ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಉಕ್ರೇನ್ ಮತ್ತೆ ಸಂಧಾನದ ಹಾದಿಗೆ ಮರಳಿವೆ. ಉಭಯ ದೇಶಗಳ ಅಧ್ಯಕ್ಷೀಯ ಕಚೇರಿಯ ಹಿರಿಯ ಅಧಿಕಾರಿಗಳು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, 3 ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ತೆರೆ ಬೀಳುವ ಆಶಾಭಾವನೆ ಮೂಡಿದೆ.
ವಾಷಿಂಗ್ಟನ್: ರಷ್ಯಾದೊಂದಿಗಿನ ಯುದ್ಧ ಕೊನೆಗಾಣಿಸುವ ವಿಷಯದಲ್ಲಿ ಇತ್ತೀಚೆಗೆ ಶ್ವೇತಭವನದಲ್ಲಿ ಟ್ರಂಪ್ ಮತ್ತು ಜೆಲೆನ್ಸ್ಕಿ ಪರಸ್ಪರ ಕಿತ್ತಾಡಿಕೊಂಡ ಹೊರತಾಗಿಯೂ, ಉಭಯ ದೇಶಗಳು ಮತ್ತೆ ಸಂಧಾನದ ಹಾದಿಗೆ ಮರಳಿವೆ.
ರಷ್ಯಾದೊಂದಿಗೆ ಎಲ್ಲಿ? ಎಂದು? ಸಂಧಾನ ಮಾತುಕತೆ ನಡೆಸಬೇಕು ಎಂಬ ಬಗ್ಗೆ ಬುಧವಾರ ಅಮೆರಿಕ ಮತ್ತು ಉಕ್ರೇನ್‌ನ ಅಧ್ಯಕ್ಷೀಯ ಕಚೇರಿಯ ಹಿರಿಯ ಅಧಿಕಾರಿಗಳು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಉಕ್ರೇನ್‌ನ ಅಧ್ಯಕ್ಷೀಯ ಕಚೇರಿ ಮಾಹಿತಿ ನೀಡಿದೆ. ಇದರೊಂದಿಗೆ 3 ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ಶೀಘ್ರ ತೆರೆ ಬೀಳುವ ಆಶಾಭಾವನೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಮತ್ತು ಟ್ರಂಪ್ ನಡುವೆ ಶ್ವೇತಭವನದಲ್ಲೇ ಭಾರೀ ಕಿತ್ತಾಟ ನಡೆದಿತ್ತು. ಅದಾದ ಬಳಿಕ ಬ್ರಿಟನ್‌ಗೆ ತೆರಳಿದ್ದ ಜೆಲೆನ್ಸ್ಕಿ, ಅಲ್ಲಿ ಸಂಧಾನದ ಮಾತುಕತೆ, ಯುದ್ಧ ಸ್ಥಗಿತಗೊಳ್ಳುವ ಸಾಧ್ಯತೆ ದೂರವಿದೆ ಎಂದಿದ್ದರು. ಅದರ ಬೆನ್ನಲ್ಲೇ ಉಕ್ರೇನ್‌ಗೆ ಘೋಷಿಸಿದ್ದ ಎಲ್ಲಾ ಸೇನಾ ನೆರವನ್ನು ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಅದಾದ ನಂತರ ಸ್ವಲ್ಪ ತಣ್ಣಗಾಗಿದ್ದ ಜೆಲೆನ್ಸ್ಕಿ. ಜಟಾಪಟಿ ಕುರಿತು ವಿಷಾದ ವ್ಯಕ್ತಪಡಿಸಿ, ಅಮೆರಿಕದ ನೆರವನ್ನು ಶ್ಲಾಘಿಸಿಸಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ಅವರು ಮತ್ತೆ ಸಂಧಾನದ ಹಾದಿಗೆ ಮರಳಿದ್ದಾರೆ.
ಇದನ್ನೂ ಓದಿ: ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!
ಟ್ರಂಪ್ ತೆರಿಗೆ ಯುದ್ಧ
ತಮ್ಮ ದೇಶದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರುವ ರಾಷ್ಟ್ರಗಳ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಮಂಗಳವಾರದಿಂದ ಮೆಕ್ಸಿಕೋ ಹಾಗೂ ಕೆನಡಾದ ಮೇಲೆ ಜಾರಿಯಾಗಿದೆ. ಕಳೆದ ತಿಂಗಳೇ ಈ ನೀತಿ ಜಾರಿಯಾಗಿತ್ತಾದರೂ, ಎರಡೂ ದೇಶಗಳು ಮಾತುಕತೆಗೆ ಮುಂದಾದ ಕಾರಣ ಅದಕ್ಕೆ ಟ್ರಂಪ್ ಒಂದು ತಿಂಗಳ ತಡೆ ನೀಡಿದ್ದರು. ಆ ತಡೆ ಇದೀಗ ತೆರವಾಗಿದ್ದು ಮಂಗಳವಾರದಿಂದಲೇ ಶೇ.25ರಷ್ಟು ಹೆಚ್ಚುವರಿ ತೆರಿಗೆ ಜಾರಿಯಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಫೆಬ್ರವರಿಯಲ್ಲೇ ತೆರಿಗೆ ಘೋಷಣೆಯಾಗಿತ್ತಾದರೂ, ಒಂದು ತಿಂಗಳು ತಡವಾಗಿ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಹಸು ಭಾರತದ್ದು; ಆದ್ರೆ ಇಲ್ಲಿರೋ ವಿಶ್ವದ ಅತಿದೊಡ್ಡ ಕೋಣ ಎಲ್ಲಿಯದ್ದು ಗೊತ್ತಾ?!
