಗ್ಗಿಸುತ್ತಾ ಆತನಿಂದ ಸಾಂತ್ವನ ಬಯಸುವ ಜೊತೆ ಕೃತಜ್ಞತೆ ಸಲ್ಲಿಸಿದೆ. ಈ ವೇಳೆ ಲಿಜೋ ಅವರು ನಾಯಿಯ ತಲೆ ಸವರಿ ಸಮಾಧಾನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಲಿಜೋ ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದಲ್ಲಿ, ಸಮಾಜದಲ್ಲಿ ಎಲೆಮರೆಯ ಕಾಯಿಯಂತಿರುವ, ಸಮಾಜಮುಖಿ ಕೆಲಸ ಮಾಡುವ ಜನರನ್ನೇ ಹೆಚ್ಚಾಗಿ ಪರಿಚಯಿಸುವ ಬೆಟರ್ ಇಂಡಿಯಾ(thebetterindia)ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋದ ಜೊತೆ ಕೇರಳದ ಪ್ರಾಣಿ ರಕ್ಷಕ ಲಿಜೋ ಅವರನ್ನು ಪರಿಚಯಿಸಲಾಗಿದೆ. ಲಿಜೋ ಅವರು wildlifer_lijo ಎಂಬ ಇನ್ಸ್ಟಾಗ್ರಾಮ್‌ ಖಾತೆ ಹೊಂದಿದ್ದು, ಅವರ ಖಾತೆಯಲ್ಲಿ ಅವರು ರಕ್ಷಣೆ ಮಾಡಿದ ಹಲವು ಪ್ರಾಣಿಗಳ ವೀಡಿಯೋಗಳಿವೆ. ಅವರು ಈ ಹಿಂದೆಯೂ ಬಾವಿಗೆ ಬಿದ್ದಂತಹ ಹಲವು ನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ಹಾಗೆಯೇ ಹಲವು ಬಗೆಯ ಹಾವುಗಳು ಮೊಸಳೆಯನ್ನು ಅವರು ರಕ್ಷಿಸಿದ್ದಾರೆ.

ಲೀಜೋ ಕಾರ್ಯಕ್ಕೆ ಶ್ಲಾಘನೆ

ಇತರರು ಅಪಾಯವನ್ನು ನೋಡಿದರೆ, ಅವನು ರಕ್ಷಿಸಬೇಕಾದ ಜೀವವನ್ನು ನೋಡುತ್ತಾನೆ. ಲಿಜೊ ಕೇರಳದ ಕಾಡುಗಳಲ್ಲಿ ಜೀವಗಳನ್ನು ಉಳಿಸುವಲ್ಲಿ ಎರಡು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಆದರೆ ಪ್ರಾಣಿಗಳ ಮೇಲಿನ ಅವರ ಪ್ರೀತಿ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ಬಾಲ್ಯದಲ್ಲಿ, ಅವರು ತನ್ನ ತಂದೆ ಹಾವುಗಳನ್ನು ಹಿಡಿಯುವುದನ್ನು ನೋಡುತ್ತಿದ್ದರು ಮತ್ತು ತಂದೆಯ ಹೆಜ್ಜೆಗಳನ್ನು ಅನುಸರಿಸಲು ಎಂದಿಗೂ ಹೆದರುತ್ತಿರಲಿಲ್ಲ. ಇತರರು ಭಯದಿಂದ ಹಿಂದೆ ಸರಿದರೆ ಲಿಯೋ ಮುಂದೆ ಬಂದರು. ಇಂದು ಅದು ಬಾವಿಯಲ್ಲಿ ಸಿಕ್ಕಿಬಿದ್ದ ಕಾಡು ಪ್ರಾಣಿಯಾಗಿರಲಿ ಅಥವಾ ಅಪಾಯದಲ್ಲಿರುವ ಮನುಷ್ಯನಾಗಿರಲಿ, ಯಾವುದೇ ಹಿಂಜರಿಕೆಯಿಲ್ಲದೆ ಅತ್ಯಂತ ಅಪಾಯಕಾರಿ ಹಾದಿಗಳಲ್ಲಿ ಲಿಯೋ ಧುಮುಕುತ್ತಾರೆ. ಸಾಧ್ಯವಿರುವ ಪ್ರತಿಯೊಂದು ಜೀವವನ್ನು ಉಳಿಸಬೇಕು ಎಂಬುದು ಅವರ ಧ್ಯೇಯ. ಅವರು ರಕ್ಷಿಸುವ ಪ್ರತಿಯೊಂದು ರಕ್ಷಣೆಯೂ ಅವರನ್ನು ಭಾರತದ ಅತ್ಯುತ್ತಮ ರಕ್ಷಕನಾಗುವ ಮತ್ತು ಒಂದು ದಿನ ತನ್ನ ಅನುಭವವನ್ನು ಮುಂದಿನ ಪೀಳಿಗೆಯ ಹೀರೋಗಳೊಂದಿಎಗೆ ಹಂಚಿಕೊಳ್ಳುವ ಅವರ ಕನಸನ್ನು ಬಲಪಡಿಸುತ್ತದೆ ಎಂದು ಬೆಟರ್ ಇಂಡಿಯಾ ಲಿಜೋ ಕಾರ್ಯವನ್ನು ಶ್ಲಾಘಿಸಿ ಬರೆದುಕೊಂಡಿದೆ.

ವೀಡಿಯೋದಲ್ಲಿ ಲಿಜೋ ಅವರಿಗೆ ಶ್ವಾನ ಕೃತಜ್ಞತೆ ತೋರಿಸಿದ ರೀತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಜೊತೆಗೆ ಲಿಜೋ ಅವರ ಕಾರ್ಯಕ್ಕೆ ಅನೇಕರು ಕೃತಜ್ಞತೆ ಸಲ್ಲಿಸಿ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: 1990ರಲ್ಲಿ ಇನ್‌ಪೋಸಿಸ್ ಕ್ಯಾಂಪಸ್ ಹೇಗಿತ್ತು ಅಲ್ಲಿ ಉದ್ಯೋಗಿಗಳು ಹೇಗಿದ್ದರು? 35 ವರ್ಷ ಹಳೇ ವಿಡಿಯೋ ವೈರಲ್

ಇದನ್ನೂ ಓದಿ: ಬಿಹಾರ ಚುನಾವಣೆ: ನಿಷ್ಠಾವಂತ ಕಾರ್ಯಕರ್ತನಿಗೇ ಟಿಕೆಟ್‌ ನೀಡಲು 2.7 ಕೋಟಿ ಕೇಳಿದ್ರಾ ಲಾಲೂ ಪಾರ್ಟಿ ನಾಯಕರು

View post on Instagram