ಟೆಹ್ರನ್(ಜ.03): ಇರಾಕ್ ರಾಜಧಾನಿ ಬಾಗ್ದಾದ್’ನಲ್ಲಿ ಅಮೆರಿಕ ನಡೆಸಿದ ಏರ್ ಸ್ಟ್ರೈಕ್’ನಲ್ಲಿ ಇರಾನ್ ಸೇನೆಯ ಉನ್ನತ ಕಮಾಂಡರ್ ಖಾಸೀಮ್ ಸೋಲೆಮನಿ ಸಾವನ್ನಪ್ಪಿದ್ದು, ಇರಾನ್-ಅಮೆರಿಕ ನಡುವೆ ಯುದ್ಧ ಭೀತಿ ಸೃಷ್ಟಿಸಿದೆ.

ಇರಾನ್’ನ ರೆವಲ್ಯೂಶನರಿ ಗಾರ್ಡ್ಸ್ ಸೇನೆಯ ಉನ್ನತ ಕಮಾಂಡರ್ ಆಗಿದ್ದ ಖಾಸೀಮ್ ಸೋಲೆಮನಿ ಹತ್ಯೆ ಇರಾನ್’ನ್ನು ಕೆರಳಿಸಿದ್ದು, ಅಮೆರಿಕ ಇದಕ್ಕೆ ತಕ್ಕ ಬೆಲೆ ತೆರಲಿದೆ ಎಂದು ಗುಡುಗಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್ ವಿದೇಶಾಂಗ ಸಚಿಬ ಮೊಹ್ಮದ್ ಜಾವೇದ್ ಜರೀಫ್, ನಮ್ಮ ಸೇನಾಧಿಕಾರಿಯ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಅಮೆರಿಕದ ವಿರುದ್ಧ ಗುಡುಗಿರುವ ಆಯತುಲ್ಲಾ ಲಿ ಖಾಮನೇಯ್, ನಮ್ಮ ಕಮಾಂಡರ್ ಹತ್ಯೆ ಮಾಡುವ ಮೂಲಕ ಅಮೆರಿಕ ತನ್ನ ಇತಿಹಾಸದಲ್ಲಿ ಅತ್ಯಂತ ದೊಡ್ಡ ಪ್ರಮಾದವನ್ನು ಎಸಗಿದೆ ಎಂದು ಹರಿಹಾಯ್ದಿದ್ದಾರೆ.

ಅದರಂತೆ ಅಮೆರಿಕದ ಏರ್ ಸ್ಟ್ರೈಕ್ ಖಂಡಿಸಿರುವ ಇರಾನ್ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕಕ್ಕೆ ಯುದ್ಧವೇ ಬೇಕಿದ್ದರೆ ಇರಾನ್ ಸಂಪೂರ್ಣ ಸಿದ್ಧವಾಗಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಭಾರೀ ಬೆಲೆ ತೆರಬೇಕಾಗುತ್ತದೆ: ಹೊಸ ವರ್ಷಕ್ಕೆ ಟ್ರಂಪ್ ವಾರ್ನ್ ಮಾಡಿದ್ಯಾರಿಗೆ?

ಖಾಸೀಮ್ ಸೋಲೆಮನಿ ಹತ್ಯೆಯನ್ನು ಖಂಡಿಸಿ ಬಾಗ್ದಾದ್’ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಈಗಾಗಲೇ ಇರಾನ್ ಪರ ಪ್ರತಿಭಟನಾಕಾರರು ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ತಮ್ಮ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವಡೋನಾಲ್ಡ್ ಟ್ರಂಪ್, ಇರಾನ್’ಗೆ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಧ್ಯಪ್ರಾಚ್ಯಕ್ಕೆ 700ಕ್ಕೂ ಹೆಚ್ಚು ಸೇನಾ ತುಕಡಿಗಳನ್ನು ಅಮೆರಿಕ ಈಗಾಗಲೇ ರವಾನಿಸಿದ್ದು, ಅಮೆರಿಕ-ಇರಾನ್ ನಡುವೆ ಯುದ್ಧ ನಡೆಯುವ ಭೀತಿ ಸೃಷ್ಟಿಸಿದೆ.