ಕೊರೋನಾಕ್ಕೆ 70 ಕಡೆ ಔಷಧ ಶೋಧ, 3 ಕಡೆ ಪ್ರಯೋಗ| ಯಶಸ್ವಿಯಾದರೂ ಸಿಗಲು 2 ವರ್ಷ ಬೇಕು

ವಾಷಿಂಗ್ಟನ್(ಏ.14)‌: ಜಗತ್ತನ್ನು ಕಂಗೆಡಿಸಿರುವ ಕೊರೋನಾ ವೈರಸ್‌ಗೆ ಜಗತ್ತಿನಾದ್ಯಂತ 70 ಕಡೆ ಔಷಧ ಕಂಪನಿಗಳು ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿವೆ. ಅವುಗಳ ಪೈಕಿ 3 ಕಂಪನಿಗಳು ಕಂಡುಹಿಡಿದ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಹಾಂಗ್‌ಕಾಂಗ್‌ನ ಕ್ಯಾನ್‌ಸಿನೋ ಬಯೋಲಾಜಿಕ್ಸ್‌ ಹಾಗೂ ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಟೆಕ್ನಾಲಜಿ ಸಂಸ್ಥೆಗಳು ಸೇರಿ ಕಂಡುಹಿಡಿದ ಲಸಿಕೆಯ ಪ್ರಯೋಗ 2ನೇ ಹಂತದಲ್ಲಿದೆ. ಜೊತೆಗೆ, ಅಮೆರಿಕದ ಮಾಡರ್ನಾ ಇಂಕ್‌ ಹಾಗೂ ಇನೋವಿಯೋ ಫಾರ್ಮಾಸುಟಿಕಲ್ಸ್‌ ಕಂಪನಿಗಳು ಪ್ರತ್ಯೇಕವಾಗಿ ಕಂಡುಹಿಡಿದ ಔಷಧಗಳೂ ಮನುಷ್ಯನ ಮೇಲಿನ ಪ್ರಯೋಗದ ಹಂತದಲ್ಲಿವೆ. ಇವುಗಳಲ್ಲಿ ಯಾವುದಾದರೂ ಯಶಸ್ವಿಯಾದರೆ ಮುಂದಿನ ವರ್ಷದೊಳಗೆ ಮಾರುಕಟ್ಟೆಗೆ ಬರಲಿದೆ.

ಸಾಮಾನ್ಯವಾಗಿ ಒಂದು ಔಷಧ ಕಂಡುಹಿಡಿದರೆ ಅದು ಎಲ್ಲಾ ಪ್ರಯೋಗಗಳನ್ನೂ ದಾಟಿ ಮಾರುಕಟ್ಟೆಗೆ ಬರಲು 10ರಿಂದ 15 ವರ್ಷ ಹಿಡಿಯುತ್ತದೆ. ಆದರೆ, ಕೊರೋನಾ ಲಸಿಕೆಗೆ ಪ್ರಾಣಿಗಳ ಮೇಲಿನ ಪ್ರಯೋಗದಿಂದ ವಿನಾಯ್ತಿ ನೀಡಲಾಗಿದ್ದು, ಆದಷ್ಟುಬೇಗ ಮಾರುಕಟ್ಟೆಗೆ ತರಲು ಪ್ರಯತ್ನ ನಡೆಯುತ್ತಿದೆ.