ಕೊರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ
ಕಲಬುರಗಿ ಸಂಸದ ಡಾ. ಉಮೇಶ ಜಾಧವರಿಂದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಭೇಟಿ/ ಈಗಾಗಲೇ ದೆಹಲಿಯಿಂದ ರವಾನೆಯಾಗಿವೆ ಕೊರೋನಾ ಸೋಂಕು ಪತ್ತೆಗೆ ಅಗತ್ಯವಿರುವ ರೀ ಏಜಂಟ್‍ಗಳು/ ಎಲ್ಲವೂ ಅಂದುಕೊಂಡತೆ ನಡೆದಲ್ಲಿ ಮಾ. 18 ರ ಬುಧವಾರದಿಂದಲೇ ಕಲಬುರಗಿಯಲ್ಲಿ ಕೊರೋನಾ ಸೋಂಕು ಪತ್ತೆ ಆರಂಭ
ಕಲಬುರಗಿ(ಮಾ. 16) ಕೊರೋನಾ ಭೀತಿ ಹೆಚ್ಚಿರುವ ಕಲಬುರಗಿಯಲ್ಲೇ ಸೋಂಕಿತರು ಕಂಡಾಗ ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊರೋನಾ ಸೋಂಕು ಪತ್ತೆಯ ಕೋವಿದ್- 19 ಪರೀಕ್ಷೆ ನಡೆಸುವಂತಹ ಅತಾಧುನಿಕ ಲ್ಯಾಬೋರೋಟರಿ ಕಲಬುರಗಿಯ ಜಿಮ್ಸ್‍ನಲ್ಲೇ ಮಾ. 18 ಬುಧವಾರದಿಂದ ಕಾರ್ಯಾರಂಭಿಸಲಿದೆ.
ಇದರಿಂದಾಗಿ ಸೋಂಕಿತರು ತಮಗೆ ಕೊರೋನಾ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕಕ್ಕೊಳಗಾಗಿ 2, 3 ದಿನ ಕಾಯುವ ಅಗತ್ಯವಿಲ್ಲ, ಸರಾಸರಿ 2 ರಿಂದ 3 ಗಂಟೆಯೊಳಗಾಗಿಯೇ ಸೋಂಕಿನ ಅಸ್ತಿತ್ವದ ಕುರಿತಂತೆ ಈ ಪ್ರಯೋಗಾಲಯ ವರದಿ ನೀಡಲಿದೆ. ಇದು ಕಲಬುರಗಿ ಜೊತೆಗೇ ಕಲ್ಯಾಣ ಕರ್ನಾಟಕಕ್ಕೆ ಅನುಕೂಲವಾದಂತಾಗಿದೆ.
ಎಂಟಕ್ಕೆ ಏರಿದ ಕರ್ನಾಟಕದ ಕೊರೋನಾ ಪೀಡಿತರ ಸಂಖ್ಯೆ
ಕಲಬುರಗಿಯಲ್ಲೇ ಕೊರೋನಾ ಸೋಂಕಿನ ಮೊದಲ ಸಾವು ದಾಖಲಾಗಿದ್ದು ಇದು ದೇಶದಲ್ಲೇ ಮೊದಲ ಬಲಿಯಾಯ್ತು. ಜನ ಕಂಗಾಲಗಿದ್ದಾರೆ, ತಕ್ಷಣ ಲ್ಯಾಬ್ ಇಲ್ಲೇ ಮಂಜೂರು ಮಾಡಬೇಕು, ಜಿಮ್ಸ್‍ನಲ್ಲಿ ಇರುವ ವೈರಾಣು ಪತ್ತೆ ಲ್ಯಾಬ್‍ಗೆ ಅಗತ್ಯ ರಿ ಏಜಂಟ್‍ಗಳನ್ನು ಕೊಟ್ಟು ಕೊರೋನಾ ಸೋಂಕು ಪತ್ತೆಯ ಕೋವಿದ್- 19 ಪರೀಕ್ಷೆಗೂ ಅನುಮತಿಸಿರಿ ಎಂದು ಇಲ್ಲಿನ ಸಂಸದ ಡಾ. ಉಮೇಶ ಜಾಧವ್ ಸೋಮವಾರ ಕೇಂದ್ರ ಆರೋಗ್ಯ ಸಚಿವರನ್ನು ಕೋರಿದ್ದರು.
