ಶಿಕಾಗೋ [ಮಾ.17]: ವಿಶ್ವಾದ್ಯಂತ 6000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್‌ ‘ವಿಶ್ವದ ದೊಡ್ಡಣ್ಣ’ ಖ್ಯಾತಿಯ ಅಮೆರಿಕದಲ್ಲೂ ಭಾರಿ ಭೀತಿ ಹುಟ್ಟಿಸಿದೆ. ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೂ ಶಾಲೆಗಳು ಬಂದ್‌ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಶಾಪಿಂಗ್‌ ಮಾಲ್‌ಗಳಿಗೆ ತೆರಳಿ ಅಗತ್ಯಕ್ಕಿಂತ ಅಧಿಕ ಪ್ರಮಾಣದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದರಿಂದ ಮಾಲ್‌ಗಳು ಖಾಲಿಯಾಗಿವೆ.

ಅಮೆರಿಕ ಸರ್ಕಾರ ಅಧಿಕೃತವಾಗಿ ಬಂದ್‌ಗೆ ಯಾವುದೇ ಆದೇಶ ಹೊರಡಿಸಿಲ್ಲ. ಆದರೆ ಆಯಾ ರಾಜ್ಯಗಳ ಗವರ್ನರ್‌ ಹಾಗೂ ಮೇಯರ್‌ಗಳು ಅಘೋಷಿತ ಬಂದ್‌ಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಅಮೆರಿಕದ ಆರೋಗ್ಯ ಇಲಾಖೆ 50ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಮತ್ತೊಂದೆಡೆ, ಕನಿಷ್ಠ 14 ದಿನಗಳ ಕಾಲ ದೇಶವನ್ನೇ ಬಂದ್‌ ಮಾಡಬೇಕು ಎಂದು ತಜ್ಞರೊಬ್ಬರು ಸಲಹೆ ಮಾಡಿದ್ದಾರೆ.

ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ...

ಜನರು ಭೀತಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಪರಿಸ್ಥಿತಿಯ ಮೇಲೆ ಸರ್ಕಾರ ಪ್ರಚಂಡ ನಿಯಂತ್ರಣ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಬಡ್ಡಿ ದರ ಬಹುತೇಕ ಶೂನ್ಯಕ್ಕೆ: ಕೊರೋನಾ ವೈರಸ್‌ನಿಂದ ಆರ್ಥಿಕತೆಯಲ್ಲಿ ತೀವ್ರ ಅಲ್ಲೋಲ ಕಲ್ಲೋಲವಾಗುವುದನ್ನು ತಪ್ಪಿಸಲು ಅಮೆರಿಕದ ಫೆಡರಲ್‌ ರಿಸವ್‌ರ್‍ ಬ್ಯಾಂಕ್‌ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಬಹುತೇಕ ಶೂನ್ಯಕ್ಕಿಳಿಸಿದೆ. ಬಡ್ಡಿ ದರವನ್ನು 0ಯಿಂದ ಶೇ.0.25ಕ್ಕೆ ನಿಗದಿ ಮಾಡಿದೆ. ಇದೇ ವೇಳೆ, ಬಾಂಡ್‌ 700 ಬಿಲಿಯನ್‌ ಡಾಲರ್‌ (51 ಲಕ್ಷ ಕೋಟಿ ರು.) ಮೊತ್ತದ ಬಾಂಡ್‌ಗಳನ್ನು ಖರೀದಿಸುವುದಾಗಿ ಹೇಳಿದೆ.