ರಸ್ತೆಬದಿ ಇದ್ದ ನಿಶ್ಯಕ್ತ ವೃದ್ಧನಿಗೆ ನೀರು ಕುಡಿಸಿದ ಪುಟಾಣಿ: ವಿಡಿಯೋ ವೈರಲ್
ಮಕ್ಕಳನ್ನು ದೇವರ ಸಮಾನ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬಳು ಪುಟ್ಟ ಬಾಲಕಿ ಮಾನವೀಯತೆ ಮೆರೆದಿದ್ದಾಳೆ. ತನಗೆ ಯಾವುದೇ ಸಂಬಂಧವೇ ಇಲ್ಲ ವೃದ್ಧರೊಬ್ಬರಿಗೆ ನೆರವಾಗಿದ್ದಾಳೆ.
ಮಕ್ಕಳಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ. ಅವರು ಇದ್ದಿದ್ದನ್ನು ಇದ್ದಂತೆ ಹೇಳುತ್ತಾರೆ. ಬಡವ ಶ್ರೀಮಂತ ಎಂಬ ಭೇದವಿಲ್ಲದೇ ಅವರು ಎಲ್ಲರನ್ನು ಒಂದಾಗಿ ಕಾಣುತ್ತಾರೆ. ಇದೇ ಕಾರಣಕ್ಕೆ ಮಕ್ಕಳನ್ನು ದೇವರ ಸಮಾನ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬಳು ಪುಟ್ಟ ಬಾಲಕಿ ಮಾನವೀಯತೆ ಮೆರೆದಿದ್ದಾಳೆ. ತನಗೆ ಯಾವುದೇ ಸಂಬಂಧವೇ ಇಲ್ಲ ವೃದ್ಧರೊಬ್ಬರಿಗೆ ನೆರವಾಗಿದ್ದಾಳೆ. ರಸ್ತೆ ಬದಿ ಕುಳಿತಿದ್ದ ಅಶಕ್ತ ವೃದ್ಧನಿಗೆ ನೀರು ಕುಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಭಾವುಕ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಒಂದು ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.
ವೃದ್ಧನಿಗೆ ನಿಶ್ಯಕ್ತಿಯಿಂದಾಗಿ ನೆಟ್ಟಗೆ ನಿಲ್ಲಲಾಗುತ್ತಿಲ್ಲ. ಕುಳಿತಿರುವ ವೃದ್ಧ ಒಂದು ಕೈಯನ್ನು ನೆಲಕ್ಕೆ ಒರಗಿಸಿ ದೇಹಕ್ಕೆ ಆಧಾರ ನೀಡಿದ್ದು, ಮತ್ತೊಂದು ಕೈ ಬಲಹೀನವಾಗಿದೆ. ಆದರೆ ಬಾಯಾರಿಕೆಯಾಗುತ್ತಿದ್ದು, ಇದನ್ನು ಗಮನಿಸಿದ ಪುಟ್ಟ ಬಾಲಕಿ ಅಜ್ಜನಿಗೆ ತನ್ನ ಕೈಯಿಂದಲೇ ಬಾಟಲ್ ಮೂಲಕ ನೀರು ಕುಡಿಸುತ್ತಿದ್ದಾಳೆ. ಅಲ್ಲಿ ದೊಡ್ಡವರು ಅನೇಕರಿದ್ದರೂ ಅವರಷ್ಟಕ್ಕೆ ಅವರ ಕೆಲಸದಲ್ಲಿ ಬ್ಯುಸಿಯಾಗಿದ್ದು, ಯಾರೂ ಕೂಡ ವೃದ್ಧನ ನೆರವಿಗೆ ಬಂದಿಲ್ಲ. ಆದರೆ ಈ ಪುಟಾಣಿ ಬಾಲಕಿ ಅಜ್ಜನಿಗೆ ವಾತ್ಸಲ್ಯದಿಂದ ನೀರು ಕುಡಿಸಿ ದೊಡ್ಡತನ ತೋರಿದ್ದಾಳೆ.
ಈ ವಿಡಿಯೋ ನೋಡಿದ ಅನೇಕರು ಬಾಲಕಿಯಈ ನಡತೆಗೆ ಹಾಗೂ ಆಕೆಗೆ ಈ ರೀತಿಯ ಸಂಸ್ಕಾರ ನೀಡಿರುವ ಆಕೆಯ ಪೋಷಕರಿಗೆ ಧನ್ಯವಾದ ತಿಳಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ದಾರಿಬದಿ ವೃದ್ಧ ಕುಳಿತಿದ್ದು, ಬಾಯಾರಿಕೆಯಿಂದ ಬಳಲಿದ ಆತನಿಗೆ ಆಕೆ ನೀರು ಕುಡಿಸುತ್ತಾಳೆ. ಈ ವೇಳೆ ದೂರದಲ್ಲೆಲ್ಲೋ ಇದ್ದ ಆಕೆಯ ತಂದೆ ಅಲ್ಲಿಗೆ ಆಗಮಿಸಿ ವೃದ್ಧನಿಗೆ ಬಾಯ್ ಮಾಡಿ ಹೆಮ್ಮೆಯಿಂದ ಮಗಳನ್ನು ಅಲ್ಲಿಂದ ಕರೆದೊಯ್ಯುತ್ತಾನೆ. ಇಂತಹ ಸುಪುತ್ರಿಯ ಅಪ್ಪನಾಗಿದ್ದಕ್ಕೆ ಅವರು ಹೆಮ್ಮೆಯಿಂದ ಬೀಗುತ್ತಿರುವುದು ಅವರ ಮೊಗದಲ್ಲಿ ಕಾಣಬಹುದಾಗಿದೆ. ಇತ್ತ ವಿಡಿಯೋ ನೋಡಿದ ಅನೇಕರು ಇಷ್ಟು ಎಳೆಯ ಪ್ರಾಯದಲ್ಲೇ ಬಾಲಕಿಯ ಹೃದಯ ವೈಶಾಲ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಇಂದು ಬಹಳ ದುಬಾರಿ ಎನಿಸಿದೆ. ಪರಿಚಿತರೇ ಇಂದು ಕಷ್ಟಕ್ಕೆ ನೆರವಾಗಲು ಹಿಂದೆ ಮುಂದೆ ನೋಡುವ ಕಾಲ ಹೀಗಿರುವಾಗ ಪುಟಾಣಿ ಬಾಲಕಿಯೊಬ್ಬಳು ಈ ಮಾನವೀಯ ಕಾರ್ಯ ಎಲ್ಲರ ಹೃದಯವನ್ನು ಭಾವುಕವಾಗಿಸಿದೆ.