ಬಹುಶಃ ಜಗತ್ತಿನ ಮಿಲಿಟರಿ ತಂತ್ರಜ್ಞಾನದಲ್ಲಿ ಇಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಇಸ್ರೇಲ್‌ನ ಐರನ್‌ ಡೋಮ್‌ ವ್ಯವಸ್ಥೆ. ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಉಡಾಯಿಸಿದ್ದ ಬಹುತೇಕ ರಾಕೆಟ್‌ಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಿದ ಖ್ಯಾತಿ ಐರನ್‌ ಡೋಮ್‌ನದ್ದು. ಸ್ವತಃ ಇಸ್ರೇಲ್‌ ಹೇಳುವಂತೆ ಇದು ಶೇ. 90ರಷ್ಟು ಪರಿಣಾಮಕಾರಿ.

ನವದೆಹಲಿ (ಅ.13): ಐರನ್ ಡೋಮ್ ರಕ್ಷಣಾ ವ್ಯವಸ್ಥೆಯನ್ನು ಮರುಪೂರಣಗೊಳಿಸಲು ಇಂಟರ್‌ಸೆಪ್ಟರ್‌ಗಳು ಸೇರಿದಂತೆ ಹೆಚ್ಚುವರಿ ಮಿಲಿಟರಿ ಸಹಾಯವನ್ನು ತನ್ನ ಆಡಳಿತವು ಈಗಾಗಲೇ ಕಳುಹಿಸಲು ಪ್ರಾರಂಭಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್ ಇತ್ತೀಚೆಗೆ ಹೇಳಿದ್ದರು. ಹಮಾಸ್‌ನ ದಾಳಿಯಲ್ಲಿ ಒಳಬರುವ ರಾಕೆಟ್‌ಗಳನ್ನು ಪತ್ತೆಹಚ್ಚಲು ಮತ್ತು ನಂತರ ಅವುಗಳನ್ನು ಪ್ರತಿಬಂಧಿಸಲು ಇಸ್ರೇಲ್ ಹಲವು ವರ್ಷಗಳಿಂದ ಐರನ್‌ ಡೋಮ್‌ ಎನ್ನುವ ರಕ್ಷಣಾ ವ್ಯವಸ್ಥೆಯನ್ನು ಬಳಸುತ್ತಿದೆ. ಇಸ್ರೇಲ್‌ನ ಐರನ್‌ ಡೋಮ್‌ ವ್ಯವಸ್ಥೆ ಅಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ವಿವರ ಇಲ್ಲಿದೆ. ಐರನ್‌ ಡೋಮ್‌ ವ್ಯವಸ್ಥೆ ಎನ್ನುವುದು ಇಸ್ರೇಲ್‌ನತ್ತ ಬರುವ ರಾಕೆಟ್‌ಅನ್ನು ಪತ್ತೆ ಮಾಡುವುದು ಮಾತ್ರವಲ್ಲದೆ, ರಾಕೆಟ್‌ ಹೋಗುತ್ತಿರುವ ಮಾರ್ಗವನ್ನು ಪರಿಶೀಲಿಸುತ್ತದೆ. ಹಾಗೇನಾದರೂ ಇದರಿಂದ ಜನವಸತಿ ಪ್ರದೇಶಕ್ಕೆ ಅಪಾಯವಿದ್ದಲ್ಲಿ ಯಾರ ಸೂಚನೆಗೂ ಕಾಯದೇ ಸ್ವತಃ ತಾನೇ ಇಂಟರ್‌ಸೆಪ್ಟರ್‌ ರಾಕೆಟ್‌ ಉಡಾಯಿಸಿ ಇದನ್ನು ಆಕಾಶ ಮಾರ್ಗದಲ್ಲಿಯೇ ಹೊಡೆದು ಹಾಕುತ್ತದೆ. ಈ ವ್ಯವಸ್ಥೆಯು ಒಳಬರುವ ರಾಕೆಟ್, ಅದರ ವೇಗ ಮತ್ತು ಅದರ ದಿಕ್ಕನ್ನು ಪತ್ತೆಹಚ್ಚುವ ರಾಡರ್‌ನೊಂದಿಗೆ ಸಜ್ಜಾಗಿ ಇರುತ್ತದೆ. ನಿಯಂತ್ರಣ ಕೇಂದ್ರವು ರಾಕೆಟ್ ಇಸ್ರೇಲಿ ಪಟ್ಟಣಗಳಿಗೆ ಅಪಾಯವನ್ನುಂಟುಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಾಚಾರ ಮಾಡುತ್ತದೆ.