ಸಂಸದ ಡಾ. ಜಾಧವ್ ಭೇಟಿ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿರುವ ಆರೋಗ್ಯ ಸಚಿವ ಹರ್ಷವರ್ಧನ ಅವರು ಅಗತ್ಯ ರಿ ಏಜೆಂಟ್ ಹಾಗೂ ಪರವಾನಿಗಳ ಸಮೇತ ಎಲ್ಲವನ್ನು ಇಲ್ಲಿಗೆ ರವಾನಿಸಿದ್ದಾರೆ. ಹೀಗಾಗಿ ಮಾ. 18 ರ ಬುಧವಾರದಿಂದ ಕಲಬುರಗಿಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಡಾ. ಜಾಧವ್ ಕನ್ನಡಪ್ರಭ ಜೊತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಮಾ. 15 ರ ಭಾನುವಾರವಷ್ಟೇ 'ಕನ್ನಡಪ್ರಭ' ಕೊರೋನಾ ಭೀತಿಯ ಕಲಬುರಗಿಯಲ್ಲಿಲ್ಲ ಸೋಂಕು ಪತ್ತೆ ಪ್ರಯೋಗಾಲಯ ಎಂದು ವಿಶೇಷ ವರದಿ ಮಾಡಿ ಆಡಳಿತದ, ಜನನಾಯಕರ ಗಮನ ಸೆಳೆದಿತ್ತು. ವರದಿಯ ನಂತರ ಎಚ್ಚೆತ್ತ ಜನನಾಯಕರು, ಆಡಳಿತದ ಹಲವು ಹಂತಗಳಲ್ಲಿ ತೀವ್ರ ಕೆಲಸ ನಡೆದಿದ್ದಲದೆ ಕೇಂದ್ರವೂ ಸಹ ಕಲಬುರಗಿ ಬೇಡಿಕೆಗೆ ಸ್ಪಂದಿಸಿದಂತಾಗಿದೆ.
ಇಲ್ಲಿನ ಕಲಬುರಗಿ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಈಗಾಗಲೇ ಸುಸಜ್ಜಿತವಾದಂತಹ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳಿಂದ ಕೂಡಿದಂತಹ ವಿಆರ್‍ಡಿಎಲ್ ಲ್ಯಾಬ್ (ರಿಯಲ್ ಟೈಮ್ ಪಿಸಿಆರ್ ಯಂತ್ರ) ಇದೆ. ತರಬೇತಿ ಪಡೆದ ಸಿಬ್ಬಂದಿಯೂ ಇಲ್ಲಿದೆ. ಇದಕ್ಕೆ ಚಿಎಚ್‍ಎಂಆರ್ ಹಾಗೂ ಐಸಿಎಂಆರ್ ರೀಏಜೆಂಟ್‍ಗಳ ಅಗತ್ಯವಿದೆ. ಇದಾದಲ್ಲಿ ಜಿಮ್ಸ್ ವಿಆರ್‍ಡಿಎಲ್ ಲ್ಯಾಬ್ ಕೋವಿದ್- 19 ಪತ್ತೆ ಮಾಡಬಹುದಾಗಿದೆ ಎಂದು ಡಾ. ಜಾಧವ್ ತಮ್ಮ ಪತ್ರದಲ್ಲಿ ನಮೂದಿಸಿ ಕೇಂದ್ರ ಸಚಿವರ ಗಮನ ಸೆಳೆದಿದ್ದರು. ಇದಲ್ಲದೆ ಇಂಟಿಗ್ರೆಟೆಡ್ ಡಿಸೀಜ್ ಸರ್ವೇಲನ್ಸ್ ಯೋಜನೆಯ ನಿರ್ದೇಶಕರೂ ಈ ಲ್ಯಾಬ್ ಆರಂಭಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು ಕೋರಿದ್ದರು.
ಸಂಸದ ಡಾ. ಜಾಧವ್ ಟ್ವಿಟ್ ಸಂದೇಶ: ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಪತ್ತೆ ಹಚ್ಚುವ ಆರ್ ಟಿ ಪಿಸಿರ್ಆ ಟೆಸ್ಟ್ ಲ್ಯಾಬ್ ( ವಿಆರ್‍ಡಿಎಲ್ ಲ್ಯಾಬ್) ಮಾ. 18 ರ ಬುಧವಾರದೊಳಗಾಗಿ ಕಾರ್ಯಾರಂಭ ಮಾಡಲಿದೆ. ಲ್ಯಾಬ್ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಇಂದು ಭೇಟಿ ಮಾಡಿ ಪ್ರಸ್ತಾಪಿಸಿದ್ದೇನೆ. ಹಾಗೆಯೇ ನವದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದು, ಲ್ಯಾಬ್ ಗೆ ಸಂಬಂಧಪಟ್ಟ ಪರಿಕರಗಳು ಹಾಗೂ ರಾಸಾಯನಿಕ ವಸ್ತುಗಳನ್ನು ಕಳುಹಿಸಲಾಗಿದೆ. ಮಾ. 17 ರೊಳಗೆ ಕಲಬುರಗಿಯಲ್ಲೇ ಕೇಂದ್ರ ತೆರೆಯಲಿದೆ ಎಂದು ತಿಳಿಸಿದ್ದಾರೆ.