* ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯಿಂದಲೇ ಎಚ್ಚರಿಕೆ* 1-2 ವರ್ಷದಲ್ಲಿ ಅಮೆರಿಕಕ್ಕೆ ಮತ್ತೆ ಅಲ್‌ಖೈದಾ ದಾಳಿ ಭೀತಿ* ಆಫ್ಘನ್ನಲ್ಲಿ ನೆಲೆ ಸ್ಥಾಪಿಸಿ ಉಗ್ರರು ದಾಳಿ ನಡೆಸುವ ಸಂಭವ

ವಾಷಿಂಗ್ಟನ್‌(ಸೆ.16): 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ನಡೆಸಿ ಇಡೀ ವಿಶ್ವವನ್ನೇ ನಡುಗಿಸಿದ್ದ ಅಲ್‌ಖೈದಾ ಉಗ್ರರು, ಇನ್ನು 1 ಅಥವಾ 2 ವರ್ಷದಲ್ಲಿ ಮತ್ತೆ ಅಮೆರಿಕದ ಮೇಲೆ ದಾಳಿ ನಡೆಸುವ ಅಪಾಯ ಇದೆ ಎಂದು ಸ್ವತಃ ಅಮೆರಿಕದ ಗುಪ್ತಚರ ಪಡೆಗಳು ಎಚ್ಚರಿಕೆ ನೀಡಿವೆ. ಅಷ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಯುದ್ಧ ಮಾಡಿ ಸೋತು ಸುಣ್ಣವಾಗಿ ಇತ್ತೀಚೆಗೆ ಅಮೆರಿಕನ್‌ ಯೋಧರು ತವರಿಗೆ ಮರಳಿದ ಬೆನ್ನಲ್ಲೇ ಹೊರಬಿದ್ದಿರುವ ಈ ಎಚ್ಚರಿಕೆ ಅಮೆರಿಕ ಸೇರಿದಂತೆ ಇಡೀ ವಿಶ್ವಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಹೊರಹೊಮ್ಮಿದೆ.

ತಾಲಿಬಾನ್‌ ತೆಕ್ಕೆಗೆ ಅಫ್ಘಾನಿಸ್ತಾನ ಹೋಗಿರುವುದು ಅಲ್‌ ಖೈದಾ ಉಗ್ರಗಾಮಿ ಸಂಘಟನೆಗೆ ಹಬ್ಬವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಫ್ಘಾನಿಸ್ತಾನವನ್ನೇ ತನ್ನ ನೆಲೆಯನ್ನಾಗಿ ಮಾಡಿಕೊಳ್ಳಲಿರುವ ಅಲ್‌ಖೈದಾ, ಅಮೆರಿಕದಲ್ಲಿ ಮುಂದಿನ ವರ್ಷ ದೊಡ್ಡ ಭಯೋತ್ಪಾದಕ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆ| ಜ| ಸ್ಕಾಟ್‌ ಬ್ಯಾರಿಯರ್‌ ಹೇಳಿದ್ದಾರೆ.

ಗುಪ್ತಚರ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಅಂದಾಜಿನ ಪ್ರಕಾರ ಅಲ್‌ಖೈದಾ ಇನ್ನು 1 ಅಥವಾ 2 ವರ್ಷದಲ್ಲಿ ಅಫ್ಘಾನಿಸ್ತಾನದಲ್ಲಿ ನೆಲೆ ನಿರ್ಮಿಸಿಕೊಂಡು ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿನ ಉಗ್ರ ಚಟುವಟಿಕೆ ಮೇಲೆ ಕಣ್ಣಿಡಲು ನಮ್ಮೆಲ್ಲ ಮೂಲಗಳ ಜತೆ ಸಂಪರ್ಕ ಸಾಧಿಸಲು ಚಿಂತಿಸುತ್ತಿದ್ದೇವೆ’ ಎಂದು ಹೇಳಿದರು.

ಈಗಾಗಲೇ ಅಮೆರಿಕದ ಗುಪ್ತಚರರು ಆಫ್ಘನ್‌ನಲ್ಲಿ ಉಗ್ರ ಚಟುವಟಿಕೆಗಳನ್ನು ಗಮನಿಸುತ್ತಿದ್ದಾರೆ. ಈ ಸಂಘಟನೆಗಳು ತಮ್ಮ ಚಟುವಟಿಕೆಗೆ ಮರುಜೀವ ನೀಡಲು ಯತ್ನಿಸುತ್ತಿವೆ ಎಂದು ಇದೇ ವೇಳೆ ಅಮೆರಿಕ ಗುಪ್ತಚರ ಸಂಸ್ಥೆ ‘ಸಿಐಎ’ನ ಉಪ ನಿರ್ದೇಶಕ ಡೇವಿಡ್‌ ಕೊಹೇನ್‌ ಕೂಡ ಹೇಳಿದರು. ತನ್ಮೂಲಕ ಬ್ಯಾರಿಯರ್‌ ಹೇಳಿಕೆಯನ್ನು ಅನುಮೋದಿಸಿದರು.

ಇತ್ತೀಚೆಗೆ ಅಷ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರಿಗೆ ಅಲ್‌ಖೈದಾ ನಾಯಕರು ಹಲವು ಬಾರಿ ಶುಭಾಶಯ ಕೋರಿದ್ದರು.

2001ರಲ್ಲಿ ಒಸಾಮಾ ಬಿನ್‌ ಲಾಡೆನ್‌ ನೇತೃತ್ವದ ಅಲ್‌ಖೈದಾ ಉಗ್ರರು ಎರಡು ವಿಮಾನಗಳನ್ನು ಅಪಹರಿಸಿ ಅವುಗಳನ್ನು ವಿಶ್ವ ವಾಣಿಜ್ಯ ಸಂಸ್ಥೆಯ ಕಟ್ಟಡಕ್ಕೆ ಡಿಕ್ಕಿ ಹೊಡೆಸಿದ್ದರು. ಘಟನೆಯಲ್ಲಿ 3000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಘಟನೆ ತರುವಾಯವೇ ಅಮೆರಿಕವು ಅಷ್ಘಾನಿಸ್ತಾನದ ಉಗ್ರರ ಮೇಲೆ ದಾಳಿ ನಡೆಸಿತ್ತು. ಬಳಿಕ 20 ವರ್ಷ ಅಲ್ಲೇ ನೆಲೆ ನಿಂತು ಯುದ್ಧ ನಡೆಸಿತ್ತು.

2001ರ ದಾಳಿಯ ಕರಾಳ ನೆನಪು

2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳಿಗೆ ಅಲ್‌ಖೈದಾ ಉಗ್ರರು 2 ವಿಮಾನಗಳನ್ನು ಡಿಕ್ಕಿ ಹೊಡೆಸಿ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಸುಮಾರು 3000 ಮಂದಿ ಸಾವನ್ನಪ್ಪಿದ್ದರು. ನಂತರ ಆಫ್ಘನ್‌ನಲ್ಲಿ ಉಗ್ರರ ವಿರುದ್ಧ ಆರಂಭಿಸಿದ್ದ ಕಾರ್ಯಾಚರಣೆಯನ್ನು ಅಮೆರಿಕ ಸೇನೆ ಇತ್ತೀಚೆಗಷ್ಟೇ ಕೊನೆಗೊಳಿಸಿತ್ತು.