ಹಾಗೇನಾದರೂ ಒಳಬರುವ ರಾಕೆಟ್‌ನಿಂದ ಇಸ್ರೇಲ್‌ನ ಯಾವುದೇ ಪಟ್ಟಣಕ್ಕಾಗಲಿ, ಜನವಸತಿ ಪ್ರದೇಶಕ್ಕಾಗಲಿ ಅಪಾಯವಿಲ್ಲ ಎಂದಾದಲ್ಲಿ, ಐರನ್‌ ಡೋಮ್‌ ಅಂಥಾ ರಾಕೆಟ್‌ಗಳನ್ನು ಖಾಲಿ ಮೈದಾನದಲ್ಲಿ ಲ್ಯಾಂಡ್‌ ಆಗಲು ಅವಕಾಶ ನೀಡುತ್ತದೆ. ಆದರೆ, ರಾಕೆಟ್‌ನಿಂದ ಏನಾದರೂ ಅಪಾಯವಿದ್ದಲ್ಲಿ, ಇದೇ ಐರನ್‌ ಡೋಮ್‌ನ ಕ್ಷಿಪಣಿ ದಾಳಿ ಘಟಕವು, ಕ್ಷಿಪಣಿಯನ್ನು ಉಡಾಯಿಸಿ ಅಂಥಾ ರಾಕೆಟ್‌ಅನ್ನು ಆಕಾಶದಲ್ಲಿಯೇ ಹೊಡೆದುಹಾಕುತ್ತದೆ. ಇಂಥ ಒಂದೊಂದು ಲಾಂಚರ್‌ನಲ್ಲಿ 20 ಇಂಟರ್‌ಸೆಪ್ಟರ್‌ ಕ್ಷಿಪಣಿಗಳು ಇರುತ್ತದೆ. 4 ರಿಂದ 70 ಕಿಲೋಮೀಟರ್‌ ವ್ಯಾಪ್ತಿಯ ನಗರ ಪ್ರದೇಶಗಳಿಗೆ ಗುರಿ ಮಾಡಿ ದಾಳಿ ಮಾಡುವ ರಾಕೆಟ್‌ಗಳನ್ನು ಉಡಾಯಿಸುವ ಸಲುವಾಗಿ ಐರನ್‌ ಡೋಮ್‌ಅನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ, ತಜ್ಞರ ಪ್ರಕಾರ ಇದನ್ನೀಗ ಇಸ್ರೇಲ್‌ ಇನ್ನಷ್ಟು ವಿಸ್ತಾರ ಮಾಡಿದೆ.

ಇದನ್ನು ಅಭಿವೃದ್ಧಿ ಮಾಡಿದ್ದೇಕೆ: ಈ ವ್ಯವಸ್ಥೆಯನ್ನು ಇಸ್ರೇಲಿ ರಕ್ಷಣಾ ತಂತ್ರಜ್ಞಾನ ಕಂಪನಿ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿದೆ. ಯುನೈಟೆಡ್ ಸ್ಟೇಟ್ಸ್ 200 ಮಿಲಿಯನ್‌ ಡಾಲರ್‌ ಅನುದಾನದೊಂದಿಗೆ ಯೋಜನೆಗೆ ಬೆಂಬಲಿಸಿತ್ತು. 2006 ರಲ್ಲಿ ಲೆಬನಾನ್‌ ಹೆಜ್ಬುಲ್ಲಾ ಜೊತೆಗಿನ ಯುದ್ಧದ ಸಮಯದಲ್ಲಿ ರಾಕೆಟ್ ದಾಳಿಗಳನ್ನು ಎದುರಿಸಲು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಯಿತು. 2011ರಲ್ಲಿ ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿತ್ತು. ಇನ್ನು ಯುದ್ಧಹಡಗುಗಳು ಮತ್ತು ಸಮುದ್ರ-ಆಧಾರಿತ ಸ್ವತ್ತುಗಳನ್ನು ರಕ್ಷಿಸಲು ಐರನ್ ಡೋಮ್‌ನ ನೌಕಾ ಆವೃತ್ತಿಯನ್ನು 2017ರಿಂದ ನಿಯೋಜಿಸಲಾಗಿದೆ. ಇಸ್ರೇಲ್‌ನ ಪ್ರತಿಬಂಧಕ ವ್ಯವಸ್ಥೆಗಳು ರಾಕೆಟ್‌ಗಳನ್ನು ಹೊಡೆದುರುಳಿಸಲು ಸಾಕಷ್ಟು ಮಿಲಿಯನ್‌ ಹಣವನ್ನು ಖರ್ಚು ಮಾಡುತ್ತದೆ. ದೇಶವು ಪ್ರಸ್ತುತ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ತಟಸ್ಥಗೊಳಿಸಲು ಲೇಸರ್-ಆಧಾರಿತ ವ್ಯವಸ್ಥೆಯನ್ನು ಪ್ರತಿ ಇಂಟರ್‌ಸೆಪ್ಟರ್‌ಗೆ 2 ಡಾಲರ್‌ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ.

