ವಾಷಿಂಗ್ಟನ್(ಜ.01): ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್ ಪರ ಪ್ರತಿಭಟನಾಕಾರರು ದಾಳಿ ಮಾಡಿದ್ದು, ಇದಕ್ಕೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯಕ್ಕೆ ಮತ್ತೆ 100 ಸೇನಾ ತುಕಡಿಗಳನ್ನು ಕಳುಹಿಸುವುದಾಗಿ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಪರ ಪ್ರತಿಭಟನಾಕಾರರು ದಾಳಿ ಮಾಡಿದ್ದರು.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಮೆರಿಕದ ವಿರುದ್ಧ ಇರಾನ್ ಕತ್ತಿ ಮಸೆಯುತ್ತಿದೆ ಎಂದು ಹರಿಹಾಯ್ದಿದ್ದಾರೆ.  ಅಲ್ಲದೇ ಅಮೆರಿಕವನ್ನು ಕೆಣಕುವ ಇರಾನ್‌ನ ಯಾವುದೇ ನಡೆಗೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇರಾನ್‌ ಮೇಲೆ ಬಾಂಬ್‌ ದಾಳಿಗೆ ಸಜ್ಜಾಗಿದ್ದ ಟ್ರಂಪ್‌!, ಕೊನೇ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿದ್ದೇಕೆ?

ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು, ಇರಾಕ್‌ನಿಂದ ಅಮೆರಿಕನ್ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೇ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸೋಲೆಮನಿ ಪರ ಘೋಷಣೆ ಕೂಗಿದ್ದರು.