* ಅಮೆರಿಕದಲ್ಲಿ ಮುಂದುವರೆದ ಗುಂಡಿನ ದಾಳಿ * ಆರು ಸಾವು, 24 ಮಂದಿಗೆ ಗಾಯ* ಸ್ವಾತಂತ್ರ್ಯೋತ್ಸವ ಮೆರವಣಿಗೆ ಮೇಲೆ ದಾಳಿ

ಹೈಲ್ಯಾಂಡ್‌ ಪಾರ್ಕ್(ಜು.05): ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಸೋಮವಾರ ಚಿಕಾಗೋದ ಹೈಲ್ಯಾಂಡ್‌ ಪಾರ್ಕ್ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಮೆರವಣಿಗೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ಈ ದುರ್ಘಟನೆಯಲ್ಲಿ 6 ಜನ ಸಾವಿಗೀಡಾಗಿದ್ದು, 24 ಜನರು ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಬಂದೂಕನ್ನು ಬಳಸಿ ಆರೋಪಿಯು ಹತ್ತಿರದಲ್ಲಿದ್ದ ಅಂಗಡಿಯ ಮೇಲ್ಛಾವಣಿಯ ಮೇಲೆ ನಿಂತು ಮೆರವಣಿಗೆಯತ್ತ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಆರೋಪಿ ಬಿಳಿ ಅಥವಾ ನೀಲಿ ಬಣ್ಣದ ಟೀಶರ್ಚ್‌ ಧರಿಸಿದ್ದಾನೆ. ಪೊಲೀಸರು ಆತನನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಲೇಕ್‌ಕೌಂಟಿಯ ಪ್ರಮುಖ ಅಪರಾಧ ಕಾರ್ಯಪಡೆಯ ವಕ್ತಾರ ಕ್ರಿಸ್ಟೋಫರ್‌ ಕೊವೆಲ್ಲಿ ಹೇಳಿದ್ದಾರೆ. ಗುಂಡಿನ ದಾಳಿ ನಡೆದ ನಂತರ ಜನರು ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಮೆರಿಕ ಸ್ವಾತಂತ್ರ್ಯ ಪಡೆದ ದಿನವಾದ ಜು.4ರಂದು ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಆರಂಭವಾದ 10 ನಿಮಿಷದಲ್ಲಿ ಬಂದೂಕುದಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯ ನಂತರ ಇಲ್ಲಿರುವುದು ಸುರಕ್ಷಿತವಲ್ಲ. ಮನೆಗಳಿಗೆ ತೆರಳಿ ಎಂದು ಜನರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಸ್ವಾತಂತ್ರ್ಯೋತ್ಸವ ಮೆರವಣಿಗೆಯನ್ನು ರದ್ದುಗೊಳಿಸಿದ್ದಾರೆ.