ಐರನ್ ಡೋಮ್ ಪರಿಣಾಮಕಾರಿಯಾಗಿದೆಯೇ?: ಐರನ್ ಡೋಮ್ 90 ಪ್ರತಿಶತ ಪರಿಣಾಮಕಾರಿ ಎಂದು ಸ್ವತಃ ಇಸ್ರೇಲ್ ಹೇಳಿಕೊಂಡಿದೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಅಧಿಕಾರಿಗಳು ಕೂಡ ಇದನ್ನು ಖಚಿತಪಡಿಸಿದ್ದಾರೆ. ಇನ್ನು ಮಾಡರ್ನ್ ವಾರ್ ಇನ್ಸ್ಟಿಟ್ಯೂಟ್ ಕೂಡ ರಾಕೆಟ್‌ ದಾಳಿಯನ್ನು ತಡೆಯುವಲ್ಲಿ ಇದು ಬಹಳ ಪರಿಣಾಮಕಾರಿ ಎಂದು ಹೇಳಿದೆ. ಕಳೆದ ಶನಿವಾರ ಹಮಾಸ್‌ನಿಂದ ಹಠಾತ್ ದಾಳಿಯ ವೇಳೇ ಹೆಚ್ಚಿನ ರಾಕೆಟ್‌ಗಳನ್ನು ಐರನ್‌ ಡೋಮ್‌ ಉಡಾಯಿಸಲು ಯಶಸ್ವಿಯಾಗಿದೆ. "ಐರನ್ ಡೋಮ್ ಅನ್ನು ನಿರ್ವಹಣೆ ಮಾಡುವ ವೆಚ್ಚ ತುಂಬಾ ಹೆಚ್ಚು" ಎಂದು ಮಾಡರ್ನ್ ವಾರ್ ಇನ್ಸ್ಟಿಟ್ಯೂಟ್ ಹೇಳಿದೆ. ಇದರರ್ಥ ಐರನ್ ಡೋಮ್ ಒಂದು ಹಂತದವರೆಗೆ ರಾಕೆಟ್‌ಅನ್ನು ನಿರ್ಬಂಧಿಸುವ ವ್ಯವಸ್ಥೆ ಹೊಂದಿದೆ. ಇದು ನಿರ್ದಿಷ್ಟ ಸಂಖ್ಯೆಯ ರಾಕೆಟ್‌ಗಳನ್ನು ಮಾತ್ರ ಪ್ರತಿಬಂಧಿಸುತ್ತದೆ. 2021 ರ ಫೋರ್ಬ್ಸ್ ವರದಿಯ ಪ್ರಕಾರ, ಆ ಸಂಖ್ಯೆಯನ್ನು ಮೀರಿದರೆ, ಉಳಿದ ರಾಕೆಟ್‌ಗಳು ಪ್ರದೇಶದ ಮೇಲೆ ದಾಳಿ ಮಾಡುತ್ತದೆ.

ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್

ಬೇರೆ ಯಾವ ದೇಶಗಳಲ್ಲಿದೆ ಐರನ್‌ ಡೋಮ್: ಐರನ್ ಡೋಮ್ ಈಗ ಅಂತರಾಷ್ಟ್ರೀಯ ಗಮನ ಸೆಳೆದಿದೆ. 2020 ರಲ್ಲಿ ಯುಎಸ್ ಸೈನ್ಯಕ್ಕೆ ಎರಡು ಐರನ್ ಡೋಮ್ ಬ್ಯಾಟರಿಗಳನ್ನು ವಿತರಿಸಿದೆ ಎಂದು ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಹೇಳಿದೆ. ಇಸ್ರೇಲ್ ಇಲ್ಲಿಯವರೆಗೆ ಕೈವ್‌ಗೆ ಮಾನವೀಯ ಬೆಂಬಲ ಮತ್ತು ನಾಗರಿಕ ರಕ್ಷಣೆಯನ್ನು ಮಾತ್ರ ಒದಗಿಸಿದ್ದರೂ ಉಕ್ರೇನ್ ರಷ್ಯಾದೊಂದಿಗಿನ ತನ್ನ ಯುದ್ಧದಲ್ಲಿ ಐರನ್‌ ವ್ಯವಸ್ಥೆ ನೀಡುವಂತೆ ಕೇಳಿಕೊಂಡಿದೆ.

ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು